ಮಡಿಕೇರಿ, ಜೂ.1: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ತಲಕಾವೇರಿ- ಭಾಗಮಂಡಲ ಪುಣ್ಯಕ್ಷೇತ್ರಗಳಲ್ಲಿ ಅಷ್ಟಬಂಧ ಬ್ರಹ್ಮಕಲಶ ವಿಧಿ ವಿಧಾನಗಳನ್ನು ನೆರವೇರಿಸಲು ಸಮಿತಿಯೊಂದನ್ನು ಉಸ್ತುವಾರಿ ಸಚಿವರ ನಿರ್ದೇಶನದಂತೆ ರಚಿಸಿರುವದಾಗಿ ಜಿಲ್ಲಾಧಿಕಾರಿಗಳು ಮಾಹಿತಿಯಿತ್ತಿದ್ದರು.

19 ಮಂದಿಯ ಸಮಿತಿಯಲ್ಲಿ ಸುಮಾರು 13 ಸ್ಥಾನಗಳನ್ನು ಒಂದೇ ವರ್ಗದ ಮಂದಿಗೆ ಕಲ್ಪಿಸಿದ್ದು, ಕೇವಲ 1 ಸ್ಥಾನವನ್ನು ಮಾತ್ರ ಗೌಡ ಜನಾಂಗದ ವ್ಯಕ್ತಿಯೊಬ್ಬರಿಗೆ ಒದಗಿಸಲಾಗಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್. ಸೋಮಣ್ಣ ಆರೋಪಿಸಿದ್ದಾರೆ.

ರಾಜರ ಆಳ್ವಿಕೆ ಕಾಲದಿಂದಲೂ ಈ ಪ್ರಮುಖ ಕ್ಷೇತ್ರಗಳಲ್ಲಿ ಸ್ಥಳೀಯ ಎರಡು ಗೌಡ ಕುಟುಂಬಗಳಿಗೆ ಮಾನ್ಯತೆ ನೀಡಿದ್ದು, ದೇವಸ್ಥಾನದ ಆಡಳಿತದಲ್ಲಿಯೂ ಅವಕಾಶ ಕಲ್ಪಿಸಲಾಗಿದೆ. ಆದರೆ ಇದೀಗ ಗೌಡ ಜನಾಂಗದವರನ್ನು ಬ್ರಹ್ಮ ಕಲಶ ಸಮಿತಿಯಲ್ಲಿ ಕಡೆಗಣಿಸಿರುವದು ಖಂಡನಾರ್ಹ. ಇಂತಹ ಕಾರ್ಯಗಳು ಮುಂದುವರೆದಲ್ಲಿ ಸಮಾಜದಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸೋಮಣ್ಣ ಮುನ್ಸೂಚನೆ ನೀಡಿದ್ದಾರೆ.