ಮಡಿಕೇರಿ, ಜೂ. 1: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ(ಎಂ) ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಕೊಡಗಿನ ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸಬೇಕು. ಕಸ್ತೂರಿ ರಂಗನ್ ಸಮಿತಿಯ ವರದಿಯಲ್ಲಿರುವ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವದಾಗಿ ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಿದ ಅಫಿಡವಿಟ್ಟನ್ನು ಮತ್ತು ಅಧಿಸೂಚನೆಗಳನ್ನು ಹಿಂಪಡೆಯಬೇಕು.
ಪಶುಗಳ ಹತ್ಯೆಯನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ದೇಶದಲ್ಲಿ ವಿವಿಧ ಧರ್ಮ, ಮತಾಚಾರಗಳನ್ನು ಅನುಸರಿಸು ವವರಿದ್ದಾರೆ. ಅವರ ಆಹಾರ ಕ್ರಮಗಳು ವಿಭಿನ್ನವಾಗಿವೆ. ಸರಕಾರದ ಈ ಕ್ರಮ ಅವರವರ ಇಷ್ಟಾನುಸಾರ ಅನುಸರಿಸುತ್ತಿರುವ ಆಹಾರ ಕ್ರಮದ ಮೇಲೆ ನಿರ್ಬಂಧಗಳನ್ನು ಹೇರುವ ಕ್ರಮ ಖಂಡನೀಯ. ನಮ್ಮ ವಯಸ್ಸಾದ ಪಶುಗಳನ್ನು ನೋಡಿಕೊಳ್ಳಲು ಸರಕಾರ ಯಾವದೇ ಕ್ರಮವಹಿಸದೆ ಈ ರೀತಿ ನಿರ್ಬಂಧಿಸುವದರಿಂದ ರೈತರ ಮೇಲೆ ಹೊರೆ ಹೆಚ್ಚಾಗಲಿದೆ. ಈಗಾಗಲೇ ರೈತರು ಕೊಳ್ಳುವ ಪ್ರತಿಯೊಂದು ಸರಕಿನ ಬೆಲೆಯೂ ಹೆಚ್ಚುತ್ತಿದ್ದರೆ, ರೈತರು ಬೆಳೆಸುವ ಬೆಳೆಗಳಿಗೆ ನ್ಯಾಯಯುತ ಬೆಲೆ ಸ್ಥಿರವಾಗಿ ಸಿಗುತ್ತಿಲ್ಲ. ಈ ಅನಿಶ್ಚಿತತೆಯಿಂದಾಗಿ ಅವರ ಜೀವನ ವೆಚ್ಚ ಮತ್ತು ಆದಾಯವನ್ನು ಸರಿತೂಗಿಸಲಾಗದೆ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಬಸವಳಿದಿರುವ ರೈತರ ಮೇಲೆ ಸರಕಾರ ಗಾಯದ ಮೇಲೆ ಬರೆ ಎಳೆದಂತಾಗಿ ರೈತರು ಇನ್ನಷ್ಟು ಕಂಗಾಲಾಗಲಿದ್ದಾರೆ. ಮಾಂಸ, ಚರ್ಮ ವ್ಯಾಪಾರದಿಂದ ಜೀವಿಸುತ್ತಿರುವ ಲಕ್ಷಾಂತರ ಮಂದಿ ಬೀದಿಗೆ ಬೀಳಲಿದ್ದಾರೆ. ಮಾಂಸ ರಫ್ತು ವ್ಯಾಪಾರಕ್ಕೆ ಧಕ್ಕೆಯಾಗಲಿದ್ದು, ದೇಶದ ಆರ್ಥಿಕತೆಗೆ ತೊಂದರೆಯಾಗಲಿದೆ. ಸರಕಾರದ ಆದೇಶವು ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಸೇರಿದಂತೆ ಎಲ್ಲಾ ರಂಗಗಳಿಗೂ ಹಾನಿಕಾರವಾದ್ದರಿಂದ ಆದೇಶವನ್ನು ಹಿಂಪಡೆಯಬೇಕು.
ಆಹಾರ ಭದ್ರತಾ ಕಾಯಿದೆಗೆ ವ್ಯತಿರಿಕ್ತವಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಪೂರೈಕೆಯಲ್ಲಿ ತೀವ್ರ ಕಡಿತ ಮಾಡಿರುವದನ್ನು ವಾಪಾಸು ಪಡೆಯಬೇಕು. ಸಕ್ಕರೆ ಮತ್ತು ಸೀಮೆಎಣ್ಣೆ ವಿತರಣೆಯನ್ನು ಮುಂದುವರಿಸಬೇಕು, ನಗದು ವರ್ಗಾವಣೆಯ ನೀತಿಯನ್ನು ಕೈಬಿಡಬೇಕು, ಎಲ್ಲಾ ಅಗತ್ಯ ವಸ್ತುಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸಹಾಯ ಧನದ ಆಧಾರದಲ್ಲಿ ದೊರೆಯುವಂತೆ ಮಾಡಬೇಕು.
ಸಾರ್ವಜನಿಕ ರಂಗದ ಕೈಗಾರಿಕೆಗಳು ಮತ್ತು ಉದ್ದಿಮೆಗಳ ಖಾಸಗೀಕರಣವನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಸಾರ್ವಜನಿಕ ರಂಗವನ್ನು ಬಲಪಡಿಸಲು ಕ್ರಮ ತೆಗೆದುಕೊಳ್ಳಬೇಕು, ಬ್ಯಾಕ್ ಲಾಗ್ ಹುದ್ದೆಯನ್ನು ಭರ್ತಿ ಮಾಡಬೇಕು, ಖಾಸಗಿ ರಂಗದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗಾಗಿ ಮೀಸಲಾತಿಯನ್ನು ಒದಗಿಸಲು ಅಗತ್ಯ ಕ್ರಮಗಳನ್ನು ವಹಿಸಬೇಕು, ಬಡ್ತಿಯಲ್ಲಿ ಮೀಸಲಾತಿಯನ್ನು ಮುಂದುವರಿಸ ಬೇಕು.
ರೈತರು ಬೆಳೆದ ಬೆಳೆಗೆ ಅದರ ಉತ್ಪಾದನಾ ವೆಚ್ಚಕ್ಕೆ ಶೇ. 50 ರಷ್ಟು ಲಾಭಾಂಶ ಸಿಗುವಂತೆ ಖಾತರಿ ಮಾಡಿ ಕ್ರಮ ತೆಗೆದುಕೊಳ್ಳಬೇಕು, ಬರಗಾಲ ಅಥವಾ ಅತಿವೃಷ್ಟಿ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳನ್ನು ತಡೆಯಲು ಬಾಧಿತ ರೈತರ ಸಾಲ ಮನ್ನಾ ಮಾಡಬೇಕು.
ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಬೇಕು.
ಕರ್ನಾಟಕ ಸರಕಾರವು ಬರ ನಿರ್ವಹಣಾ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು; ರೈತರ ಸಾಲ ಮನ್ನಾ ಮಾಡಬೇಕು; ಗುತ್ತಿಗೆ, ಹೊರಗುತ್ತಿಗೆÉ ಕಾರ್ಮಿಕರನ್ನು ಖಾಯಂ ಗೊಳಿಸಬೇಕು; ಎಲ್ಲಾ ಸ್ಕೀಮ್ ನೌಕರರನ್ನು ಕನಿಷ್ಟ ವೇತನ ಕಾಯಿದೆಯ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಸಿಪಿಐ(ಎಂ) ಮುಖಂಡರಾದ ಇ.ರಾ. ದುರ್ಗಾಪ್ರಸಾದ್, ಪಿ.ಆರ್. ಭರತ್, ಎನ್.ಡಿ. ಕುಟ್ಟಪ್ಪ, ರಮೇಶ್ ಸೇರಿದಂತೆ ಇನ್ನಿತರರು ಇದ್ದರು.