ವೀರಾಜಪೇಟೆ, ಜೂ. 4: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕೇರಳದ ಕರಾವಳಿ ಪ್ರದೇಶವಾದ ತಲಚೇರಿ, ಕಣ್ಣಾನೂರು ಸುತ್ತ ಮುತ್ತಲಿನ ಪ್ರದೇಶದಲ್ಲಿ ಜೂನ್ ಒಂದರಿಂದ ಮುಂಗಾರು ಮಳೆ ಪ್ರವೇಶಿಸಿ ಮೋಡ ಕವಿದ ವಾತಾವರಣದೊಂದಿಗೆ ಮಳೆ ಸುರಿಯುತ್ತಿದೆ.ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟ, ಪೆರುಂಬಾಡಿ ಯಲ್ಲಿಯೂ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆ ಸುರಿಯುತ್ತಿದೆ. ವೀರಾಜಪೇಟೆ ವಿಭಾಗದಲ್ಲಿಯೂ ಶುಕ್ರವಾರ ಸಂಜೆಯಿಂದ ಮಳೆ ಸುರಿಯುತ್ತಿದ್ದು ಶನಿವಾರ ಅಪರಾಹ್ನ ಸುಮಾರು 2 ಗಂಟೆಗಳ ಕಾಲ ರಭಸದಿಂದ ಮಳೆ ಸುರಿಯಿತು. ಶನಿವಾರ ಅಪರಾಹ್ನದಿಂದಲೇ ಈ ವಿಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು ಇಂದು ಕೂಡ ಅದೇ ವಾತಾವರಣ ಮುಂದುವರೆದಿದೆ. ಇಂದು ಅಪರಾಹ್ನ ಗುಡುಗು ಮಿಂಚಿನ ಆರ್ಭಟವಿದ್ದರೂ ಸಂಜೆಯವರೆಗೂ ಮಂದ ಗತಿಯಲ್ಲಿ ಮಳೆ ಸುರಿದಿದೆ.

ಮುಂಜಾಗ್ರತಾ ಕ್ರಮ

ವೀರಾಜಪೇಟೆ ವಿಭಾಗಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಟ್ಟಣ ಪಂಚಾಯಿತಿ ಇಲ್ಲಿನ ಮಾಂಸ ಮಾರುಕಟ್ಟೆಯಲ್ಲಿರುವ ರಾಜ ಕಾಲುವೆಯನ್ನು ಶುಚಿಗೊಳಿಸುವ ಕಾಮಗಾರಿಗೆ ಚಾಲನೆ ನೀಡಿದೆ. ಮೊಗರಗಲ್ಲಿಯ ತೋಡಿನಿಂದ ಮಳೆ ನೀರು ಸರಾಗವಾಗಿ ಹರಿಯಲು ತೋಡಿನಲ್ಲಿ ತುಂಬಿದ್ದ ಕಸ ಕಡ್ಡಿಯನ್ನು ತೆಗೆದು ಶುಚಿಗೊಳಿಸುವ ಕಾಮಗಾರಿ ಆರಂಭಿಸಲಾಗಿದೆ. ಪಟ್ಟಣ ಪಂಚಾ ಯಿತಿಯ ಆಯ್ದ ರಸ್ತೆಗಳ ಚರಂಡಿಯನ್ನು ಶುಚಿಗೊಳಿಸಲು ಕ್ರಮ ಕೈಗೊಂಡಿರುವದಾಗಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.