ಶ್ರೀಮಂಗಲ, ಜೂ. 3: ಶ್ರೀಮಂಗಲ ಗ್ರಾಮದ ನಿವಾಸಿ ಕೆ.ಎಸ್. ಮುರಳಿ - ವತ್ಸಲ ದಂಪತಿಯ ಪುತ್ರಿ ಕೆ.ಎಂ. ಮಾನಸ ಗೋಣಿಕೊಪ್ಪಲು ಸಮೀಪದ ಅರುವತ್ತೊಕ್ಲು ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, 2016-17ರ ಅಂತಿಮ ಪರೀಕ್ಷೆ ಬರೆದಿದ್ದಳು. ಶೇ. 95ರ ಅಂಕಗಳು ಲಭಿಸುವ ನಿರೀಕ್ಷೆಯಲ್ಲಿದ್ದಳು. ಆದರೆ ಫಲಿತಾಂಶ ಬಂದಾಗ ಕೇವಲ 516 ಅಂಕಗಳು ಬಂದು ಶೇ. 86ರ ಫಲಿತಾಂಶ ಬಂದಿದೆ. ಸಂಶಯಗೊಂಡ ವಿದ್ಯಾರ್ಥಿನಿ, ಪೋಷಕರು ಹಾಗೂ ಶಿಕ್ಷಕರು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದು ಉತ್ತರ ಪತ್ರಿಕೆಯ ಪ್ರತಿಗಳನ್ನು ಪಡೆದುಕೊಂಡಿದ್ದಾರೆ. ಉತ್ತರ ಪತ್ರಿಕೆಯನ್ನು ಪರಿಶೀಲಿಸಿದಾಗ ತಾನು ಬರೆದ ನಾಲ್ಕು ಹಾಳೆಗಳೇ ಇಲ್ಲದಿರುವದು ವಿದ್ಯಾರ್ಥಿನಿಗೆ ಆಘಾತ ಉಂಟುಮಾಡಿದೆ. ಈ ಬಗ್ಗೆ ವಿಚಾರಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ದೂರವಾಣಿ ಮುಖಾಂತರ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. 15 ರಿಂದ 20 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದಾಗ ಹಲವು ನಂಬರ್‍ಗಳು ಅಸ್ತಿತ್ವದಲ್ಲಿ ಇಲ್ಲ ಎಂಬ ಉತ್ತರ ಬಂದಿದೆ. ಕೆಲವು ಮೊಬೈಲ್ ನಂಬರ್‍ಗಳು ಸ್ವಿಚ್ ಆಫ್ ಬರುತ್ತಿದೆ. ಬೇಸತ್ತ ಪೋಷಕರು ಹಾಗೂ ವಿದ್ಯಾರ್ಥಿನಿ ಮಾಧ್ಯಮದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಪದವಿ ಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕಿ ‘ಶಿಖ’ ಆಪ್ತ ಸಹಾಯಕರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದಾಗ ವೆಬ್ ಸೈಟ್‍ಗೆ ವಿದ್ಯಾರ್ಥಿಯ ರೋಲ್ ನಂಬರ್ ಕಳುಹಿಸಲು ತಿಳಿಸಿದ್ದು, ಕಳೆದ ಶನಿವಾರ ನಂಬರ್ ಕಳಿಸಿದ ಬಳಿಕ ಅವರೂ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿನಿ ಹಾಗೂ ಪೋಷಕರಲ್ಲಿ ಆತಂಕ ಮನೆ ಮಾಡಿದೆ.

ತಾವು ತರಿಸಿದ ಉತ್ತರ ಪತ್ರಿಕೆಯ ಪ್ರತಿಯಲ್ಲಿ ಪ್ರಥಮ ಹಾಳೆಯಲ್ಲಿ (ಮುಖಪುಟ) ಪರೀಕ್ಷೆ ಬರೆಯಲು ಪಡೆದಿರುವ ಉತ್ತರ ಪತ್ರಿಕೆಗಳ ಹಾಳೆಗಳ ವಿವರದಲ್ಲಿ 22 + 4 ಒಟ್ಟು = 26 ಹಾಳೆಗಳೆಂದು ನಮೂದಿಸಲಾಗಿದೆ. ಇದಕ್ಕೆ ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಸಹಿಯಾಗಿದೆ. ಆದರೆ ಉತ್ತರ ಪತ್ರಿಕೆಯಲ್ಲಿ ಕೇವಲ 22 ಹಾಳೆಗಳು ಮಾತ್ರ ಇದ್ದು, ಉಳಿದ ನಾಲ್ಕು ಹಾಳೆಗಳು ನಾಪತ್ತೆಯಾಗಿದೆ. ಅವುಗಳ ಅಂಕಗಳೂ ಫಾರಂನಲ್ಲಿ ನಮೂದಿಸಲಾಗಿಲ್ಲ. ಹಾಗಾದರೆ ಉತ್ತರ ಪತ್ರಕೆಯ ಹಾಳೆಗಳೇನಾದವೂ?

ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ. ಸ್ವಾಮಿ ಅವರನ್ನು ಸಂಪರ್ಕಿಸಿದಾಗ ಮೌಲ್ಯಮಾಪನಕ್ಕೆ ಖಾಸಗಿಯವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಪದವಿ ಪೂರ್ವ ಶಿಕ್ಷಣ ಮಂಡಳಿಯಿಂದಲೇ ಪಡೆಯಬೇಕು. ನಮ್ಮಲ್ಲಿ ಈ ಬಗ್ಗೆ ಯಾವದೇ ಮಾಹಿತಿ ಸಿಗುವದಿಲ್ಲ. ನಮ್ಮ ಸಿಬ್ಬಂದಿಯು ಶಿಕ್ಷಣ ಮಂಡಳಿಗೆ ಹೋಗಿದ್ದು, ಪರಿಶೀಲನೆ ಮಾಡಲು ತಿಳಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.