ಸೋಮವಾರಪೇಟೆ, ಜೂ. 4: ಕನ್ನಡ ಈ ನೆಲದ ಭಾಷೆ. ಅತ್ಯಂತ ಶ್ರೀಮಂತ ಸಂಸ್ಕøತಿ, ಸಾಹಿತ್ಯವನ್ನು ಹೊಂದಿರುವ ಕನ್ನಡ ನುಡಿಹಬ್ಬಕ್ಕೆ ಸೋಮವಾರಪೇಟೆ ಸಿದ್ಧಗೊಂಡಿದೆ. ವಿಪರ್ಯಾಸವೆಂದರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿರುವ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಹೊತ್ತಿಗೆ ತಾಲೂಕಿನ ಐದು ಕನ್ನಡ ಮಾಧ್ಯಮ ಶಾಲೆಗಳಿಗೆ ಬೀಗ ಬಿದ್ದಿದೆ! ಗ್ರಾಮೀಣ ಭಾಗದಲ್ಲಿ ಅಕ್ಷರ ಕಲಿಕೆಯೊಂದಿಗೆ ಶೈಕ್ಷಣಿಕ ಪ್ರಗತಿ, ಜ್ಞಾನಾರ್ಜನೆಯ ಕೇಂದ್ರವಾಗಿದ್ದ ಕನ್ನಡ ಮಾಧ್ಯಮ ಶಾಲೆಗಳ ಮೇಲೆ ಇತ್ತೀಚೆಗೆ ಅವಲಂಬನೆ ಕಡಿಮೆಯಾಗಿರುವ ಪರಿಣಾಮ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಿ ಕೊಠಡಿಗಳಿಗಷ್ಟೇ ಅಲ್ಲದೇ ಮುಖ್ಯದ್ವಾರಕ್ಕೆ ಬೀಗ ಜಡಿಯಲಾಗಿದೆ.

ಕನ್ನಡ ಮಾಧ್ಯಮ ಶಾಲೆಗಳಿಂದಲೇ ಕನ್ನಡದ ಉಳಿವು ಎಂಬದು ನಿರ್ವಿವಾದ ವಾಗಿದ್ದರೂ, ಬದಲಾಗುತ್ತಿರುವ ಜಗತ್ತಿನ ವೇಗಕ್ಕೆ ತಕ್ಕಂತೆ ಉದ್ಯೋಗ ಅಥವಾ ಜೀವನಕ್ಕಾಗಿ ಆಂಗ್ಲ ಮಾಧ್ಯಮವನ್ನು ಅಪ್ಪಿಕೊಳ್ಳುವದು ಅನಿವಾರ್ಯವೂ ಆಗಿದೆ.

(ಮೊದಲ ಪುಟದಿಂದ) ಆದರೆ ಈ ನೆಲದ ಸಂಸ್ಕøತಿ, ಆಚಾರ, ವಿಚಾರ, ಭಾಷಾ ಸಾಹಿತ್ಯ, ಸಂವಹನದ ಪ್ರಮುಖ ಮಾರ್ಗವಾಗಿರುವ ಕನ್ನಡವನ್ನು ಮರೆತರೆ ನೆಲದ ಸೊಗಡು ನಾಶವಾದಂತೆಯೇ ಸರಿ. ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಸರ್ಕಾರ ಮುಂದಾಗಲೇಬೇಕಿದೆ. ಈ ಬಗ್ಗೆ ಕನ್ನಡಪರ ಸಂಘಟನೆಗಳು, ಸಾಹಿತ್ಯ ಪರಿಷತ್‍ಗಳು ಗಂಭೀರವಾಗಿ ಚಿಂತಿಸಲೇಬೇಕಿದೆ.

ವಿದ್ಯಾರ್ಥಿಗಳ ಕೊರತೆಯ ಕಾರಣದಿಂದ ಕಳೆದ 2015ರಿಂದ ಇಲ್ಲಿಯವರೆಗೆ ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 5 ಕನ್ನಡ ಮಾಧ್ಯಮ ಶಾಲೆಗಳಿಗೆ ಬೀಗ ಜಡಿಯಲಾಗಿದೆ. ಕಳೆದ 2015-16ನೇ ಸಾಲಿನಲ್ಲಿ ಕೂತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಣಗಲಿ ಗ್ರಾಮದ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದರೆ, 2016-17ನೇ ಸಾಲಿನಲ್ಲಿ ಅಭಿಮಠ ಬಾಚಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಹಿತ್ತಲಕೇರಿ ಸರ್ಕಾರಿ ಶಾಲೆಗಳು ಬೀಗ ಹಾಕಿಸಿಕೊಂಡಿವೆ.

2017-18ರ ಶೈಕ್ಷಣಿಕ ಸಾಲಿನಲ್ಲಿ ತೋಳೂರುಶೆಟ್ಟಳ್ಳಿಯ ಸರ್ಕಾರಿ ಅನುದಾನಿತ ಪ್ರೌಢಶಾಲೆಗೆ ಬೀಗ ಬಿದ್ದಿದೆ. ಈ ಶಾಲೆಯಲ್ಲಿ ಒಟ್ಟು 27 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 10ನೇ ತರಗತಿಯಲ್ಲಿ 17 ಮಂದಿ ವಿದ್ಯಾಭ್ಯಾಸ ಪೂರೈಸಿ ಹೊರತೆರಳಿದ್ದಾರೆ. ಪರಿಣಾಮ 8ನೇ ತರಗತಿಯಲ್ಲಿ 4 ಮತ್ತು 9 ನೇ ತರಗತಿಯಲ್ಲಿ 6 ಮಂದಿ ವಿದ್ಯಾರ್ಥಿ ಗಳು ಉಳಿದುಕೊಂಡಿದ್ದಾರೆ. ಈ ಹಿನ್ನೆಲೆ 10 ವಿದ್ಯಾರ್ಥಿಗಳನ್ನು ಬೇರೆ ಬೇರೆ ಪ್ರೌಢಶಾಲೆಗೆ ದಾಖಲಾತಿ ಮಾಡಿ ಈ ಶಾಲೆಯನ್ನು ಮುಚ್ಚಲಾಗಿದೆ.

ಬಹುತೇಕ ಸರ್ಕಾರಿ ಶಾಲೆಗಳಿಗೆ ಜಾಗವನ್ನು ಗ್ರಾಮದ ಹಿರಿಯರು, ಶಿಕ್ಷಣ ಪ್ರೇಮಿಗಳು, ಸಾಮಾಜಿಕ ಕಳಕಳಿ ಹೊಂದಿದ ಆದರಣೀಯರು ಉದಾರವಾಗಿಯೇ ನೀಡಿದ್ದಾರೆ. ಇಂತಹ ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ಸರ್ಕಾರದ ವತಿಯಿಂದ ಬೃಹತ್ ಕಟ್ಟಡಗಳನ್ನು ನಿರ್ಮಿಸಿ ಮೂಲಭೂತ ಸೌಕರ್ಯ ಗಳನ್ನು ಒದಗಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಶಾಲೆಗಳು ಪ್ರಾರಂಭ ವಾದಾಗಿನಿಂದ ಇಲ್ಲಿಯವರೆಗೂ ಸಾವಿರಾರು ಮಂದಿ ವಿದ್ಯಾಭ್ಯಾಸ ಮಾಡಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಶಾಲೆಗಳು ಇತ್ತೀಚಿನ ದಿನಗಳಲ್ಲಿ ಮುಚ್ಚಲ್ಪಡುತ್ತಿರುವದು ದುರಂತವೇ ಸರಿ.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಶಿಕ್ಷಕರು ಹಾಗೂ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತಿರುವದು ಬೆಳಕಿನಷ್ಟೇ ಸತ್ಯ. ಇದರೊಂದಿಗೆ ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ಎರಡು ಜತೆ ಸಮವಸ್ತ್ರ, ಶೂ, ಕಾಲುಚೀಲ, ಹಾಲು, ಬಿಸಿಯೂಟ, ಸೈಕಲ್, ಪಠ್ಯಪುಸ್ತಕ, ಉಚಿತ ಶಿಕ್ಷಣದೊಂದಿಗೆ ಅಲ್ಪಸಂಖ್ಯಾತ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಮೂಲಕ ವಿದ್ಯಾರ್ಥಿ ವೇತನವನ್ನೂ ನೀಡಲಾಗುತ್ತಿದೆ. ಆದರೂ ಸಹ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವಲ್ಲಿ ವಿಫಲತೆ ಕಂಡುಬರುತ್ತಿದೆ.

ಖಾಸಗಿ ಶಾಲೆಗಳ ಭರಾಟೆಯ ನಡುವೆ ಸರ್ಕಾರಿ ಶಾಲೆಗಳು ಮಂಕಾಗುತ್ತಿವೆ. ಸಾವಿರಾರು ರೂಪಾಯಿಗಳು ವ್ಯಯವಾದರೂ ಸಹ ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಬೇಕು ಎಂಬ ಹಂಬಲ ಪೋಷಕವರ್ಗದಲ್ಲಿದೆ. ಇದರಿಂದಾಗಿಯೇ ಕಾಲಬುಡ ದಲ್ಲಿರುವ ಸರ್ಕಾರಿ ಶಾಲೆಗೆ ನಮಸ್ಕಾರ ಹಾಕಿ ಹತ್ತಾರು ಕಿ.ಮೀ.ದೂರದಲ್ಲಿರುವ ಖಾಸಗಿ ಶಾಲೆಗಳಿಗೆ ಮಕ್ಕಳು ತೆರಳುತ್ತಿರುವದು ಕಂಡುಬಂದಿದೆ.

ಇದೇ ಪರಿಸ್ಥಿತಿ ಮುಂದುವರೆದರೆ ಎಲ್ಲಾ ಸರ್ಕಾರಿ ಶಾಲೆಗಳು, ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ದಿನ ದೂರವಿಲ್ಲ. ನೆಲದ ಭಾಷೆಯಾಗಿರುವ ಕನ್ನಡ ಭಾಷೆ ಉಳಿಯಬೇಕಾದರೆ, ಕನ್ನಡ ಮಾಧ್ಯಮ ಶಾಲೆಗಳ ಉಳಿವು ಆಗಲೇಬೇಕಿದೆ. ಇವುಗಳನ್ನು ಉಳಿಸಿಕೊಳ್ಳಲು ಆಡಳಿತ ಹಾಗೂ ಅಧಿಕಾರಿ ವರ್ಗ ವಿನೂತನ ಮಾರ್ಗಗಳನ್ನು ಕಂಡುಹಿಡಿಯ ಲೇಬೇಕಿದೆ. ಕನ್ನಡಪರ ಕಾಳಜಿ ಹೊಂದಿರುವ ಮನಸ್ಸುಗಳು ಗಂಭೀರವಾಗಿ ಚಿಂತಿಸಬೇಕಿದೆ.

ಸೋಮವಾರಪೇಟೆಯಲ್ಲಿಂದು ನಡೆಯಲಿರುವ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಮನಸ್ಸುಗಳು ಈ ನಿಟ್ಟಿನಲ್ಲಿ ಚಿಂತಿಸುತ್ತವೆಯೇ? ಸಮ್ಮೇಳನದ ಮೂಲಕ ಕನ್ನಡ ಶಾಲೆಗಳ ಉಳಿವಿಗಾಗಿ ಸರ್ಕಾರಕ್ಕೆ ಯಾವ ಸಲಹೆ ನೀಡುತ್ತಾರೆ? ಕನ್ನಡ ಶಾಲೆಗಳ ಉಳಿವಿನ ನಿರ್ಣಯ ಕೈಗೊಳ್ಳುತ್ತಾರೆಯೇ? ಎಂಬದನ್ನು ಕಾದುನೋಡಬೇಕಿದೆ.