ಸುಂಟಿಕೊಪ್ಪ, ಜೂ. 3: ಮೋಜು-ಮಸ್ತಿಗಾಗಿ ಕೊಡಗಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ವಾಹನದಲ್ಲಿ ಬಂದ ಯುವಕರ ತಂಡ ಪಾನಮತ್ತರಾಗಿ ಕೊಡಗಿನ ಗಡಿ ಪ್ರದೇಶದಲ್ಲಿ ಪರಸ್ಪರ ಬಡಿದಾಡಿ ಕೊಂಡು, ದಿಕ್ಕುತೋಚದೆ ವಾಹನವನ್ನು ಮನಬಂದಂತೆ ಚಲಾಯಿಸಿಕೊಂಡು ಸರಣಿ ಅವಘಡ ನಡೆಸಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರದ ಪ್ರಶಾಂತನಗರ ದಿಂದ ಕ್ವಾಲಿಸ್ ಟೊಯೊಟೊ (ಕೆಎ-05ಜಡ್1214) ವಾಹನದಲ್ಲಿ ದರ್ಶನ್ ಕುಮಾರ್ (23) ಸೇರಿದಂತೆ ನಾಲ್ವರು ಇಂದು ಬೆಳಿಗ್ಗೆ ಕೊಡಗಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಬಂದಿದ್ದಾರೆ. ಪಿರಿಯಾಪಟ್ಟಣದಲ್ಲಿ ಮದ್ಯಸೇವಿಸಿದ ಈ ತಂಡದ ನಡುವೆ ಮಾತಿಗೆ ಮಾತು ಬೆಳೆದಿದ್ದು ಮಾರಕ ಆಯುಧಗಳಿಂದ ಹೊಡೆದಾಡಿಕೊಂಡಿದ್ದಾರೆ. ಅದೇ ತಂಡದಲ್ಲಿದ್ದ ಈರ್ವರು ಕಾಲ್ಕಿತ್ತಿದ್ದಾರೆ. ದರ್ಶನ್ ಎಂಬಾತ ಮದ್ಯದ ಅಮಲಿನಲ್ಲಿ ವಾಹನವನ್ನು ಯದ್ವಾತದ್ವಾ ಚಾಲಿಸಿಕೊಂಡು ಬಂದು ಬೈಲುಕೊಪ್ಪ ಹಾಗೂ ಕುಶಾಲನಗರದಲ್ಲಿ ನಿಲ್ಲಿಸಿದ್ದ ಆಟೋಗೆ (ಕೆಎ-12-3478) ಡಿಕ್ಕಿಪಡಿಸಿದ್ದಾನೆ. ಅಲ್ಲಿಂದ ದ್ವಿಚಕ್ರ ವಾಹನಕ್ಕೂ ಡಿಕ್ಕಿಯಾಗಿದ್ದು ದ್ವಿಚಕ್ರ ಸವಾರನ ಕೈ ಮುರಿತಗೊಂಡಿದೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದು 7ನೇ ಹೊಸಕೋಟೆಯಲ್ಲಿ ಮತ್ತೊಂದು ವಾಹನಕ್ಕೆ ಡಿಕ್ಕಿಪಡಿಸಿದ್ದಾನೆ. ಅಲ್ಲಿಯೂ ವಾಹನವನ್ನು ನಿಲ್ಲಿಸದೆ ತೀವ್ರ ಗಾಯವಾಗಿದ್ದರೂ ರಕ್ತಸಿಕ್ತವಾಗಿದ್ದ ವಾಹನವನ್ನು ಚಾಲಿಸಿಕೊಂಡು ಬಂದು ಸುಂಟಿಕೊಪ್ಪ ವಾಹನ ಚಾಲಕರ ನಿಲ್ದಾಣದ ಬಳಿ ಬಂದಿದ್ದಾನೆ. ವಾಹನ ಚಾಲಕರು ಹಾಗೂ ಪೊಲೀಸರು ಆತನನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಹನವನ್ನು ವಶಪಡಿಸಿಕೊಂಡ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹೆಚ್.ಎಸ್. ಬೋಜಪ್ಪ ಹಾಗೂ ಸಿಬ್ಬಂದಿಗಳು ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.