ಮಡಿಕೇರಿ, ಜೂ. 3: ರಾಜ್ಯ ಸರಕಾರದಿಂದ ತಾ. 4ರಂದು (ಇಂದು) ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆಯೊಂದಿಗೆ ಪೂಜಾ ವಿಧಿ - ವಿಧಾನ ನಡೆಸಲು ತಯಾರಿ ನಡೆದಿದೆ.

ಜಿಲ್ಲಾ ಆಡಳಿತ ಹಾಗೂ ಸಂಬಂಧಪಟ್ಟ ಯಾವ ಇಲಾಖೆಯಿಂದಲೂ ರಾಜ್ಯ ನೀರಾವರಿ ಸಚಿವರ ಸಮ್ಮುಖದಲ್ಲಿ ನಡೆಯಲಿರುವ ಈ ಕಾರ್ಯಕ್ರಮಗಳ ಕುರಿತು ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಬಸವರಾಜ್ ಹಾಗೂ ಅಧೀಕ್ಷಕ ಅಭಿಯಂತರ ವಿಜಯಕುಮಾರ್ ತಂಡ ತಲಕಾವೇರಿಗೆ ಭೇಟಿ ನೀಡಿ ಕ್ಷೇತ್ರದ ಅರ್ಚಕರನ್ನು ಸಂಪರ್ಕಿಸಿ ಪೂಜಾ ಸಾಮಗ್ರಿಗಳ ಪಟ್ಟಿ ಪಡೆದು ಹಿಂತೆರಳಿರುವದು ಖಾತರಿಯಾಗಿದೆ.

ಅಲ್ಲದೆ ತಾ. 4ರಂದು (ಇಂದು) ಬೆಳಿಗ್ಗೆ 10 ಗಂಟೆ ಸಮಯಕ್ಕೆ ಭಾಗಮಂಡಲಕ್ಕೆ ಹೆಲಿಕಾಪ್ಟರ್ ಬಂದಿಳಿಯುವ ಸುಳಿವಿನೊಂದಿಗೆ ಹೆಲಿಪ್ಯಾಡ್ ನಿರ್ಮಾಣದ ತಯಾರಿಯೂ ನಡೆದಿದೆ. ಬಲ್ಲ ಮೂಲಗಳ ಪ್ರಕಾರ ರಾಜ್ಯ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಹಾಗೂ ಆದಿಚುಂಚನಗಿರಿ ಮಠಾಧೀಶರು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಲಿರುವರೆಂದು ಗೊತ್ತಾಗಿದೆ.

ಈಗಾಗಲೇ ರಾಜ್ಯದ ಪ್ರಮುಖ ನದಿಗಳ ಉಗಮ ಕ್ಷೇತ್ರಗಳಲ್ಲಿ ಮಳೆಗಾಗಿ ವಿಶೇಷ ಪೂಜೆ ಕೈಗೊಂಡಿರುವ ಸರಕಾರ, ಭಾಗಮಂಡಲ ಹಾಗೂ ತಲಕಾವೇರಿಯಲ್ಲೂ ಕೂಡ ನೀರಾವರಿ ನಿಗಮದಿಂದ ಧಾರ್ಮಿಕ ಕೈಂಕರ್ಯಕ್ಕೆ ಮುಂದಾಗಿದ್ದು, ತಲಕಾವೇರಿ ತೀರ್ಥ ಕುಂಡಿಕೆಯಲ್ಲಿ ಸಂಕಲ್ಪ ನೆರವೇರಲಿರುವದಾಗಿ ಗೊತ್ತಾಗಿದೆ.

ಈ ಸಂಬಂಧ ಕ್ಷೇತ್ರ ಪುರೋಹಿತರನ್ನು ಸಂಪರ್ಕಿಸಿರುವ ಕಾವೇರಿ ನಿಗಮ ಅಧಿಕಾರಿಗಳು, ನೀರಾವರಿ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಇತರ ಗಣ್ಯರು ಪಾಲ್ಗೊಳ್ಳುವ ದಿಸೆಯಲ್ಲಿ ತಯಾರಿ ನಡೆಸಿರುವದಾಗಿ ಖಚಿತಪಟ್ಟಿದೆ.

ವಿಶೇಷವಾಗಿ ಭಾಗಮಂಡಲದಲ್ಲಿ ಸಂಗಮ ಕ್ಷೇತ್ರಕ್ಕೆ ಹೊಂದಿಕೊಂಡಂತೆ ನಡೆಯಲಿರುವ ಪೂಜಾ ಕಾರ್ಯಕ್ರಮಗಳಲ್ಲಿ ಆದಿ ಚುಂಚನಗಿರಿ ಮಠಾಧೀಶರು ಸೇರಿದಂತೆ ಇತರ ಸಂತರು ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಮಧ್ಯಾಹ್ನ ತನಕ ಭಾಗಮಂಡಲದಲ್ಲಿ ದೇವತಾ ಕೈಂಕರ್ಯಗಳನ್ನು ಪೂರೈಸಿ, ಆ ಬಳಿಕ ತಲಕಾವೇರಿಯತ್ತ ಗಣ್ಯರು ತೆರಳಿ ಕಾವೇರಿ ಮಾತೆಗೆ ಪ್ರಾರ್ಥನೆ ಸಲ್ಲಿಸಲಿದ್ದು, ಈಗಾಗಲೇ ಬಾಗಿನ ಅರ್ಪಿಸಲು ಬೇಕಾಗುವ ಸಾಮಗ್ರಿಗಳ ಪಟ್ಟಿಯನ್ನು ಕೂಡ ಅಧಿಕಾರಿಗಳು ಕೊಂಡೊಯ್ದಿರುವರೆಂದು ಗೊತ್ತಾಗಿದೆ. ಅಲ್ಲದೆ ಭೋಜನಕ್ಕೆ ತಯಾರಿ ಮಾಡಲಾಗದೆ.