ಮಡಿಕೇರಿ, ಜೂ. 3: ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾಗಿ ರುವ (ಡಿ.ಜಿ.) ರೂಪಕುಮಾರ್ ದತ್ತ ಅವರು ಇಂದು ಜಿಲ್ಲೆಗೆ ಭೇಟಿ ನೀಡುವದರೊಂದಿಗೆ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ್ದು, ಕಟ್ಟುನಿಟ್ಟಿನ ಸುರಕ್ಷತಾ ಕ್ರಮಕ್ಕೆ ಆದೇಶಿಸಿದ್ದಾರೆ.ಜಿಲ್ಲಾ ಪೊಲೀಸ್ ಕೇಂದ್ರಕ್ಕೆ ಆಗಮಿಸಿದ ಡಿ.ಜಿ. ರೂಪಕುಮಾರ್ ದತ್ತ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ಬರಮಾಡಿ ಕೊಂಡರಲ್ಲದೆ, ಪೊಲೀಸ್ ದಳದಿಂದ ಗೌರವ ರಕ್ಷೆ ನೀಡಲಾಯಿತು.

ಬಳಿಕ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಎಸ್ಪಿ ಸೇರಿದಂತೆ ಜಿಲ್ಲೆಯ ಪೊಲೀಸ್ ಉಪ ಅಧೀಕ್ಷಕರುಗಳು, ಎಲ್ಲಾ ಪೊಲೀಸ್ ವೃತ್ತ ನಿರೀಕ್ಷಕರೊಂದಿಗೆ ಕೇರಳ ಗಡಿಯಲ್ಲಿರುವ ಕೊಡಗು ಜಿಲ್ಲೆಯ ಪರಿಸ್ಥಿತಿಯ ಸೂಕ್ಷ್ಮತೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಅಲ್ಲದೆ, ಜಿಲ್ಲೆಯಲ್ಲಿ ಅಪರಾಧ ತಡೆಗಟ್ಟುವ ದಿಸೆಯಲ್ಲಿ ಅನುಸರಿಸುತ್ತಿ ರುವ ಮುಂಜಾಗ್ರತಾ ಕ್ರಮಗಳು, ಪೊಲೀಸ್ ಗಸ್ತು ಸುಧಾರಣೆ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜನಸಂಪರ್ಕ ಸುಧಾರಣಾ ವ್ಯವಸ್ಥೆ, ಶಾಂತಿ, ಸಾಮರಸ್ಯ ಹದಗೆಡದಂತೆ ಅನುಸರಿಸುತ್ತಿರುವ ಅಂಶಗಳ ಬಗ್ಗೆ ಡಿಜಿ ರೂಪಕುಮಾರ್ ದತ್ತ ಮಾರ್ಗ ದರ್ಶನ ನೀಡಿದ್ದಾಗಿ ತಿಳಿದುಬಂದಿದೆ.