ಮಡಿಕೇರಿ, ಜೂ. 1: ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದ ನೋವು, ನಲಿವುಗಳಿಗೆ ಸ್ಪಂದಿಸುವ ಮೂಲಕ ಜಾತ್ಯತೀತ ನಿಲುವಿನ ಧ್ವನಿಯಾಗಿ ಕೆಲಸ ಮಾಡುತ್ತಿದೆಯೇ ಹೊರತು ಯಾರ ಧ್ವನಿಯನ್ನೂ ದಮನ ಮಾಡುವ ಕಾರ್ಯಕ್ಕೆ ಮುಂದಾಗಿಲ್ಲವೆಂದು ಸ್ಪಷ್ಟಪಡಿಸಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್. ಟಾಟು ಮೊಣ್ಣಪ್ಪ, ಜನಪರ ಧ್ವನಿಗಳನ್ನು ದಮನ ಮಾಡುವ ಚಾಳಿ ಬಿಜೆಪಿಗೆ ಸೀಮಿತವಾಗಿದೆ ಎಂದು ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಟಾಟು ಮೊಣ್ಣಪ್ಪ, ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿರುವ ಬಿಜೆಪಿ ನಾಯಕರು ತಮ್ಮೊಳಗಿನ ಹುಳುಕು ರಾಜಕಾರಣವನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ 4 ವರ್ಷಗಳಲ್ಲಿ ಎಲ್ಲಾ ವರ್ಗದ ಜನರ ಧ್ವನಿಯಾಗಿ ಆಡಳಿತವನ್ನು ನೀಡಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಸಚಿವರುಗಳೇ ಜೈಲು ಸೇರಿದ್ದನ್ನು ಕೊಡಗಿನ ಬಿಜೆಪಿ ಮಂದಿ ಮರೆತಂತಿದೆÉ ಎಂದು ಟಾಟು ಮೊಣ್ಣಪ್ಪ ಟೀಕಿಸಿದ್ದಾರೆ.

ರಾಜ್ಯಕ್ಕೆ ರೆಸಾರ್ಟ್ ರಾಜಕಾರಣವನ್ನು ಪರಿಚಯಿಸಿದ ಕುಖ್ಯಾತಿಯನ್ನು ಹೊಂದಿರುವ ಬಿಜೆಪಿ ತನ್ನ ಅಧಿಕಾರವಧಿಯ ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ನೀಡಿದ್ದೇ ದೊಡ್ಡ ಸಾಧನೆಯಾಗಿದೆ. ಪಕ್ಷದೊಳಗಿನ ಜಗಳದಿಂದಾಗಿ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದ್ದನ್ನು ಜನರು ಇನ್ನೂ ಮರೆತ್ತಿಲ್ಲ. ತನ್ನ ಆಡಳಿತಾವಧಿಯ ತಪ್ಪುಗಳನ್ನು ಮುಚ್ಚಿಟ್ಟು ಜನಪರÀ ಕಾಂಗ್ರೆಸ್ ಸರಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮತಗಳಿಸಬಹುದೆನ್ನುವ ಹಗಲುಗನಸು ಕಾಣುತ್ತಿರುವ ಬಿಜೆಪಿಗೆ ಈ ಬಾರಿ ಕೊಡಗಿನ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟಾಟು ಮೊಣ್ಣಪ್ಪ ಭವಿಷ್ಯ ನುಡಿದಿದ್ದಾರೆ.