ಮಡಿಕೇರಿ, ಜೂ. 3: ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ಕಾನೂನಾತ್ಮಕವಲ್ಲದ ಭೂ ಪರಿವರ್ತನೆಯ ನಿವೇಶನಗಳು ಮತ್ತು ಅಂತಹ ನಿವೇಶನದಲ್ಲಿ ರೂಪಿಸುವ ಕಟ್ಟಡಗಳಿಗೆ ಸ್ಥಳೀಯ ಆಡಳಿತ ಹಾಗೂ ಅಭಿವೃದ್ಧಿ ಪ್ರಾಧಿಕಾರಗಳಿಂದ ಯಾವದೇ ಅನುಮೋದನೆ ನೀಡದಂತೆ ಸಂಬಂಧಪಟ್ಟವರಿಗೆ ಕಟ್ಟಪ್ಪಣೆ ಮಾಡಿದೆ.1961ರ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ ಅನ್ವಯ ನಗರ ಅಥವಾ ಪಟ್ಟಣ ಪ್ರದೇಶಗಳಿಗೆ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸುವ ಮೊದಲೇ ಭೂ ಪರಿವರ್ತನೆಯಾದ ಜಮೀನುಗಳನ್ನು ವಿಭಜಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ತೆರೆದಿದ್ದರೆ ಅಂತಹ ನಿವೇಶನಗಳಲ್ಲಿ ಕಟ್ಟಡಗಳಿಗೆ ಅನುಮೋದನೆ ಅಥವಾ ತಾಂತ್ರಿಕ ಅಭಿಪ್ರಾಯ ನೀಡದಂತೆ ಸೂಚಿಸಲಾಗಿದೆ.

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಪ್ರಕಾರ ಕರ್ನಾಟಕ ಪೌರ ಕಾಯ್ದೆ 1964ರ ಕಲಂ 387 ದಿನಾಂಕ 8.12.1976ರಂತೆ ಈ 40 ವರ್ಷಗಳ ಪೂರ್ವದಲ್ಲಿ ಭೂ ಪರಿವರ್ತನೆಯಾಗಿದ್ದಲ್ಲಿ ಅಂತಹ ಜಮೀನುಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ತೆರೆದಿದ್ದರೆ ಮಾತ್ರ ಆ ನಿವೇಶನ ಕಟ್ಟಡಗಳಿಗೆ ತಾಂತ್ರಿಕ ಅಭಿಪ್ರಾಯ ನೀಡಬಹುದಾಗಿದೆ.

ಒಂದು ವೇಳೆ 8.12.1987ರ ಪೂರ್ವದಲ್ಲೇ ಸಂಬಂಧಿಸಿದ ಜಮೀನುಗಳಲ್ಲಿ ಭೂ ಪರಿವರ್ತನೆಗೊಳಿಸದೆ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನಗಳಿಗೆ ಖಾತೆ ತೆರೆದಿದ್ದರೆ ಕಾನೂನಾತ್ಮಕವಾಗಿ ಕಂದಾಯ ಇಲಾಖೆಯಿಂದ ಭೂ ಪರಿವರ್ತನೆ ಆದೇಶ ಪಡೆಯದೆ ಇದ್ದಲ್ಲಿ ಕೂಡ ತಾಂತ್ರಿಕ ಅಭಿಪ್ರಾಯ ನೀಡಬಾರದು.

ಬದಲಾಗಿ ನಿಯಮಾನುಸಾರ ಕಂದಾಯ ಇಲಾಖೆಯಿಂದ ಸಂಬಂಧಿಸಿದ ನಿವೇಶನಗಳಿಗೆ ಭೂ ಪರಿವರ್ತನೆ ಅನುಮೋದನೆ ಹೊಂದಿಕೊಂಡಿದ್ದಲ್ಲಿ ಮಾತ್ರ 1964ರ ಯೋಜನಾ ನೀತಿ ಅನ್ವಯ ಸ್ಥಳೀಯ ಸಂಸ್ಥೆಗಳಲ್ಲಿ ಕಟ್ಟಡ ಪರವಾನಿಗೆ ಸಂಬಂಧ ತಾಂತ್ರಿಕ ಅಭಿಪ್ರಾಯ ನೀಡಬಹುದಾಗಿದೆ.

ಬಹುತೇಕ ನಿಯಮಬಾಹಿರ : ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಕಾನೂನು ಪ್ರಕಾರ, ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಸಾವಿರಾರು ನಿವೇಶನಗಳು ಹಾಗೂ ಅಂಥ ನಿವೇಶನಗಳಲ್ಲಿ ತಲೆಯೆತ್ತಿರುವ ಕಟ್ಟಡಗಳು ನಿಯಮ ಬಾಹಿರವಾಗಿವೆ.

ಕಾರಣ ಇಲಾಖೆಯ ನಿಯಮ ಅನುಷ್ಠಾನಗೊಳಿಸದೆ ಅಥವಾ ಪಾಲಿಸದೆ ಸ್ಥಳೀಯ ಸಂಸ್ಥೆಗಳಿಂದ ಸಾಕಷ್ಟು ಕಡೆಗಳಲ್ಲಿ ಮನೆ, ವಾಣಿಜ್ಯ ಸಂಕೀರ್ಣ ಇತರ ಕಟ್ಟಡಗಳಿಗೆ ತಾಂತ್ರಿಕ ಒಪ್ಪಿಗೆಯನ್ನು ಅನೇಕ ವರ್ಷಗಳಿಂದ ನೀಡುತ್ತಾ ಬಂದಿರುವದು ಬೆಳಕಿಗೆ ಬಂದಿದೆ.

ಸಂಸ್ಥೆಗಳಿಂದಲೇ ಉಲ್ಲಂಘನೆ : ಮೂಲಗಳ ಪ್ರಕಾರ ಮಡಿಕೇರಿ ನಗರಸಭೆ ಹಾಗೂ ಮೂಡಾದಂತಹ ಸಂಸ್ಥೆಗಳು ಸೇರಿದಂತೆ ಗ್ರಾ.ಪಂ., ಪ.ಪಂ.ಗಳು ಕೂಡ ನಿವೇಶನಗಳ ಭೂ ಪರಿವರ್ತನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ತಾಂತ್ರಿಕ ಸಲಹೆ ನೀಡುವ ಸಂದರ್ಭ ಕಂದಾಯ ಇಲಾಖೆಯ ಗಮನ ಸೆಳೆಯದೆ ಏಕಪಕ್ಷೀಯವಾಗಿ ನಡೆದುಕೊಂಡಿದೆ. ಇದು ಸಂಸ್ಥೆಗಳಿಂದಲೇ ಕಾನೂನಿನ ಉಲ್ಲಂಘನೆಯಾಗಿದೆ.

ವಾಸ್ತವ ಬೆಳಕಿಗೆ : ಪ್ರಸಕ್ತ ಮಡಿಕೇರಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚುಮ್ಮಿ ದೇವಯ್ಯ ಮೇಲಿನ ಗೊಂದಲದ ಬಗ್ಗೆ ಸರಕಾರಕ್ಕೆ ಪತ್ರ ಬರೆದು ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ಗಮನ ಸೆಳೆದಿದ್ದಾರೆ. ಹಾಗಾಗಿ ವಾಸ್ತವ ಬೆಳಕಿಗೆ ಬಂದಂತಾಗಿದೆ.

ಹೀಗಿದ್ದರೂ ಕೂಡ 8.12.1976ರ ಪೂರ್ವದಲ್ಲಿ ಭೂ ಪರಿವರ್ತನೆಯಾಗದ ನಿವೇಶನಗಳಲ್ಲಿ ಕಾಮಗಾರಿ ಕೈಗೊಳ್ಳಲು ಸ್ಥಳೀಯ ಆಡಳಿತ ಅನುಮೋದನೆ ನೀಡಿದ್ದರೆ ಕಾನೂನು ತೊಡಕು ಎದುರಾಗಲಿದೆ. ಅಂತಹ ನಿವೇಶನ ಅಥವಾ ಕಟ್ಟಡಗಳಿಗೆ ಅಕ್ರಮ ಸಕ್ರಮ ಕಾಯ್ದೆಯಡಿ ಅರ್ಜಿ ಸಲ್ಲಿಸಿ ಕಂದಾಯ ಇಲಾಖೆಯಿಂದ ಹೊಸ ಅನುಮೋದನೆ ಕಾನೂನಾತ್ಮಕ ಪಡೆಯುವದು ಅನಿವಾರ್ಯವಾಗಲಿದೆ.

ಪ್ರಾಧಿಕಾರ ಅಧ್ಯಕ್ಷರು ಸರಕಾರಕ್ಕೆ ಸಲ್ಲಿಸಿರುವ ಮನವಿ ಪ್ರಕಾರ ನಗರಸಭೆ ವ್ಯಾಪ್ತಿಯಲ್ಲಿ ಶೇ. 90ರಷ್ಟು ತಾಂತ್ರಿಕ ಒಪ್ಪಿಗೆ ನೀಡಿರುವದು ಏಕಪಕ್ಷೀಯವಾಗಿದೆ.