ಮಡಿಕೇರಿ, ಜೂ. 4: ಸಂತ್ರಸ್ಥರಿಗೆ ಹಾಗೂ ಜನಸಾಮಾನ್ಯರಿಗೆ ಕಾನೂನಿನ ಅರಿವು ಹಾಗೂ ವಿವಿಧ ಯೋಜನೆಗಳ ಪರಿಹಾರ ದೊರಕಿಸಿಕೊಡುವ ಬಗ್ಗೆ ಸಮಗ್ರ ಅರಿವು ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕವಾಗಿ ಸೂಚನಾ ಫಲಕ ಅಳವಡಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ನೆರವು ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಜಯಂತ್ ಪಟೇಲ್ ಸೂಚನೆ ನೀಡಿದ್ದಾರೆ.

ಕೊಡಗು ಜಿಲ್ಲೆಗೆ ಭೇಟಿ ನೀಡಿದ ನ್ಯಾಯಾಧೀಶರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸೇವಾ ಪ್ರಾಧಿಕಾರದ ಅರೆಕಾಲಿಕ ಸ್ವಯಂಸೇವಕರ ಮೂಲಕ ಜನಸಾಮಾನ್ಯರಿಗೆ ನೆರವು ಲಭ್ಯವಾಗಬೇಕಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ಎಲ್ಲೆಡೆ ಕಾರ್ಯಾಗಾರಗಳು, ಸಾಕ್ಷರತಾ ಸಭೆಗಳು, ಸಂಧಾನ ಪ್ರಕ್ರಿಯೆಗಳು, ಲೋಕ ಅದಾಲತ್ ವ್ಯವಸ್ಥೆಗಳು, ಜೈಲಿನಲ್ಲಿರುವ ಖೈದಿಗಳಿಗೆ ಕಾನೂನು ಸಲಹೆಗಳು, ಸರಿಯಾಗಿ ನೆರವು ಸಿಗದಿರುವ ಬಗ್ಗೆ ಅವಲೋಕನ ನಡೆಸಿದರು.

ಜನಸಾಮಾನ್ಯರಿಗೆ ಹೆಚ್ಚಿನ ರೀತಿಯಲ್ಲಿ ಕಾನೂನುಗಳ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕಾರ್ಯಕ್ರಮ ಗಳನ್ನು ನಡೆಸುವದು, ನುರಿತ ವಕೀಲರ ಸಹಾಯದೊಂದಿಗೆ ಹಾಗೂ ಸಂಘಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ರೂಪಿಸುವುದು, ಪ್ರಾಧಿಕಾರದ ಮೂಲಕ ಕರಪತ್ರಗಳನ್ನು ಹಂಚಿ ಜನಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸುವದು ಸೇವಾ ಪ್ರಾಧಿಕಾರದ ಕರ್ತವ್ಯವಾಗಿದೆ ಎಂದರು.

ಇದೇ ಸಂದರ್ಭ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಕಡತಗಳ ಪರಿಶೀಲನೆ ನಡೆಸಿದ ನ್ಯಾಯಾಧೀಶರು, ಕಡತಗಳ ನಿರ್ವಹಣೆ ಮತ್ತು ಕಾರ್ಯಚಟುವಟಿಕೆ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಗೆ ಪ್ರಾಧಿಕಾರದ ಸದಸ್ಯರುಗಳಾದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಗಳು ಗೈರು ಹಾಜರಾಗಿರುವ ಬಗ್ಗೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಾ. ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ, 1ನೇ ಅಪರ ಜಿಲ್ಲಾ ನ್ಯಾಯಮೂರ್ತಿಗಳಾದ ಪವನೇಶ್ ಡಿ, ನ್ಯಾಯಮೂರ್ತಿ ನಾಗರಾಜು, ಪ್ರಧಾನ ನ್ಯಾಯಿಕ ದಂಡಾಧಿಕಾರಿ ಸೆಲ್ವ ಕುಮಾರ್, ವೀರಾಜಪೇಟೆಯ ಹಿರಿಯ ನ್ಯಾಯಾಧೀಶರಾದ ಜಯಪ್ರಕಾಶ್, ಸೋಮವಾರಪೇಟೆ ನ್ಯಾಯಾಧೀಶರಾದ ದೊಡ್ಡಮನಿ ಮತ್ತು ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರುಗಳು, ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ.ಜೋಸೆಫ್, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು, ಅರೆಕಾಲಿಕ ಸ್ವಯಂ ಸೇವಕರುಗಳು, ವಕೀಲರುಗಳು, ಪ್ರಾಧಿಕಾರದ ಸದಸ್ಯರುಗಳು ಇದ್ದರು.