ಹೊದ್ದೂರು, ಜೂ. 3: ಕೊಡಗಿನ ಕೃಷಿಕರು ಭತ್ತದ ಬೆಳೆ ಬೆಳೆಯುವಲ್ಲಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂದಿನ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಭತ್ತ ಬೆಳೆಯುವದೇ ಸವಾಲಿನಂತಾಗಿದೆ. ಈ ಹಿನ್ನೆಲೆ ಸರಕಾರ ಭತ್ತ ಬೆಳೆಯುವ ಕೃಷಿಕರ ನೆರವಿಗೆ ದಾವಿಸುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಮಯ್ಯ ಅಭಿಪ್ರಾಯಿಸಿದರು.

“ಕೃಷಿ ಅಭಿಯಾನ-ಇಲಾಖೆಯ ನಡಿಗೆ ರೈತರ ಬಾಗಿಲಿಗೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೊದ್ದೂರಿನ ಕಬ್ಬಡಕೇರಿಯ ದವಸ ಭಂಡಾರದಲ್ಲಿ ಇಂದು ವಿವಿಧ ಸಂಘ-ಸಂಸ್ಥೆ ಮತ್ತು ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿತವಾಗಿತ್ತು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚನ ದಿನೇಶ್ ಜಿಲ್ಲೆಯ ಬಹುತೇಕ ಕೃಷಿಕರಿಗೆ ಪಹಣಿ ಪತ್ರವಿಲ್ಲ. ಇರುವ ಪಹಣಿ ಪತ್ರಗಳೂ ಸಮರ್ಪಕವಾಗಿಲ್ಲ. ಇದರಿಂದಾಗಿ ಬಡ ಕೃಷಿಕರಿಗೆ ಸರಕಾರಿ ಸವಲತ್ತುಗಳು ಗಗನಕುಸುಮವಾಗಿವೆ. ಈ ನಿಟ್ಟಿನಲ್ಲಿ ರೈತಾಪಿವರ್ಗದವರೊಂದಿಗೆ ಸಹಕರಿಸುವಂತೆ ಆಗ್ರಹಿಸಿದರು.

ರಾಷ್ಟೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ ಜಿಲ್ಲಾ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಮಾತನಾಡಿ, ಆಡು-ಕೋಳಿ, ಹಸು ಸಾಕಾಣಿಕೆಗಳಿಗೆ ವಿವಿಧ ಬ್ಯಾಂಕ್‍ಗಳಿಂದ ಅಪಾರ ಪ್ರಮಾಣದಲ್ಲಿ ಸಾಲ ನೀಡಲಾಗುತ್ತಿದೆ. ಈ ಸಾಲವನ್ನು ಸೆಪ್ಟಂಬರ್ ಅಂತ್ಯದೊಳಗಾಗಿ ಪಡೆದವರಿಗೆ ಶೇ. 25 ರಿಂದ ಶೇ. 33 ರವರೆಗೂ ಸಹಾಯಧನ ಲಭ್ಯವಿದೆ. ಈ ಸೌಲಭ್ಯವನ್ನು ಅದಷ್ಟು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು.

ಮಡಿಕೇರಿ ತಾಲೂಕು ಕೃಷಿ ನಿರ್ದೇಶಕ ಡಾ. ರಾಜಶೇಖರ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪ್ರಸನ್ನಕುಮಾರ್ ಮಾತನಾಡಿದರು. ಬಳಿಕ ತಾಂತ್ರಿಕ ಸಮಾವೇಶದಲ್ಲಿ ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ವೀರೇಂದ್ರ ಕುಮಾರ್ ಕಾಳುಮೆಣಸಿನ ಕೃಷಿ, ಸಮಗ್ರ ರೋಗ ನಿಯಂತ್ರಣ ಇತ್ಯಾದಿ ವಿಚಾರಗಳ ಬಗ್ಗೆ ಬೆಳೆಗಾರರೊಂದಿಗೆ ವಿಚಾರ ವಿನಿಮಯ ನಡೆಸಿದರು. ಜೀವಾಣು ಗೊಬ್ಬರಗಳ ಬಗ್ಗೆ ರಮೇಶ್ ಕುಮಾರ್ ವಿವರಣೆ ನೀಡಿದರು. ವೇದಿಕೆಯಲ್ಲಿ ಮಡಿಕೇರಿ ತಾಲೂಕು ಎಪಿಎಂನ ಸದಸ್ಯ ವಾಂಚೀರ ಜಯ ನಂಜಪ್ಪ ಉಪಸ್ಥಿತರಿದ್ದರು.

ಮಡಿಕೇರಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಅಜ್ಜಿಕುಟ್ಟೀರ ಗಿರೀಶ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. - ಕೂಡಂಡ ರವಿ