ಮಡಿಕೇರಿ, ಜೂ. 4: ಇಪ್ಪತ್ತು ವರ್ಷ ಹಿಂದೆ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ಭಾರತೀಯ ಕಾಫಿ ಮಂಡಳಿಯು ದಾಸ್ತಾನು ಸಂಗ್ರಹಿಸಿಟಿದ್ದ ರೂ. 1.55,23,043 ಮೊತ್ತದ ಕಾಫಿಯನ್ನು ಅಂದಿನ ಸಂಘದ ಆಡಳಿತ ಮಂಡಳಿ ಏಕಪಕ್ಷೀಯವಾಗಿ ಮಾರಾಟಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡ್ಡಿ ಹಣ ರೂ. 5.65 ಕೋಟಿಯನ್ನು ಮನ್ನಾ ಮಾಡುವಂತೆ ಬೇಡಿಕೆ ಮಂಡಿಸಲಾಗಿದೆ.ಪ್ರಸಕ್ತ ಜಿಲ್ಲೆಯ ಐವರು ಕಾಫಿ ಮಂಡಳಿ ಸದಸ್ಯರಾಗಿ ನೇಮಕಗೊಂಡು, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾಗಿ ಚಿಕ್ಕಮಗಳೂರಿನ ಬೋಜೇಗೌಡ ಆಯ್ಕೆಗೊಂಡಿರುವ ಸಂದರ್ಭ, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ಹಾಗೂ ಪ್ರಮುಖರು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ನಿನ್ನೆ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ, ಜಿಲ್ಲೆಯಿಂದ ನೇಮಕಗೊಂಡಿರುವ ಸದಸ್ಯರುಗಳಾದ ಡಾಲಿ ಚಂಗಪ್ಪ, ಬೊಟ್ಟಂಗಡ ರಾಜು, ಜಿ.ಎಲ್. ನಾಗರಾಜ್, ರೀನಾ ಪ್ರಕಾಶ್ ಹಾಗೂ ಎಂ.ಬಿ. ಅಭಿಮನ್ಯುಕುಮಾರ್ ಇವರುಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು.

ಪ್ರಕರಣದ ಹಿನ್ನೆಲೆ

1996ರ ಹೊಸ್ತಿಲಿನಲ್ಲಿ ಬೆಳೆಗಾರರ ಸಹಕಾರ ಸಂಘದ ಗೋದಾಮಿವಿನಲ್ಲಿ ಇರಿಸಿದ್ದ ಕಾಫಿಯನ್ನು, ಏಕಪಕ್ಷೀಯ ವಾಗಿ ಕಾಫಿ ಮಂಡಳಿಯ ಗಮನಕ್ಕೆ ತಾರದೆ ಮಾರಾಟಗೊಳಿಸಲಾಗಿತ್ತು. ಈ ಬಗ್ಗೆ ಮಂಡಳಿಯು ಸಂಘದ ಆಡಳಿತ ಮಂಡಳಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿತ್ತು. ನ್ಯಾಯಾಲಯವು ಸಂಘದ ವಿರುದ್ಧ ತೀರ್ಪು ನೀಡಿ, ಮಾರಾಟ ಮಾಡಿದ್ದ ಕಾಫಿಯ ಮೊತ್ತ

(ಮೊದಲ ಪುಟದಿಂದ) ರೂಪಾಯಿ ಒಂದು ಕೋಟಿ ಐವತ್ತೈದು ಲಕ್ಷ ಇಪ್ಪತ್ತಮೂರು ಸಾವಿರದ ನಲವತ್ತ ಮೂರು ರೂಪಾಯಿ ಅಸಲನ್ನು ಕಾಫಿ ಮಂಡಳಿಗೆ ಪಾವತಿಸುವಂತೆ ಆದೇಶಿಸಿತ್ತು. ಅಲ್ಲದೆ ಈ ಮೊತ್ತಕ್ಕೆ ಸುದೀರ್ಘ ಅವಧಿಯ ಬಡ್ಡಿ ಹಣ ರೂ. 5.65 ಕೋಟಿಯನ್ನು ಪ್ರತ್ಯೇಕವಾಗಿ ಕಾಫಿ ಮಂಡಳಿಗೆ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿತ್ತು.

ಕೇಂದ್ರ ಸಚಿವಾಲಯದ ಮೊರೆ

ಈ ತೀರ್ಪಿನಿಂದ ಆತಂಕಗೊಂಡ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವು, ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಖಾಂತರ ಕಾಫಿ ಮಂಡಳಿಯ ಕಾನೂನು ತಜ್ಞರೊಂದಿಗೆ ವ್ಯವಹರಿಸಿದ್ದು, ಆಗ ಅಸಲು ಹಣವನ್ನು ತಕ್ಷಣ ಪಾವತಿಸಲು ಸಲಹೆ ದೊರೆಯಿತು. ಆ ಮೇರೆಗೆ ರೂ. 1,55,23,043 ಮೊತ್ತವನ್ನು ಸಂಘವು ಹರಸಾಹಸದೊಂದಿಗೆ ಮಂಡಳಿಗೆ ಪಾವತಿಸಿತ್ತು.

ಮತ್ತೆ ಸಂಘಕ್ಕೆ ನೋಟೀಸ್

ಒಂದು ಹಂತದಲ್ಲಿ ಅಸಲು ಹಣ ಪಾವತಿಸಿ ಕಾನೂನಿನ ತೊಡಕಿನಿಂದ ಪಾರಾಗಲು ಮುಂದಾಗಿದ್ದ ಸಂಘಕ್ಕೆ ಮತ್ತೆ ಕಾಫಿ ಮಂಡಳಿ ನೋಟೀಸ್ ಜಾರಿಗೊಳಿಸಿ ರೂ. 5.65 ಕೋಟಿ ಬಡ್ಡಿಯನ್ನು ನ್ಯಾಯಾಲಯದ ನಿರ್ದೇಶನದಂತೆ ಪಾವತಿಸುವಂತೆ ಸೂಚಿಸಿತು.

ಅಲ್ಲದೆ ಕಾಫಿ ಮಂಡಳಿ ಆಡಳಿತ ಸಮಿತಿ ಅಸ್ತಿತ್ವದಲ್ಲಿ ಇಲ್ಲದಿರುವ ಹಿನ್ನೆಲೆ, ಅಧಿಕಾರಿಗಳು ಯಾವದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದೆಂದು, ಆ ಕಾರಣದಿಂದ ಬಡ್ಡಿ ಹಣ ಪಾವತಿಸುವಂತೆಯೂ ನಿರ್ದೇಶಿಸಲಾಯಿತು.

ಹೊಸ ಆಶಯ

ಇದೀಗ ಭಾರತೀಯ ಕಾಫಿ ಮಂಡಳಿಗೆ ಚಿಕ್ಕಮಗಳೂರಿನ ಬೆಳೆಗಾರರೇ ಆಗಿರುವ ಬೋಜೇಗೌಡ ಅಧ್ಯಕ್ಷರಾಗಿ ಆಯ್ಕೆಯೊಂದಿಗೆ, ಕೊಡಗಿನ ಐವರನ್ನು ಸದಸ್ಯರನ್ನಾಗಿ ನೇಮಿಸಿರುವ ಹಿನ್ನೆಲೆ ಕೊಡಗು ಸಹಕಾರ ಸಂಘ ಸಮಸ್ಯೆ ಬಗೆಹರಿಯುವ ಕುರಿತು ಹೊಸ ಆಶಯ ಹೊಂದಿದೆ.

ಆ ದಿಸೆಯಲ್ಲಿ ಮೊದಲ ಹಂತದಲ್ಲಿ ಜಿಲ್ಲೆಯಿಂದ ನಿಯುಕ್ತಿಗೊಂಡಿರುವ ಕಾಫಿ ಮಂಡಳಿ ಸದಸ್ಯರೊಂದಿಗೆ ಮಾತುಕತೆ ನಡೆಸಿದೆ. ಸದಸ್ಯರಿಂದ ಪೂರಕ ಸ್ಪಂದನ ಲಭಿಸಿದ್ದು, ಮಂಡಳಿ ಸಭೆಯಲ್ಲಿ ರೂ. 5.65 ಕೋಟಿ ಬಡ್ಡಿ ಮನ್ನಾಕ್ಕೆ ಪ್ರಯತ್ನಿಸುವದಾಗಿ ಭರವಸೆ ದೊರೆತಿದೆ.

ಕಾಫಿ ಮಂಡಳಿ ಸಭೆ

ಕಾಫಿ ಮಂಡಳಿ ನೂತನ ಆಡಳಿತ ಸಮಿತಿ ಸಭೆಯು ತಾ. 8 ರಂದು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ಅಧ್ಯಕ್ಷ ಬೋಜೇಗೌಡ ಹಾಗೂ ಸಂಬಂಧಪಟ್ಟವರಿಗೆ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಸಂಕಷ್ಟದ ಕುರಿತು ಮನವರಿಕೆ ಮಾಡಿಕೊಡಲಾಗುವದೆಂದು ಸದಸ್ಯರು ಆಶ್ವಾಸನೆ ನೀಡಿದ್ದಾರೆ.

ಹೀಗಾಗಿ ಆರ್ಥಿಕ ಸಂಕಷ್ಟದಿಂದ ಸಂಘವನ್ನು ಹೊರ ತರಲು ಬೆಳೆಗಾರರನ್ನು ಒಳಗೊಂಡ ಆಡಳಿತ ಮಂಡಳಿಯು ಪ್ರಯತ್ನ ಶೀಲವಾಗಿದೆ. ನಿನ್ನೆ ಮಂಡಳಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ, ಉಪಾಧ್ಯಕ್ಷ ಎಸ್.ಪಿ. ಪೊನ್ನಪ್ಪ, ನಿರ್ದೇಶಕರುಗಳಾದ ಕಾಳಪಂಡ ಸುದೀಶ್, ಲೀಲಾ ಮೇದಪ್ಪ, ಹೆಚ್. ಬೊಳ್ಳು, ಪಿ.ಕೆ. ಮುರುಳಿ, ಎಸ್.ಕೆ. ಅಯ್ಯಣ್ಣ ಮೊದಲಾದವರು ಜಂಟಿ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ ಮಂಡಳಿಗೆ ಜಿಲ್ಲೆಯಿಂದ ಆಯ್ಕೆಗೊಂಡವರಿಗೆ ಸಂಘ ಅಭಿನಂದನೆ ಸಲ್ಲಿಸಿದೆ.

-ಶ್ರೀಸುತ