ಸೋಮವಾರಪೇಟೆ, ಜೂ. 3: ಕಾಂಗ್ರೆಸ್ ಸರ್ಕಾರದ ಬಳಿ ರಸ್ತೆಗಳ ಗುಂಡಿಮುಚ್ಚಲೂ ಹಣವಿಲ್ಲ ಎಂದು ಟೀಕಿಸಿರುವ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ರಾಜ್ಯ ಸರ್ಕಾರ ನಾಲ್ಕು ಬಾರಿ ಕೊಡಗಿಗೆ ತಲಾ ರೂ. 50 ಕೋಟಿಯಂತೆ ಒಟ್ಟು ರೂ. 200 ಕೋಟಿ ಪ್ಯಾಕೇಜ್ ಘೋಷಿಸಿ ಕೇವಲ ರೂ. 42 ಕೋಟಿ ಮಾತ್ರ ಬಿಡುಗಡೆ ಮಾಡಿದೆ ಎಂದು ಆರೋಪಿಸಿದರು.

ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸೋಮವಾರಪೇಟೆ ತಾಲೂಕು ಭಾರತೀಯ ಜನತಾ ಪಾರ್ಟಿಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ ಕೊಡಗಿಗೆ ರೂ. 50 ಕೋಟಿ ಪ್ಯಾಕೇಜ್ ಘೋಷಿಸಿತು. ಆದರೆ ಕೇವಲ ರೂ. 16 ಕೋಟಿ ಬಿಡುಗಡೆ ಮಾಡಿತ್ತು. ನಂತರದ ವರ್ಷದಲ್ಲಿ ಘೊಷಿಸಿದ ರೂ. 50 ಕೋಟಿಯಲ್ಲಿ ಬಿಡಿಗಾಸೂ ಬಂದಿಲ್ಲ. ಮೂರನೇ ವರ್ಷ ರೂ. 50 ಕೋಟಿ ಘೋಷಿಸಿ ಕೇವಲ ರೂ. 26 ಕೋಟಿ ಬಿಡುಗಡೆ ಮಾಡಿದ್ದು, ಇದೀಗ ಕ್ರಿಯಾ ಯೋಜನೆ ತಯಾರಾಗುತ್ತಿದೆ. ನಾಲ್ಕನೇ ಬಾರಿ ಘೋಷಿಸಿದ ರೂ. 50 ಕೋಟಿಯಲ್ಲಿ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ ಎಂದು ಬಹಿರಂಗಗೊಳಿಸಿದರು.

ಈ ಹಿಂದೆ ಭಾರತೀಯ ಜನತಾ ಪಾರ್ಟಿಯ ಸರ್ಕಾರ ಅಧಿಕಾರದಲ್ಲಿ ದ್ದಾಗ ಕೊಡಗಿಗೆ ರೂ. 1800 ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ತಲಾ

(ಮೊದಲ ಪುಟದಿಂದ) ರೂ. 50 ಕೋಟಿಯಂತೆ ರೂ. 100 ಕೋಟಿ, ನಂತರ ಸದಾನಂದ ಗೌಡ ಅವರ ಅವಧಿಯಲ್ಲಿ ರೂ. 50 ಕೋಟಿ ಪ್ಯಾಕೇಜ್ ಘೋಷಿಸಿ ಮಾರ್ಚ್ 1 ರೊಳಗೆ ಬಿಡುಗಡೆ ಮಾಡಲಾಗಿತ್ತು ಎಂದರು.

ಬಿಜೆಪಿ ಸರ್ಕಾರ ಇದ್ದಾಗ ಜಿ.ಪಂ. ಕ್ಷೇತ್ರಗಳಿಗೆ ತಲಾ ರೂ. 60 ಲಕ್ಷ ಅನುದಾನ ಬರುತ್ತಿತ್ತು. ಈಗ ರೂ. 10 ಲಕ್ಷ ಬರುತ್ತಿದೆ. ತಾಲೂಕು ಪಂಚಾಯಿತಿ ಪ್ರತಿ ಕ್ಷೇತ್ರಕ್ಕೆ ನಮ್ಮ ಸರ್ಕಾರ ವಾರ್ಷಿಕ ರೂ. 20 ರಿಂದ 25 ಲಕ್ಷ ನೀಡುತ್ತಿತ್ತು. ಈಗ ಕೇವಲ ರೂ. 8 ಲಕ್ಷ ಬರುತ್ತಿದೆ. ಅಭಿವೃದ್ಧಿಯ ಚಿಂತನೆಯನ್ನು ಮರೆತಿರುವ ಇಂತಹ ಸರ್ಕಾರದಿಂದ ಜನತೆ ಭ್ರಮನಿರಸನ ಗೊಂಡಿದ್ದಾರೆ ಎಂದು ಶಾಸಕರು ಟೀಕಿಸಿದರು.

ಬಿ.ಜೆ.ಪಿ. ಸರಕಾರ ಕೊಡಗಿನಲ್ಲಿ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ಸ್ನಾತಕೋತ್ತರ ಕಾಲೇಜು, ಕ್ರೀಡಾ ಶಾಲೆ, ಸೈನಿಕ ಶಾಲೆ, ಹೆಚ್ಚುವರಿಯಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿತ್ತು. ಈಗಿನ ಸರ್ಕಾರ ಇಂತಹ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದ ರಂಜನ್, ಮುಂದಿನ ಬಾರಿ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಸರ್ಕಾರ ಅಧಿಕಾರ ಬರಲಿದ್ದು, ಕೊಡಗು ಹೆಚ್ಚಿನ ಅಭಿವೃದ್ಧಿ ಕಾಣಲಿದೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಇಂದು ಪ್ರಪಂಚವೇ ಭಾರತದತ್ತ ದೃಷ್ಟಿನೆಡುವಂತೆ ಪ್ರಧಾನಿ ಮೋದಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತರ ಪ್ರದೇಶದ ಗೆಲುವು ಪಕ್ಷಕ್ಕೆ ಹೆಚ್ಚಿನ ಶಕ್ತಿ ತಂದುಕೊಟ್ಟಿದೆ. ಕಾರ್ಯಕರ್ತರು ಹಾಗೂ ನಾಯಕರು ಪಕ್ಷದ ಸಂಘಟನೆಗಾಗಿ ಸಮಯ ಮೀಸಲಿಡಬೇಕಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 150 ಶಾಸಕರನ್ನು ಗೆಲ್ಲಿಸಬೇಕಿದೆ. ಕೊಡಗಿನಲ್ಲಿ ಎರಡೂ ಕ್ಷೇತ್ರಗಳನ್ನು ಗೆಲ್ಲಬೇಕಿದ್ದು, ಒಗ್ಗಟ್ಟಿನ ಸಂಘಟನೆ ಅಗತ್ಯ ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮಾತನಾಡಿ, ರಾಜ್ಯ ಸರ್ಕಾರ ಪ್ರತಿಯೊಂದು ಯೋಜನೆಯನ್ನೂ ಜಾತಿ ಆಧಾರದ ಮೇಲೆ ಅನುಷ್ಠಾನಗೊಳಿಸುತ್ತಿದೆ. ಜಾತಿಗಳ ನಡುವೆ ಕಂದಕ ಸೃಷ್ಟಿಸುತ್ತಿದೆ. ಕೇಂದ್ರದ ಮೋದಿ ಸರ್ಕಾರ ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಪಕ್ಷದ ತಾಲೂಕು ಅಧ್ಯಕ್ಷ ಎಂ.ಎನ್. ಕೊಮಾರಪ್ಪ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪಕ್ಷದ ಎಸ್.ಸಿ. ಮೋರ್ಚಾ ಅಧ್ಯಕ್ಷ ಸತೀಶ್, ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷರುಗ ಳಾದ ಮಾದಪ್ಪ, ಉಷಾ ತೇಜಸ್ವಿ, ತಾ.ಪಂ. ಸದಸ್ಯೆ ತಂಗಮ್ಮ, ಧರ್ಮಪ್ಪ, ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಕೃಷಿ ಮೋರ್ಚಾದ ಎಸ್.ಪಿ. ಪೊನ್ನಪ್ಪ, ಮುಖಂಡರಾದ ಜಿ.ಎಲ್. ನಾಗರಾಜ್, ಕೆ.ವಿ. ಮಂಜುನಾಥ್, ಸುಮಾ ಸುದೀಪ್, ಜೆ.ಸಿ. ಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪಕ್ಷದ ವಿವಿಧ ಘಟಕ ಹಾಗೂ ಮೋರ್ಚಾಗಳ ಪದಾಧಿಕಾರಿಗಳು, ಜಿ.ಪಂ., ತಾ.ಪಂ., ಗ್ರಾ.ಪಂ. ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.