ಕೂಡಿಗೆ, ಜೂ. 1: ಕರ್ನಾಟಕದ ಮೊಟ್ಟಮೊದಲ ಹಾಲಿನ ಡೈರಿ ಎಂಬ ಖ್ಯಾತಿಯ ಕೂಡಿಗೆ ಡೈರಿ ಸರ್ವಾಂಗೀಣ ಪ್ರಗತಿಯ ಮೂಲಕ ಹೈನುಗಾರರು ಮತ್ತು ಹಾಲಿನ ಗ್ರಾಹಕರಿಗೆ, ಗ್ರಾಮಾಂತರ ಪ್ರದೇಶದ ರೈತರ ಪ್ರಗತಿಗೆ ವರದಾನವಾಗಿ ಪರಿಣಮಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ 46 ಸಾವಿರದಿಂದ 50 ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿದೆ.

ಕೂಡಿಗೆ ಡೈರಿಗೆ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ದಿನಕ್ಕೆ 20 ಸಾವಿರ ಲೀಟರ್ ಹಾಲು ಸರಬರಾಜಾಗುತ್ತಿದೆ.

ಕರ್ನಾಟಕದ ಮೊಟ್ಟಮೊದಲ ಹಾಲಿನ ಡೈರಿಯಾಗಿ 1955 ರಲ್ಲಿ ಕೂಡಿಗೆಯಲ್ಲಿ ಅಸ್ಥಿತ್ವಕ್ಕೆ ಬಂದು ಕಳೆದ 62 ವರ್ಷಗಳಲ್ಲಿ ಜಿಲ್ಲೆಯ ಜನರಿಗೆ ಪ್ರತಿನಿತ್ಯದ ಹಾಲು ಪೂರೈಕೆಯಲ್ಲಿ ತನ್ನ ಕಾಯಕವನ್ನು ಇಲ್ಲಿನ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಜಿಲ್ಲೆಯ ಗ್ರಾಹಕರಿಗೆ ಹಾಲು ಪೂರೈಸುವ ಹಾಗೂ ಹಾಲಿನ ಉತ್ಪನ್ನಗಳನ್ನು ನಿಗಧಿತ ಸಮಯದಲ್ಲಿ ನಿಗಧಿತ ಸ್ಥಳಕ್ಕೆ ಸಾಗಾಟಗೊಳಿಸುವ ವ್ಯವಸ್ಥೆಯೊಂದಿಗೆ ಜಿಲ್ಲೆಯ 32 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ 20 ಸಾವಿರ ಲೀಟರ್ ಹಾಲು ಸಂಗ್ರಹವಾದರೂ, ಉಳಿದ ಹಾಲನ್ನು ಹಾಸನ ಹಾಲು ಒಕ್ಕೂಟದ ಡೈರಿಯಿಂದ ತರಿಸುವದರ ಮೂಲಕ ಜಿಲ್ಲೆಯ ಗ್ರಾಹಕರಿಗೆ ವ್ಯವಸ್ಥಿತವಾಗಿ ಮಾರಾಟ ಮಾಡುವ ಕ್ರಮವನ್ನು ಕೈಗೊಳ್ಳಲಾಗಿದೆ.

ದಿನದ 24 ಗಂಟೆಯೂ ಚಟುವಟಿಕೆಯಿಂದ ಕೂಡಿರುವ ಕೂಡಿಗೆ ಡೈರಿಯಲ್ಲಿ ಸುಸಜ್ಜಿತ, ಅತ್ಯಾಧುನಿಕ ಯಂತ್ರೋಪಕರಣಗಳಿದ್ದು ದಿನದ 24 ಗಂಟೆಗಳಲ್ಲಿಯೂ ಕೂಡಿಗೆ ಡೈರಿಯು ಹಾಲು ಸಂಗ್ರಹಣೆ, ಶೇಖರಣೆ, ಸಂಸ್ಕರಣೆ ಸೇರಿದಂತೆ ವಿವಿಧ ಕಾರ್ಯಗಳು ನಡೆಯುತ್ತಲೆ ಇರುತ್ತವೆ.

ಹಾಲನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಕಾಪಾಡಲೆಂದೇ ಕೋಟಿಗಟ್ಟಲೆ ಬೆಲೆಬಾಳುವ ಯಂತ್ರಗಳನ್ನು ಅಳವಡಿಸಲಾಗಿದ್ದು, ಹಾಲಿನ ಸಂಸ್ಕರಣಾ ಕಾರ್ಯವು ಅತ್ಯಂತ ಅಚ್ಚುಕಟ್ಟಾಗಿ ನಡೆಯುವದರ ಮೂಲಕ ಹಾಲಿನ ಗುಣಮಟ್ಟ ಗ್ರಾಹಕರಿಗೆ ತಲಪುವಂತೆ ಕಾಯ್ದಿರಿಸಿಕೊಳ್ಳಲಾಗಿದೆ ಎಂದು ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಕೊಡಗು ಸೇರಿದಂತೆ ಹಾಸನ, ಸಕಲೇಶಪುರ, ಅರಕಲಗೋಡು ಸೇರಿ ಒಟ್ಟು ಸುಮಾರು 50 ಸಾವಿರ ಲೀಟರ್ ಹಾಲು ಕೂಡಿಗೆ ಡೈರಿಗೆ ಸಂಗ್ರಹವಾಗುತ್ತಿದೆ.

ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ 32 ಹಾಲು ಉತ್ಪಾದಕರ ಸಂಘಗಳಿದ್ದು ಇವುಗಳೊಂದಿಗೆ ಮಹಿಳಾ ಸಂಘಗಳು ಇವೆ.

ಹಾಲು ಉತ್ಪಾದಕರಿಗೆ ಹಾಸನ ಹಾಲು ಒಕ್ಕೂಟದಿಂದ ಮತ್ತು ರಾಜ್ಯ ಸರ್ಕಾರದಿಂದ ನಿಗಧಿಯಾದಂತಹ ಸಹಾಯ ಧನವನ್ನು ನೀಡಲಾಗುತ್ತಿದೆ. ಅಲ್ಲದೆ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳ ಕಟ್ಟಡ ಮತ್ತು ಗೋದಾಮುಗಳ ನಿರ್ಮಾಣಗೊಳಿಸಿಕೊಳ್ಳಲು ಒಕ್ಕೂಟದ ವತಿಯಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುತ್ತಿದೆ.

ಈಗಾಗಲೇ ಟೋನ್ಡ್ ಮತ್ತು ಹೋಮೋಜಿನಸ್ ಹಾಗೂ ಹಾಲಿನ ಉತ್ಪನ್ನಗಳಲ್ಲದೆ ಪೇಡ, ಮೊಸರು, ಮಜ್ಜಿಗೆ, ತುಪ್ಪ, ಕುಂದಾ, ಮೈಸೂರ್ ಪಾಕ್, ಜಾಮೂನ್, ಐಸ್‍ಕ್ರೀಂ ಸೇರಿದಂತೆ ಹಾಲಿನಿಂದ ತಯಾರಿಸಲಾದ ಒಟ್ಟು 35 ಬಗೆಯ ಉತ್ಪನ್ನಗಳು ಮಾರಾಟಕ್ಕೆ ದೊರಕುತ್ತಿವೆ. ಕೂಡಿಗೆ ಡೈರಿಯಲ್ಲಿ ಹಾಲು ಮಾತ್ರ ಪರಿಷ್ಕರಣೆಗೊಂಡು ತಯಾರಾಗುತ್ತಿದ್ದರೆ, ಉಳಿದ ಎಲ್ಲ ಹಾಲಿನ ಉತ್ಪನ್ನಗಳನ್ನು ಹಾಸನದಿಂದ ಉತ್ಪಾದಿಸಿ, ಕೂಡಿಗೆ ಡೈರಿಯ ಮೂಲಕ ಜಿಲ್ಲೆಯ ವಿವಿಧ ಮಾರಾಟ ಮಳಿಗೆಗಳಲ್ಲಿ ಮಾರಾಟವಾಗುತ್ತಿವೆ.

ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕುಗಳಲ್ಲಿ ಹಾಲು ಉತ್ಪಾದಕರ ಸಂಘಗಳು ರಚನೆಗೊಂಡಂತೆ ವಿರಾಜಪೇಟೆ ತಾಲೂಕಿನಲ್ಲಿ ಹೈನುಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ತೆರೆಯಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಕೂಡಿಗೆ ಡೈರಿಯ ವ್ಯವಸ್ಥಾಪಕ ನಂದೀಶ್ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದ ಪ್ರಥಮ ಡೈರಿಯಾಗಿರುವ ಕೂಡಿಗೆ ಡೈರಿಯನ್ನು ಈಗಾಗಲೇ ಅಭಿವೃದ್ಧಿಯತ್ತ ಕೊಂಡೊಯ್ಯಲು 5 ಕೋಟಿ ರೂ. ಅನುದಾನದಲ್ಲಿ ಅತ್ಯಾಧುನಿಕ ಹಾಲು ಪರಿಷ್ಕರಣ ಘಟಕವನ್ನು ಕಳೆದ ಎರಡು ವರ್ಷಗಳ ಹಿಂದೆÉ ಪ್ರಾರಂಭಿಸಲಾಗಿದೆ.

ಮುಂದಿನ ದಿನಗಳಲ್ಲಿ ಹಾಸನ ಹಾಲು ಒಕ್ಕೂಟದ ಸಭೆಯಲ್ಲಿ ಚರ್ಚಿಸುವ ಮೂಲಕ ಕೊಡಗು ಜಿಲ್ಲೆಯ ಕೂಡಿಗೆ ಡೈರಿಯಲ್ಲಿ ಹಾಲಿನ ಉತ್ಪನ್ನಗಳನ್ನು ಇನ್ನಿತರ ಉತ್ಪನ್ನಗಳ ಪ್ರಗತಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಅಭಿವೃದ್ಧಿ ಪಡಿಸುವತ್ತ ಜಿಲ್ಲೆಯ ಗ್ರಾಹಕರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲು ಪ್ರಯತ್ನಿಸಲಾಗುವದೆಂದು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲೆಯ ನಿರ್ದೇಶಕ ಕೆ.ಟಿ ಅರುಣ್ ಕುಮಾರ್ ತಿಳಿಸಿದರು. ಈ ಸಾಲಿನ ಬಜೆಟ್‍ನಲ್ಲಿ ಆಡಳಿತ ಮಂಡಳಿಯ ತಿರ್ಮಾನದಂತೆ ಹೆಚ್ಚುವರಿ ಹಾಲಿನ ಸಂಸ್ಕರಣ ಘಟಕವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಾಲಿನ ಉತ್ಪನ್ನಗಳನ್ನು ಕೂಡಿಗೆ ಡೈರಿಯಲ್ಲೆ ಉತ್ಪಾದಿಸುವ ಚಿಂತನೆ ನಡೆಸಲಾಗುತ್ತಿದೆ. ಹಾಗೂ ಈಗಿರುವ ಮೊದಲನೇ ಡೈರಿಯ ಆಡಳಿತ ಕಚೇರಿ ನಡೆಯುತ್ತಿರುವ ಕಟ್ಟಡದ ದುರಸ್ಥಿಗೆ ಆಡಳಿತ ಮಂಡಳಿಯವರ ಗಮನಕ್ಕೆ ತಂದು ಸಭೆಯಲ್ಲಿ ಚರ್ಚಿಸಲಾಗಿದೆ. ಸಂಬಂಧಪಟ್ಟ ಇಂಜಿನಿಯರ್ ಸ್ಥಳ ಪರಿಶೀಲಿಸಿ ಸುವ್ಯವಸ್ಥಿತವಾಗಿ ಕಟ್ಟಡ ನಿರ್ಮಿಸುವ ಬಗ್ಗೆ ನಕಾಶೆಯನ್ನು ನೀಡಿರುತ್ತಾರೆ. ಅದರ ಮುಖೇನ ಹಳೆಯ ಕಟ್ಟಡವು ಬೀಳುವ ಹಂತದಲ್ಲಿರುವದನ್ನು ಸರಿಪಡಿಸಲಾಗುವದು ಎಂದು ತಿಳಿಸಿದರು.

ಕಡಿಮೆ ದರದಲ್ಲಿ ರೈತರಿಗೆ ಹುಲ್ಲು ಮಾರಾಟ

ಕೂಡಿಗೆ ಡೈರಿಗೆ 8 ಎಕರೆ ಪ್ರದೇಶವಿದ್ದು ಹಾಲು ಪರಿಷ್ಕರಣ, ನೀರು ಶುದ್ಧೀಕರಣ, ಕಛೇರಿ ಕಟ್ಟಡ ಹೊರತುಪಡಿಸಿದಂತೆ ಉಳಿದ ಜಾಗದಲ್ಲಿ ಹಸುಗಳಿಗಾಗಿ ಹುಲ್ಲುಗಾವಲನ್ನು ಬೆಳೆಸಲಾಗಿದ್ದು, ಇಲ್ಲಿ ಬೆಳೆಸಲಾದ ಹುಲ್ಲನ್ನು ಹೈನುಗಾರರಿಗೆ ಕಡಿಮೆ ದರದಲ್ಲಿ ಹುಲ್ಲು ಮಾರಾಟ ಮಾಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ 1 ಲಕ್ಷ ಲೀಟರ್ ಹಾಲು ಸಂಸ್ಕರಣೆ ಮಾಡುವ ನಿಟ್ಟಿನಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗುವದು. ಅಲ್ಲದೆ ವಿವಿಧ ಉತ್ಪನ್ನಗಳನ್ನು ಜಿಲ್ಲೆಯ ಗ್ರಾಹಕರಿಗೆ ಸಕಾಲದಲ್ಲಿ ಒದಗಿಸುವ ಯೋಜನೆಗಳಿವೆ. ಅಲ್ಲದೆ ಹಾಲು ಪೂರೈಕೆಗಳಲ್ಲಿ 6 ದಶಕಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೂಡಿಗೆ ಡೈರಿ ತನ್ನ ಅತ್ಯುತ್ತಮ ಗುಣಮಟ್ಟದೊಂದಿಗೆ ಉತ್ತಮ ಸೇವೆಯಿಂದಲೂ ಜನರ ಮೆಚ್ಚುಗೆಗೆ ಕೂಡಿಗೆ ಡೈರಿ ಪಾತ್ರವಾಗಿದೆ. ಅಲ್ಲದೆ, ಶುಭಕಾರ್ಯಕ್ರಮಗಳಿಗೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಅವರವರ ಸ್ಥಳಗಳಿಗೆ ಹಾಲನ್ನು ಒದಗಿಸುವ ವ್ಯವಸ್ಥೆಯು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಯಡಿ ಹಾಲು ಉತ್ಪಾದಕರಿಗೆ ಅಜೋಲ ಮತ್ತು ಒಣಮೇವು ಸಂಸ್ಕರಣಾ ವಿದರ್ಭ ಪ್ಯಾಕೇಜ್, ಅಮೃತ್ ಯೋಜನೆ ರೈತರಿಗೆ ಸಬ್ಸಿಡಿಯಲ್ಲಿ ಹುಲ್ಲು ಕತ್ತರಿಸುವ ಯಂತ್ರಗಳನ್ನು ನೀಡಲಾಗುತ್ತಿದೆ. ಸಮಗ್ರ ಕೃತಕ ಗರ್ಭಧಾರಣೆ ಯೋಜನೆಯಡಿ ಒಕ್ಕೂಟದ ರೈತರ ಮನೆಗಳಿಗೆ ತೆರಳಿ ಹಸುಗಳಿಗೆ ಔಷಧಿ ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಯಲ್ಲಿ ಡೈರಿಗೆ ಪ್ರವಾಸಿಗರಾಗಿ ಬರುವ ರೈತರ ಮಕ್ಕಳಿಗೂ ಹಾಗೂ ಗ್ರಾಮಸ್ಥರಿಗೆ ಹೈನುಗಾರಿಕೆಯ ಬಗ್ಗೆ ಮಾಹಿತಿ ನೀಡಲಾಗುವದೆಂದು, ಗ್ರಾಮಾಂತರ ಪ್ರದೇಶಗಳಲ್ಲಿರುವ ಸಹಕಾರ ಸಂಘಗಳ ಕೇಂದ್ರದಲ್ಲಿ ವರ್ಷಕ್ಕೆ ಎರಡು ಬಾರಿ ಹಸುಗಳಿಗೆ ಉಚಿತ ಗರ್ಭಧಾರಣೆ ಚುಚ್ಚುಮದ್ದುಗಳನ್ನು ಒಕ್ಕೂಟದ ವತಿಯಿಂದ ಒದಗಿಸಲಾಗುತ್ತಿದೆ. ಇದರ ಮೂಲಕ ಉತ್ತಮ ಹಸುಗಳನ್ನು ಸಾಕುವದರ ಮೂಲಕ ಹೆಚ್ಚು ಹಾಲು ಕರೆದು ಸಹಕಾರ ಸಂಘಕ್ಕೆ ಹಾಕಿ ತನ್ನ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಎಲ್ಲಾ ಸಹಕಾರ ನೀಡಲಾಗುವದು ಎಂದು ಡೈರಿಯ ಅಧಿಕಾರಿಗಳು ಈ ಮೂಲಕ ತಿಳಿಸಿರುತ್ತಾರೆ.

- ಕೆ.ಕೆ. ನಾಗರಾಜಶೆಟ್ಟಿ