ಸೋಮವಾರಪೇಟೆ, ಜೂ. 5: ಕನ್ನಡ ಭಾಷೆಯ ಅಗಾಧ ಶಕ್ತಿಯ ಅರಿವು ಇಲ್ಲದೇ ಇರುವದರಿಂದ ಕನ್ನಡ ಮರೆಯಾಗುತ್ತಿದೆ ಎಂದು ಬೆಂಗಳೂರು ದೂರದರ್ಶನದ ದಕ್ಷಿಣ ವಲಯ ಮಹಾನಿರ್ದೇಶಕ ಡಾ. ಮಹೇಶ್ ಜೋಷಿ ಬೇಸರ ವ್ಯಕ್ತಪಡಿಸಿದರು.

ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು.

ಕನ್ನಡ ಭಾಷೆ ಅತ್ಯಂತ ಶಕ್ತಿಯುತವಾಗಿದೆ. ಆದರೆ ಭಾಷೆಗೆ ಸಲ್ಲಬೇಕಾದ ಗೌರವ, ಅಭಿಮಾನ ಲಭಿಸುತ್ತಿಲ್ಲ. ಇದರಿಂದಾಗಿ ಭಾಷಾ ಶಕ್ತಿಯ ಅರಿವೂ ಇಲ್ಲ. ಈ ನೆಲದ ಭಾಷೆಯಾಗಿರುವ ಕನ್ನಡದ ಅಸ್ತಿತ್ವಕ್ಕಾಗಿ ಕರ್ನಾಟಕದಲ್ಲೇ ಹೋರಾಟ ಮಾಡ ಬೇಕಾದ ಪರಿಸ್ಥಿತಿ ಎದುರಾಗಿರುವದು ದುರಂತ ಎಂದರು.

ಸಮಾರೋಪ ಸಮಾರಂಭದಲ್ಲಿ ಆಶಯ ನುಡಿಯನ್ನಾಡಿದ ಸಮ್ಮೇಳನಾಧ್ಯಕ್ಷÀ ಚಂದ್ರಶೇಖರ ಮಲ್ಲೋರಹಟ್ಟಿ, ಜಾತಿ ಮೀರಿ ಕನ್ನಡ ಭಾಷೆ ಬೆಳೆಯಬೇಕು. ನೀತಿ ಬೋಧನೆ ಯಿಲ್ಲದ ಶಿಕ್ಷಣದಿಂದ ಸಮಾಜಕ್ಕೆ ಯಾವದೇ ಪ್ರಯೋಜನವಿಲ್ಲ. ಶರಣರ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಕನ್ನಡ ಸಾಹಿತ್ಯವನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸಬೇಕಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಐದನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರಲ್ಲದೆ, ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲೂ ಸಮ್ಮೇಳನ ಗಳನ್ನು ನಡೆಸಲಾಗುವದು ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ತಾಲೂಕು ಅಧ್ಯಕ್ಷ ಜವರಪ್ಪ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಸ್.ಸಿ. ರಾಜಶೇಖರ್, ಪ್ರಮುಖರುಗಳಾದ ಪ್ರೇಮ್‍ಕುಮಾರ್, ವಿ.ಪಿ. ಶಶಿಧರ್, ಎ.ಪಿ.ವೀರರಾಜು, ಎಸ್.ಎಂ. ಡಿಸಿಲ್ವಾ, ರುಬೀನಾ, ಎಸ್.ಆರ್. ಸೋಮೇಶ್, ಶೀಲಾ ಡಿಸೋಜ, ಎ.ಎಸ್. ಮಲ್ಲೇಶ್, ಬಿ.ಎಸ್. ಸದಾನಂದ್, ಎಸ್.ಡಿ. ವಿಜೇತ್, ಕವನ್ ಕಾರ್ಯಪ್ಪ ಸೇರಿದಂತೆ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.