ಕೂಡಿಗೆ, ಜೂ. 1: ಇಲ್ಲಿಗೆ ಸಮೀಪದ ಕೂಡಿಗೆಯಲ್ಲಿ 10 ವರ್ಷಗಳ ಹಿಂದೆ ಪ್ರಾರಂಭವಾದ ಪದವಿಪೂರ್ವ ಕಾಲೇಜು ಇತ್ತೀಚಿನ ವರ್ಷಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತಿದೆ. ಆದರೆ ಇಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯದ ಕೊರತೆ ಎದ್ದು ಕಾಣುತ್ತಿದೆ.

ಕೂಡಿಗೆ ಕೃಷಿ ಫಾರಂ ಆವರಣದಲ್ಲಿ ಪ್ರಾರಂಭಗೊಂಡ ಈ ವಿದ್ಯಾಸಂಸ್ಥೆಯನ್ನು ಕಾರ್ಮಿಕರ ಮಕ್ಕಳಿಗೆ ಅನುಕೂಲ ವಾಗುವಂತೆ ಆರಂಭಿಸಲಾಯಿತು. ಶಿಕ್ಷಕರು ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಪ್ರತಿ ವರ್ಷ ಈ ವಿದ್ಯಾಸಂಸ್ಥೆಯಲ್ಲಿ ಶೇ. 98 ರಷ್ಟು ಫಲಿತಾಂಶ ಹೊರಹೊಮ್ಮುತ್ತಿದೆ.

ವಿದ್ಯಾಸಂಸ್ಥೆಯಲ್ಲಿ ಕಳೆದ ಸಾಲಿನಲ್ಲಿ 280 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈ ಸಾಲಿನಲ್ಲಿ ಈಗಾಗಲೇ ಒಂದೊಂದು ವಿಭಾಗದಲ್ಲಿ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಬೇಕಾಗಿರುವ ಶೌಚಾಲಯವೇ ಇರಲಿಲ್ಲ. ಪೋಷಕರ ದೂರಿನನ್ವಯ ಸ್ಥಳಕ್ಕಾಗಮಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಕಾಲೇಜು ಆವರಣವನ್ನು ಪರಿಶೀಲಿಸಿ ತುರ್ತಾಗಿ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರುಗಳಿಗೆ ಶೌಚಾಲಯವನ್ನು ನಿರ್ಮಿಸಲು ಅನುದಾನ ನೀಡಲಾಗುವದು. ಅದರಂತೆ ಶೌಚಾಲಯ ಕಾಮಗಾರಿಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಲು ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಸೂಚಿಸಿದರು.

ನಂತರ ಕಾಲೇಜು ಆವರಣದ ಸಮೀಪದಲ್ಲಿರುವ ಕೃಷಿ ಇಲಾಖೆ ಕಟ್ಟಡಗಳನ್ನು ಪರಿಶೀಲಿಸಿ ತಾತ್ಕಾಲಿಕವಾಗಿ ಅಕ್ಕಪಕ್ಕದ ಕಟ್ಟಡವನ್ನು ದುರಸ್ತಿಗೊಳಿಸಿ ತರಗತಿಗಳನ್ನು ಪ್ರಾರಂಭಿಸಲು ಪ್ರಾಂಶುಪಾಲರಿಗೆ ಸೂಚಿಸಿದರು.

ಪ್ರತಿವರ್ಷ ಸಮೀಪದ ಹಲವಾರು ಸರಕಾರಿ ಪ್ರಾಥಮಿಕ ಶಾಲೆಗಳು ಸೇರಿದಂತೆ ಖಾಸಗಿ ಶಾಲೆಗಳಿಂದ 10ನೇ ತರಗತಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಇಲ್ಲಿನ ಉತ್ತಮ ಶಿಕ್ಷಣಕ್ಕಾಗಿ ಪ್ರವೇಶ ಕೋರಿ ಅರ್ಜಿ ಸಲ್ಲಿಸುತ್ತಾರೆ. ಆದರೆ ಈ ವಿದ್ಯಾಸಂಸ್ಥೆಯಲ್ಲಿ ಕಟ್ಟಡಗಳ ಕೊರತೆಯಿಂದ ಹೆಚ್ಚಿನ ವಿದ್ಯಾರ್ಥಿ ಗಳನ್ನು ಸೇರಿಸಿಕೊಳ್ಳಲಾಗುತ್ತಿಲ್ಲ ಎಂದು ಪ್ರಾಂಶುಪಾಲ ಮಹಾಲಿಂಗಯ್ಯ ಕೊಠಡಿಯ ಬೇಡಿಕೆಯನ್ನು ಶಾಸಕರ ಮುಂದಿರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕೃಷಿ ಇಲಾಖೆಯಲ್ಲಿ ಹೊಂದಿಕೊಂಡಂತ್ತಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಜಾಗವನ್ನು ಸರ್ವೆ ನಡೆಸಿ ಹದ್ದುಬಸ್ತನ್ನು ಗುರುತಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಸಾಲಿನಲ್ಲಿ ಕಾಲೇಜಿಗೆ ತಡೆಗೋಡೆ ಸೇರಿದಂತೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗುವದು ಹಾಗೂ ಒಂದು ವಾರದಲ್ಲಿ ಶೌಚಾಲಯದ ಕಾಮಗಾರಿ ನಡೆಸಿ ಪೂರ್ಣಗೊಳಿಸಲಾಗುವದು ಎಂದು ತಿಳಿಸಿದರು.

ಈ ಸಂದರ್ಭ ತಾ.ಪಂ. ಸದಸ್ಯ ಗಣೇಶ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಅಧ್ಯಕ್ಷ ಕುಮಾರಪ್ಪ, ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಕೆ. ಬೋಗಪ್ಪ, ಕುಶಾಲನಗರ ಆರ್‍ಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಾಸ್ಕರ್, ಜ್ಯೋತಿ ಪ್ರಮೀಳ, ಮಾಜಿ ಸದಸ್ಯ ಕುಮಾರ ಸ್ವಾಮಿ, ಕೂಡಿಗೆಯ ಉದ್ಯಮಿ ಎಂ.ಕೆ. ಚಂದ್ರ, ಉಪನ್ಯಾಸಕ ಸತೀಶ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಇದ್ದರು.