ಸೋಮವಾರಪೇಟೆ, ಜೂ. 3: ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಬೇಸಿಗೆ ಶಿಬಿರಗಳು ಸಹಕಾರಿ. ಪೋಷಕರು ಮತ್ತು ಶಿಕ್ಷಕರ ಪ್ರೋತ್ಸಾಹ ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್ ಅಭಿಪ್ರಾಯಿಸಿದರು.

ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಬೆಂಗಳೂರಿನ ಕರ್ನಾಟಕ ಬಾಲ ಭವನ ವತಿಯಿಂದ ತಾಲೂಕು ಸ್ತ್ರೀಶಕ್ತಿ ಭವನದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಿಬಿರದಲ್ಲಿ 8 ರಿಂದ 15 ವರ್ಷದ ಒಳಗಿನ ಮಕ್ಕಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ, ಜೇಡಿಮಣ್ಣಿನ ಕಲೆ, ಕಸದಿಂದ ರಸ, ಸಮೂಹ ಸಂಗೀತ, ಸಮೂಹ ನೃತ್ಯ, ಯೋಗ, ಕರಾಟೆ ಸೇರಿದಂತೆ ಇನ್ನಿತರ ಕಲೆಗಳ ಬಗ್ಗೆ ತರಬೇತಿ ನೀಡಲಾಯಿತು.

ತಾಲೂಕು ಬಾಲಭವನ ಸಮಿತಿ ಅಧ್ಯಕ್ಷೆ ಸುಮಾ ಸುದೀಪ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಇದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಂಕರಯ್ಯ, ಕುಮಾರಸ್ವಾಮಿ, ಮುರುಗೇಶ್, ವೆಂಕಟೇಶ್, ಪ್ರೇಮಕುಮಾರ್, ಫಿಲೋಮಿನಾ, ವೀಣಾ ಭಾಗವಹಿಸಿದ್ದರು.