ಮಡಿಕೇರಿ, ಜೂ. 3: ತಲಕಾವೇರಿ ವನ್ಯಧಾಮವನ್ನು ಸೂಕ್ಷ್ಮ ಪರಿಸರ ವಲಯವನ್ನಾಗಿ ಘೋಷಿಸಿರುವ ಕ್ರಮದ ಹಿಂದೆ ಡೋಂಗಿ ಪರಿಸರವಾದಿಗಳ ಕೈವಾಡವಿದೆ ಎಂದು ಆರೋಪಿಸಿರುವ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಕಾಳನ ರವಿ ಹಾಗೂ ಭಾಗಮಂಡಲ ಗ್ರಾ.ಪಂ. ಸದಸ್ಯರು, ಕೇಂದ್ರಕ್ಕೆ ಸಮರ್ಪಕ ವರದಿಯನ್ನು ಸಲ್ಲಿಸದ ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆಯೂ ಇದಕ್ಕೆ ಕಾರಣವೆಂದು ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಳನ ರವಿ, ಗ್ರಾ.ಪಂ. ಸದಸ್ಯರಾದ ಕೆ.ಸಿ. ಪುರುಷೋತ್ತಮ, ದೇವಂಗೋಡಿ ಭಾಸ್ಕರ ಹಾಗೂ ರಾಜು ರೈ ಯುನೆಸ್ಕೋ ನಿರ್ಧಾರದ ವಿರುದ್ಧ ಹೋರಾಟವನ್ನು ರೂಪಿಸುವದಾಗಿ ಎಚ್ಚರಿಕೆ ನೀಡಿದರು. ಸೂಕ್ಷ್ಮ ಪರಿಸರ ವಲಯ ಘೋಷಣೆಯನ್ನು ಖಂಡಿಸಿ ತಾ. 6 ರ ಭಾಗಮಂಡಲ ಗ್ರಾಮಸಭೆಯನ್ನು ಬಹಿಷ್ಕರಿಸುವದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಪುಷ್ಪಗಿರಿ, ಬ್ರಹ್ಮಗಿರಿ ವನ್ಯಧಾಮಗಳಿದ್ದರೂ, ಅವುಗಳನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸದೆ ಕೇವಲ ತಲಕಾವೇರಿ ವನ್ಯಧಾಮವನ್ನು ಮಾತ್ರ ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸ ಲಾಗಿದೆ. ಇದರ ಹಿಂದೆ ಮಡಿಕೇರಿ-ಪಾಣತ್ತೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ತಡೆಯೊಡ್ಡುವ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ನಮ್ಮ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದ ಅವರು ಹೆದ್ದಾರಿಯಿಂದ ಕೊಡಗಿನ ಪರಿಸರಕ್ಕೆ ಯಾವುದೇ ಹಾನಿ ಇಲ್ಲವೆಂದು ಅಭಿಪ್ರಾಯ ಪಟ್ಟರು. ತಲಕಾವೇರಿ ವನ್ಯಧಾಮ ವನ್ನು ಪರಿಸರ ಸೂಕ್ಷ್ಮ ವಲಯ ವೆಂದು ಘೋಷಿಸಿರುವದರಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಯಾವದೇ ವಾಣಿಜ್ಯ ಕೈಗಾರಿಕೆಗಳು, ಯಾಂತ್ರಿಕ ಕೃಷಿ ಚಟುವಟಿಕೆಗಳು ನಡೆಯುವಂತಿಲ್ಲ. ಕೋಳಿ ಸಾಕಾಣಿಕೆ, ಹೈನುಗಾರಿಕೆ ನಡೆಸುವಂತಿಲ್ಲ. ಕೃಷಿಯನ್ನೇ ನಂಬಿ ಬದುಕುತ್ತಿರುವ ಜಮ್ಮಾ ಹಿಡುವಳಿದಾರರ ಜೀವನವೇ ಸಂಕಷ್ಟಕ್ಕೆ ಸಿಲುಕಲಿದ್ದು, ಗ್ರಾಮೀಣ ಜನರನ್ನು ಧಮನಿಸಿ ಪಟ್ಟಣದ ಜನತೆಗೆ ಅನುಕೂಲ ಮಾಡಿಕೊಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಟೀಕಿಸಿದರು.

ಕೊಡಗಿನ ಎಲ್ಲಾ ಮೂಲ ನಿವಾಸಿಗಳು ಈ ಹಿಂದೆ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆಗಳನ್ನು ನಡೆಸಿ ಪರಿಸರ ಸೂಕ್ಷ್ಮ ವಲಯ ಹಾಗೂ ಕಸ್ತೂರಿ ರಂಗನ್ ವರದಿಗೆ ಆಕ್ಷೇಪಗಳನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರು ಎಂದರು.

ಆದರೆ ಈ ಎಲ್ಲಾ ವರದಿ, ನಿರ್ಣಯಗಳನ್ನು ಗಾಳಿಗೆ ತೂರಿದ ರಾಜ್ಯ ಸರಕಾರ, ಕೇಂದ್ರಕ್ಕೆ ತನ್ನ ಯಾವದೇ ಆಕ್ಷೇಪಣೆಯನ್ನು ಸಲ್ಲಿಸದ ಪರಿಣಾಮ ಇಂದಿನ ಈ ದುಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿ ದರು. ಪರಿಸರ ಸೂಕ್ಷ್ಮ ವಲಯ ಹಾಗೂ ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಅಂತಿಮವಾಗಿ ರಾಜ್ಯ ಸರಕಾರದ ವರದಿಯನ್ನು ಕೇಳಿದ್ದರೂ, ರಾಜ್ಯ ಸರಕಾರ ಆ ವರದಿಯನ್ನು ನೀಡುವಲ್ಲಿ ವಿಫಲವಾಗಿದೆ. ಗ್ರಾಮಸಭೆಗಳಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಬೆಲೆ ಇಲ್ಲ ಎಂದರು.

ಭಾಗಮಂಡಲ ವಲಯದ ಜನರಿಗೆ ಮಾರಕವಾಗಿರುವ ಪರಿಸರ ಸೂಕ್ಷ್ಮ ವಲಯ ಘೋಷಣೆಯಾಗಿ ರುವ ಹಿನ್ನೆಲೆಯಲ್ಲಿ ಈ ಭಾಗದ ಜನತೆ ಬೆತ್ತಲೆ ಮೆರವಣಿಗೆ ಮೂಲಕ ಸರಕಾರದ ಮಟ್ಟಕ್ಕೆ ಹೋಗಲು ಸಿದ್ದರಿದ್ದೇವೆ ಎಂದು ತಿಳಿಸಿದರು.