ಮಡಿಕೇರಿ, ಜೂ.1: ಜೀವನದಿ ಕಾವೇರಿಗೆ ಜೀವಂತ ಮನುಷ್ಯನ ಶಾಸನಬದ್ಧ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ನ್ಯೂಜಿಲ್ಯಾಂಡ್ ದೇಶ ತನ್ನ ಜೀವನದಿ ಹಾಗೂ ಆದಿಮಸಂಜಾತ ‘ಮಹೋರಿ' ಬುಡಕಟ್ಟು ಜನರ ಪೂರ್ವಜಳಾದ ‘ವಂಗಾನುಹಿ’ ನದಿಗೆ ಜೀವಂತ ಮನುಷ್ಯನ ಶಾಸನಬದ್ಧ ಸ್ಥಾನಮಾನ ನೀಡಿದ ಜಗತ್ತಿನ ಮೊತ್ತಮೊದಲ ರಾಷ್ಟ್ರವಾಗಿದ್ದು, ಅದೇ ಮಾದರಿ ಕೊಡವ ಬುಡಕಟ್ಟು ಕುಲದ ಪೂರ್ವಜಳಾದ ಜೀವನದಿ ‘ಕಾವೇರಿ’ಗೂ ‘ಲಿವಿಂಗ್ ಎಂಟಿಟಿ ಹ್ಯಾವಿಂಗ್ ದಿ ಸ್ಟೇಟಸ್ ಆಫ್ ದಿ ಲೀಗಲ್ ಪರ್ಸನ್’ ಸ್ಥಾನಮಾನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸತ್ಯಾಗ್ರಹದಲ್ಲಿ ಕಲಿಯಂಡ ಪ್ರಕಾಶ್, ಮೂಕೊಂಡ ದಿಲೀಪ್, ಬಾಚಮಂಡ ರಾಜ ಪೂವಣ್ಣ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಬಾಚರಣಿಯಂಡ ಚಿಪ್ಪಣ್ಣ, ಬೊಟ್ಟಂಗಡ ಗಿರೀಶ್, ಮದ್ರಿರ ಕರುಂಬಯ್ಯ, ಜಮ್ಮಡ ಮೋಹನ್, ಕಾಂಡೆರ ಸುರೇಶ್, ಬೇಪಡಿಯಂಡ ದಿನು, ಮಂದಪಂಡ ಮನೋಜ್, ಚಂಬಂಡ ಜನತ್ ಕುಮಾರ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಲಿಯಂಡ ಮೀನ ಪ್ರಕಾಶ್, ಬಾಚಮಂಡ ಕಸ್ತೂರಿ, ಬಾಚಮಂಡ ಬೆಲ್ಲು, ಅಪ್ಪಾರಂಡ ಶ್ರೀನಿವಾಸ್, ಮಣವಟ್ಟಿರ ನಂದ, ಮಣವಟ್ಟಿರ ಸ್ವರೂಪ್, ಕಿರಿಯಮಾಡ ಶರಿನ್, ಪುಳ್ಳಂಗಡ ನಟೇಶ್, ಮತ್ತಿತರರು ಪಾಲ್ಗೊಂಡಿದ್ದರು. ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಸತೀಶ್ ಅವರಿಗೆ ನೀಡಲಾಯಿತು.