ಸೋಮವಾರಪೇಟೆ, ಜೂ.4: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. 5ರಂದು (ಇಂದು) ಸೋಮವಾರಪೇಟೆ ಪಟ್ಟಣದಲ್ಲಿ ಆಯೋಜಿಸಲಾಗಿರುವ ಐದನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಸೋಮವಾರಪೇಟೆ ಪಟ್ಟಣ ನುಡಿಹಬ್ಬಕ್ಕಾಗಿ ಕನ್ನಡಮಯವಾಗಿದೆ.ಪಟ್ಟಣದ ಪ್ರಮುಖ ಮಾರ್ಗಗಳ ಎರಡೂ ಬದಿಯಲ್ಲಿ ಕನ್ನಡ ಧ್ವಜಗಳು ರಾರಾಜಿಸುತ್ತಿದ್ದರೆ, ಸಮ್ಮೇಳನಕ್ಕೆ ಶುಭಕೋರುವ ವಿವಿಧ ಕನ್ನಡಪರ ಸಂಘಟನೆಗಳು, ಕನ್ನಡಾಭಿಮಾನಿಗಳ ಬ್ಯಾನರ್‍ಗಳು ನಗರದೆಲ್ಲೆಡೆ ಅಳವಡಿಸಲ್ಪಟ್ಟಿದೆ. ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ರಸ್ತೆ, ಮಡಿಕೇರಿ ರಸ್ತೆ, ಮುಖ್ಯರಸ್ತೆ, ದೇವಾಲಯ ರಸ್ತೆ, ಆಲೇಕಟ್ಟೆ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಕನ್ನಡಧ್ವಜಗಳ ಹಾರಾಟ ಕಂಡುಬರುತ್ತಿದ್ದರೆ, ಆಟೋ ಸೇರಿದಂತೆ ಇತರ ವಾಹನಗಳಲ್ಲೂ ಕನ್ನಡಾಂಭೆಯ ಚಿತ್ರಗಳು ರಾರಾಜಿಸುತ್ತಿವೆ. ನಗರದ ಪ್ರಮುಖ ಸ್ಥಳಗಳಲ್ಲಿ ಕನ್ನಡ ನಾಡುನುಡಿ, ಪಟ್ಟಣದ ಏಳಿಗೆಗೆ ಶ್ರಮಿಸಿದ ಮಹನೀಯರ ಹೆಸರಿನಲ್ಲಿ ಬೃಹತ್ ನೆನಪಿನ ದ್ವಾರಗಳನ್ನು ನಿರ್ಮಿಸಲಾಗಿದ್ದು, ತಳಿರುತೋರಣ ಗಳಿಂದ ಸಿಂಗಾರಗೊಂಡಿರುವ ನಗರ ನವವಧುವಿನಂತೆ ಕಂಡುಬರುತ್ತಿದೆ.

ಇಂದು ಬೆಳಿಗ್ಗೆ 8 ಗಂಟೆಗೆ ಒಕ್ಕಲಿಗರ ಸಮುದಾಯ ಭವನದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ತಹಶೀಲ್ದಾರ್ ಕೃಷ್ಣ ನೆರವೇರಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ನಾಡಧ್ವಜ, ತಾಲೂಕು ಅಧ್ಯಕ್ಷ ಜವರಪ್ಪ ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ.

(ಮೊದಲ ಪುಟದಿಂದ)

9.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಮಂಗಳವಾದ್ಯ, ಕಲಶ, ಸ್ತಬ್ಧಚಿತ್ರಗಳು, ಗೊಂಬೆ ಕುಣಿತ, ಡೊಳ್ಳುಕುಣಿತ, ವೀರಗಾಸೆ, ಕೊಡಗಿನ ವಾಲಗ, ಸುಗ್ಗಿ ಕುಣಿತ, ಶಾಲಾ ಕಾಲೇಜುಗಳ ಸ್ತಬ್ಧ ಚಿತ್ರಗಳು ಸೇರಿದಂತೆ ಕನ್ನಡಾಭಿಮಾನಿ ಗಳು ಭಾಗವಹಿಸಲಿದ್ದಾರೆ.

ಸಮ್ಮೇಳನದ ಅಂಗವಾಗಿ ನಗರದಲ್ಲಿ ದಿ. ಹೆಚ್.ಡಿ. ಗುರುಲಿಂಗಪ್ಪ ನೆನಪಿನ ದ್ವಾರ, ದಿ. ಸುಮನ್ ಶೇಖರ್, ಎಂ.ಆರ್. ಅಶೋಕ್, ಸ್ವಾತಂತ್ರ್ಯ ಹೋರಾಟಗಾರ ಮಲ್ಲೇಗೌಡ, ಡಿ.ಸಿ. ಜಯರಾಂ ಅವರುಗಳ ಹೆಸರಿನಲ್ಲಿ ವಿವಿಧ ದ್ವಾರಗಳನ್ನು ನಿರ್ಮಿಸಲಾಗಿದೆ. ಸಮ್ಮೇಳನದ ಸಭಾಂಗಣದ ಬಳಿ ಪತ್ರಕರ್ತ ದಿ. ಸಿ.ಎನ್. ಸುನೀಲ್ ಕುಮಾರ್ ಹೆಸರಿನಲ್ಲಿ ಪುಸ್ತಕ ಮಳಿಗೆಯನ್ನು ಸ್ಥಾಪಿಸಲಾಗಿದೆ.

ಸಮ್ಮೇಳನದ ಸಭಾಂಗಣಕ್ಕೆ ಬಿ.ಟಿ. ಚನ್ನಯ್ಯ ಅವರ ಹೆಸರಿಡಲಾಗಿದ್ದು, ವೇದಿಕೆಗೆ ಗುರುಸಿದ್ಧ ಮಹಾ ಸ್ವಾಮೀಜಿಗಳ ನಾಮಕರಣ ಮಾಡಲಾಗಿದೆ. ಪೂರ್ವಾಹ್ನ 11.30ಕ್ಕೆ ಸಮ್ಮೇಳನದ ಉದ್ಘಾಟನೆಯನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ನೆರವೇರಿಸಲಿದ್ದಾರೆ. ವಿರಕ್ತಮಠದ ಮಠಾಧೀಶರಾದ ಶ್ರೀ ವಿಶ್ವೇಶ್ವರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್‍ಸಾಗರ್, ನಿಕಟಪೂರ್ವ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ, ಹಿರಿಯ ಸಾಹಿತಿ ಮಳಲಿ ವಸಂತ್‍ಕುಮಾರ್, ಉಸ್ತುವಾರಿ ಸಚಿವ ಸೀತಾರಾಂ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸಂಸದ ಪ್ರತಾಪ್ ಸಿಂಹ, ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2.15ಕ್ಕೆ ಎಂ.ಜೆ. ಅಣ್ಣಮ್ಮ ಅಧ್ಯಕ್ಷತೆಯಲ್ಲಿ ವಿವಿಧ ವಿಚಾರಗೋಷ್ಠಿ, 3.15ಕ್ಕೆ ಸಾಹಿತಿ ನ.ಲ. ವಿಜಯ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಸಂಜೆ 4 ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದೆ. 4. 30ಕ್ಕೆ ಸನ್ಮಾನ ಸಮಾರಂಭ ನಡೆಯಲಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಕ್ರೀಡಾಕ್ಷೇತ್ರ ಅರ್ಜುನ್ ಹಾಲಪ್ಪ,ವೈದ್ಯಕೀಯ ಕ್ಷೇತ್ರದಲ್ಲಿ ಶರ್ಮಿಳಾ ಫರ್ನಾಂಡೀಸ್, ಸಮಾಜ ಸೇವೆಯಲ್ಲಿ ಬಿ.ಎಂ. ಮಲ್ಲಯ್ಯ, ಜಯಪ್ಪ ಹಾನಗಲ್ಲು, ಗಂಗಾಧರ್ ಮಾಲಂಬಿ, ಯುವ ಪ್ರತಿಭೆ ಕ್ಷೇತ್ರದಿಂದ ದರ್ಶನ್ ಸಾಗರ್, ಸಂಗೀತ ಕ್ಷೇತ್ರದಲ್ಲಿ ಸಂಧ್ಯಾ ರಾಂಪ್ರಸಾದ್, ಜನಪದ ಕ್ಷೇತ್ರದಲ್ಲಿ ಎಸ್.ಪಿ. ಮಾಚಯ್ಯ, ನಾಪಂಡ ಚಿಣ್ಣಪ್ಪ, ಕಲೆ ಮತ್ತು ಸಂಸ್ಕøತಿ ಕ್ಷೇತ್ರದಿಂದ ಗೌರಿ, ಕೃಷಿ ಕ್ಷೇತ್ರದಿಂದ ಹೊಯ್ಸಳ, ಪತ್ರಿಕೋದ್ಯಮ ಕ್ಷೇತ್ರದಿಂದ ನರೇಶ್ಚಂದ್ರ, ಪೌರಕಾರ್ಮಿಕರ ಕ್ಷೇತ್ರದಿಂದ ಕಾಳಮ್ಮ, ಶಿಕ್ಷಣ ಕ್ಷೇತ್ರದಿಂದ ಬಿ.ಬಿ. ವೀರಭದ್ರಪ್ಪ, ಜಲಜಾ ಶೇಖರ್ ಅವರುಗಳನ್ನು ಸನ್ಮಾನಿಸಲಾಗುತ್ತಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಬೆಂಗಳೂರು ದೂರದರ್ಶನದ ದಕ್ಷಿಣ ವಲಯ ಮಹಾ ನಿರ್ದೇಶಕ ಡಾ. ಮಹೇಶ್ ಜೋಶಿ, ಶಾಸಕ ರಂಜನ್, ಎಂಎಲ್‍ಸಿ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಕಸಾಪ ಸ್ಥಾಪಕ ಅಧ್ಯಕ್ಷ ಪರಮೇಶ್ ಸೇರಿದಂತೆ ಇತರ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಭಾಗವಹಿಸಲಿದ್ದಾರೆ. 6.30ರ ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಶಾಸPಕ ಅಪ್ಪಚ್ಚು ರಂಜನ್ ಅವರು ಸ್ವಾಗತ ಸಮಿತಿ ಹಾಗೂ ಹಣಕಾಸು ಸಮಿತಿಯ ಅಧ್ಯಕ್ಷರಾಗಿದ್ದಾರೆ.

ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮೆರವಣಿಗೆ ಸಮಿತಿ, ಎ.ಪಿ. ವೀರರಾಜು ಆಹಾರ ಸಮಿತಿ, ಶೀಲಾ ಡಿಸೋಜ ವೇದಿಕೆ ಸಮಿತಿ, ಕೆ.ಎ. ಆದಂ ದ್ವಾರ ಸಮಿತಿ, ವಿಜಯಲಕ್ಷ್ಮಿ ಸುರೇಶ್ ನಗರ ಅಲಂಕಾರ ಸಮಿತಿ, ಕೆ.ಎನ್. ದೀಪಕ್ ಸಾಂಸ್ಕøತಿಕ ಸಮಿತಿ, ಕವನ್ ಕಾರ್ಯಪ್ಪ ಪ್ರಚಾರ ಸಮಿತಿ, ಜೆ.ಸಿ. ಶೇಖರ್ ಸ್ಮರಣ ಸಂಚಿಕೆ ಸಮಿತಿ, ಎನ್.ಎಂ. ನಾಗೇಶ್ ಧ್ವಜಾರೋಹಣ ಸಮಿತಿಯ ನೇತೃತ್ವ ವಹಿಸಿಕೊಂಡು ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.