ಭಾಗಮಂಡಲ, ಜೂ. 4: ಉತ್ತಮ ಮಳೆಯಿಂದ ರಾಜ್ಯ ಸುಭಿಕ್ಷವಾಗಲೆಂದು ಪ್ರಾರ್ಥಿಸುವ ಸಲುವಾಗಿ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲದ ತ್ರಿವೇಣಿ ಸಂಗಮ, ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ ರಾಜ್ಯ ನೀರಾವರಿ ಸಚಿವ ಎಂ.ಬಿ.ಪಾಟಿಲ್ ಮತ್ತು ಆದಿ ಚುಂಚನಗಿರಿ ಮಠದ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿ ಭಗಂಡೇಶ್ವರನಿಗೆ ಪೂಜೆ ಸಲ್ಲಿಸಲು ತೆರಳುತ್ತಿದ್ದಂತೆ ಧಾರಾಕಾರವಾಗಿ ಮಳೆ ಸುರಿಯು ವದರ ಮೂಲಕ ವರುಣ ದೇವನ ಆಗಮನವಾಗಿದೆ ಎನ್ನುವ ಭಾವನೆ ನೆರೆದ ಭಕ್ತಾದಿಗಳಲ್ಲಿ ಮೂಡಿತು.

ರಾಜ್ಯದ ನೀರಾವರಿ ಸಚಿವರು ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರು ಸಕಲ ಚರಾಚರ ಸಮೃದ್ಧಿಯಿಂದಿರುವ ಪ್ರಾರ್ಥನೆಯ ಉದ್ದೇಶದೊಂದಿಗೆ ಅಪರಾಹ್ನ 3 ಗಂಟೆಗೆ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಹಾಗೂ ತ್ರಿವೇಣಿ ಸಂಗಮ ಭಗಂಡೇಶ್ವರ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಲು ಪತ್ನಿ, ಪರಿವಾರ ಸಮೇತವಾಗಿ ಆಗಮಿಸಿದರು.

ಮೊದಲಿಗೆ ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಿದ ಅವರು ನಂತರ ಭಗಂಡೇಶ್ವರ ಕ್ಷೇತ್ರದಲ್ಲಿ ಗಣಪತಿ, ಮಹಾವಿಷ್ಣು, ಸುಬ್ರಮಣ್ಯ, ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ರಾಜ್ಯದ ಜನತೆ ನೆಮ್ಮದಿಯಿಂದ ಬಾಳುವಂತೆ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಆದಿ ಚುಂಚನಗಿರಿ ಸಂಸ್ಥಾನ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯವರ ನೇತೃತ್ವದಲ್ಲಿ ಕೊಡಗು, ಹಾಸನ ಜಿಲ್ಲೆಗಳ ಉಸ್ತುವಾರಿ ವಹಿಸಿದ ಶಂಭುನಾಥ ಸ್ವಾಮೀಜಿ, ಮಳವಳ್ಳಿ ಶಾಸಕ ನರೇಂದ್ರನಾಥ ಸ್ವಾಮಿಯವ ರೊಂದಿಗೆ ನೀರಾವರಿ ಸಚಿವ ಎಂ.ಬಿ. ಪಾಟಿಲ್ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು.

ನಂತರ ಸ್ವಾಮೀಜಿಗಳೊಂದಿಗೆ ಭಗಂಡೇಶ್ವರ ಸನ್ನಿಧಿಗೆ ತೆರಳುತ್ತಿದ್ದಂತೆ ಧಾರಾಕಾರವಾಗಿ ಮಳೆ ಸುರಿಯುವದರ ಮೂಲಕ ಭಕ್ತ ಸಮೂಹವನ್ನು ಆನಂದಗೊಳಿಸಿತು. ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ನಂತರ ಸುರಿಯುವ ಮಳೆಯಲ್ಲಿ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.

ಸ್ವಾಮೀಜಿ ಮತ್ತು ಸಚಿವರನ್ನು ಪೂಜಾ ಕುಣಿತ, ಮಹಿಳೆಯರ ಪೂರ್ಣ ಕುಂಭ ಸ್ವಾಗತ, ಚಂಡೆ ಮೇಳ, ವಾದ್ಯದೊಂದಿಗೆ ಭಗಂಡೇಶ್ವರ ದೇವಳಕ್ಕೆ ಸ್ವಾಗತಿಸಲಾಯಿತು.

ರಾಜ್ಯದ ಜೀವನಾಡಿಗಳು

ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ನೀರಾವರಿ ಸಚಿವ ಎಂ.ಬಿ.ಪಾಟಿಲ್ ಕೃಷ್ಣೆ, ಕಾವೇರಿ ರಾಜ್ಯದ ಜೀವನಾಡಿಗಳು. ಎರಡು ಕಣ್ಣುಗಳಿದ್ದಂತೆ.

(ಮೊದಲ ಪುಟದಿಂದ) ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜನರಿಗೆ ಕುಡಿಯುವ ನೀರು, ಕೃಷಿಗೆ ನೀರು, ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರ ಯಥೇಚ್ಛವಾಗಿ ಲಭಿಸಲು ಪ್ರಾರ್ಥಿಸುವ ಸಲುವಾಗಿ ಕ್ಷೇತ್ರಕ್ಕೆ ಆಗಮಿಸಿದ್ದೇನೆ. ಈ ಬಗ್ಗೆ ಹಲವು ವಾದ- ವಿವಾದಗಳಿದ್ದರೂ ಅದನ್ನೆಲ್ಲ ಬದಿಗೊತ್ತಿ ಈ ತಾಯಿಯ ಸೇವೆ ಮಾಡುತ್ತಿದ್ದೇನೆ. ನಾವು ಮೂರ್ತಿ ಯನ್ನು ಪೂಜಿಸುವವರು. ಮೌಢ್ಯಗಳಿಗೆ ಅವಕಾಶವಿಲ್ಲ. ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಒಲವಿಲ್ಲದಿದ್ದರೂ ಅವರ ಧರ್ಮಪತ್ನಿ ಪೂಜೆ ಪುನಸ್ಕಾರ ನಡೆಸುತ್ತಿರುವದರಿಂದ ಮುಖ್ಯಮಂತ್ರಿಗಳಿಗೆ ಒಳಿತಾಗಿದೆ ಎಂದರು.

ಮೇಲ್ಸೇತುವೆಗೆ ಶೀಘ್ರ ಚಾಲನೆ

ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಾಣ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಅಧಿವೇಶನ ಮುಗಿದ ನಂತರ ಆದಷ್ಟು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ, ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮತ್ತು ಸ್ಥಳೀಯ ಶಾಸಕ ಕೆ.ಜಿ.ಬೋಪಯ್ಯ ಅವರೊಂದಿಗೆ ಚರ್ಚಿಸಲಾಗುವದು. ಸರ್ಕಾರ ನುಡಿದಂತೆ ನಡೆಯಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.

ಈ ಸಂದರ್ಭದಲ್ಲಿ ಎಂ.ಎಲ್.ಸಿ ಶಾಂತೆಯಂಡ ವೀಣಾ ಅಚ್ಚಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಮುಖಂಡರಾದ ಕೋಡಿ ಪೆÇನ್ನಪ್ಪ, ರವಿ ಹೆಬ್ಬಾರ್, ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಪಾರುಪತ್ಯೆಗಾರ ಕೊಂಡಿರ ಪೆÇನ್ನಣ್ಣ, ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು. ಅರ್ಚಕ ಹರೀಶ್ ಭಟ್, ರವಿ ಭಟ್, ಶ್ರೀನಿವಾಸ್, ಕಿರಣ್ ಪೂಜಾ ವಿಧಿ ವಿಧಾನ ನೆರವೇರಿಸಿದರು.

ಕ್ಷೇತ್ರದಲ್ಲಿ ಪರ್ಜನ್ಯ ಜಪ

ಸಚಿವರು ಹಾಗೂ ಸ್ವಾಮೀಜಿ ಆಗಮಿಸುವ ಮುನ್ನ ಬೆಳಿಗ್ಗೆ 8 ಗಂಟೆಯಿಂದಲೇ ತಲಕಾವೇರಿಯಲ್ಲಿ ಪರ್ಜನ್ಯ ಜಪ ಅರ್ಚಕ ಪ್ರಶಾಂತ್ ಆಚಾರ್ಯ ಅವರ ಮೂಲಕ ನಡೆಯಿತು. ಈ ಸಂದರ್ಭ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ವಿಜಯಕುಮಾರ್, ಕಾರ್ಯಪಾಲಕ ಇಂಜಿನಿಯರ್ ಬಸವರಾಜ ಗೌಡ, ಮುಖ್ಯ ಇಂಜಿನಿಯರ್ ಮಂಜುನಾಥ್ ಹಾರಂಗಿ ಜಲಾಶಯ ಮುಖ್ಯ ಇಂಜಿನಿಯರ್ ಚಂದ್ರಕುಮಾರ್ ಇವರುಗಳು ಉಪಸ್ಥಿತರಿದ್ದರು. ಪರ್ಜನ್ಯ ಜಪ, ಹೋಮ ಮಧ್ಯಾಹ್ನದವರೆಗೂ ನಡೆಯಿತು. ಆದಿಚುಂಚನಗಿರಿ ಸಂಸ್ಥಾನದ ಆಶ್ರಯದ ಕ್ಷೇತ್ರದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

‘ಶಕ್ತಿ’ಯೊಂದಿಗೆ ಮಾತನಾಡಿದ ಅಧೀಕ್ಷಕ ಇಂಜಿನಿಯರ್ ವಿಜಯಕುಮಾರ್ ಅವರು, ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳ ಖರ್ಚು ವೆಚ್ಚವನ್ನು ಸಚಿವ ಎಂ.ಬಿ. ಪಾಟೀಲ್ ಅವರೇ ಭರಿಸಿದ್ದಾರೆ. ಅನ್ನ ಸಂತರ್ಪಣೆ ವೆಚ್ಚವನ್ನು ಸ್ವಾಮೀಜಿ ನಿರ್ವಹಿಸಿದ್ದಾರೆ.

ಮುಂಗಾರು ಪ್ರಾರಂಭವಾಗುವ ಮುನ್ನ ಜೀವನದಿ ಕಾವೇರಿಯಲ್ಲಿ ಸಾಂಪ್ರದಾಯಿಕ ವಿಧಿ ವಿಧಾನ ಗಳೊಂದಿಗೆ ಪ್ರಾರ್ಥನೆ ಮೂಲಕ ಮಳೆ - ಬೆಳೆಗಾಗಿ ಪೂಜಾದಿಗಳನ್ನು ನಡೆಸಲಾಗಿದೆ. ಇದರಲ್ಲಿ ಅಪಾರ್ಥ ಕಲ್ಪಿಸುವದು ತರವಲ್ಲ ಎಂದು ಅಭಿಪ್ರಾಯಪಟ್ಟರು. ತಲಕಾವೇರಿಯಲ್ಲಿ ತಕ್ಕಮುಖ್ಯಸ್ಥ ಕೋಡಿ ಪೊನ್ನಪ್ಪ, ಅರ್ಚಕ ನಾರಾಯಣಾಚಾರ್ ಮೊದಲಾದವರು ಹಾಜರಿದ್ದರು.

- ವರದಿ: ಪಿ.ವಿ. ಪ್ರಭಾಕರ್, ಚಿತ್ರಗಳು: ಲಕ್ಷ್ಮೀಶ್, ಜಗನ್