ಸೋಮವಾರಪೇಟೆ, ಜೂ.1: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದೆ. ಈ ಭಾಗದಲ್ಲಿ ಸುಮಾರು 16 ಕಾಡಾನೆಗಳು ಬೀಡುಬಿಟ್ಟಿದ್ದು, ಜನಸಾಮಾನ್ಯರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗಿದೆ.

ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಂತೆ ಕಾಫಿ ತೋಟ ಹಾಗೂ ಯಡವನಾಡು ಮೀಸಲು ಅರಣ್ಯವೂ ಇದ್ದು, ಅರಣ್ಯದಲ್ಲಿ ಆಹಾರದ ಕೊರತೆಯುಂಟಾಗಿರುವ ದರಿಂದ ಕಾಡಾನೆಗಳು ಕಾಫಿ ತೋಟದೊಳಗೆ ಲಗ್ಗೆಯಿಡುತ್ತಿವೆ.

ಕಾಡಾನೆಗಳ ಹಾವಳಿಯಿಂದ ಕೃಷಿ ನಷ್ಟವಾಗಿದ್ದು, ಇತ್ತೀಚೆಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಸಂಘಟಿಸಿದ್ದರೂ ಸಹ ಆನೆಗಳ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಮುಂದಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ದಿನಂಪ್ರತಿ ಅರಣ್ಯದಿಂದ ತೋಟಕ್ಕೆ ಹಾಗೂ ಕಾಫಿ ತೋಟದಿಂದ ಅರಣ್ಯಕ್ಕೆ ಸಂಚರಿಸುತ್ತಿದ್ದು, ತೋಟದಲ್ಲಿ ಕೆಲಸ ನಿರ್ವಹಿಸಲೂ ಸಹ ಭಯಪಡುವಂತಾಗಿದೆ.

ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲೂ ಸಹ ಹಿಂದೇಟು ಹಾಕುವ ಪರಿಸ್ಥಿತಿ ಬಂದೊದಗಿದೆ ಎಂದು ಸ್ಥಳೀಯ ಅವಿಲಾಶ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ದಿನಂಪ್ರತಿ ನೂರಾರು ಸಂಖ್ಯೆಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿರುತ್ತವೆ. ಮುಖ್ಯರಸ್ತೆ ಯಲ್ಲಿಯೇ ಆನೆಗಳು ಅತ್ತಿಂದಿತ್ತ ಸಾಗುತ್ತಿರುವದರಿಂದ ವಾಹನಗಳ ಸವಾರರೂ ಭಯಬೀಳುವಂತಾಗಿದೆ ಎಂದು ಗ್ರಾಮದ ದಿನೇಶ್ ತಿಳಿಸಿದ್ದಾರೆ.

ಕೂತಿ

ಕೂತಿ ಗ್ರಾಮದಲ್ಲಿ ಕಾಡಾನೆ ಹಿಂಡು ಕೃಷಿ ಪ್ರದೇಶಗಳಿಗೆ ಲಗ್ಗೆಯಿಟ್ಟ ಪರಿಣಾಮ ಕಾಫಿ, ಹಸಿಮೆಣಸು ಸೇರಿದಂತೆ ಇತರ ಕೃಷಿ ಫಸಲು ನಷ್ಟಗೊಂಡಿದೆ.

ಕೂತಿ ಗ್ರಾಮದ ಪಿ.ಯು. ಭರತ್, ಬಿ.ಪಿ. ಪೊನ್ನಪ್ಪ, ಬಿ.ಜಿ. ಮೊಗಪ್ಪ ಅವರುಗಳಿಗೆ ಸೇರಿದ ಕಾಫಿ ತೋಟದಲ್ಲಿ ಮನಸೋಯಿಚ್ಛೆ ಸಂಚರಿಸಿದ ಕಾಡಾನೆಗಳ ಹಿಂಡು, ಕಾಫಿ ಗಿಡಗಳನ್ನು ಕಿತ್ತೆಸೆದು ಬಾಳೆ ಗಿಡಗಳನ್ನು ಧ್ವಂಸಗೊಳಿಸಿವೆ.

ಅದೇ ಗ್ರಾಮದ ಬಿ.ಆರ್. ವಿನೋದ ಎಂಬವರ ಗದ್ದೆಗೆ ಲಗ್ಗೆಯಿಟ್ಟಿರುವ ಕಾಡಾನೆಗಳು ಫಸಲು ತುಂಬಿದ್ದ ಮೆಣಸಿನ ಗಿಡಗಳನ್ನು ತುಳಿದು ನಾಶಪಡಿಸಿದೆ. ಗದ್ದೆಗೆ ಹಾಕಲು ಇಡಲಾಗಿದ್ದ ರಾಸಾಯನಿಕ ಗೊಬ್ಬರದ ಚೀಲಗಳನ್ನು ಎಸೆದಿದೆ.

ಕೂತಿ, ಕುಂದಳ್ಳಿ, ನಗರಳ್ಳಿ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಕೃಷಿ ಫಸಲು ನಷ್ಟಗೊಳಿಸುವದೂ ಸೇರಿದಂತೆ ಜನಸಾಮಾನ್ಯರಲ್ಲಿ ಜೀವ ಭಯ ಮೂಡಿಸಿದ್ದು, ತಕ್ಷಣ ಈ ಆನೆಗಳನ್ನು ಅರಣ್ಯಕ್ಕೆ ಅಟ್ಟಲು ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಕೂತಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.