ಮಡಿಕೇರಿ, ಜೂ.5: ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನಿಗೆ ಸಂಬಂಧಿಸಿದಂತೆ ದೊರೆಯುವ ಉಚಿತ ಕಾನೂನು ಸೇವೆಗಳ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಜಯಂತ್ ಪಟೇಲ್ ಸಲಹೆ ಮಾಡಿದ್ದಾರೆ.

ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.

ಕಾನೂನು ಸೇವಾ ಪ್ರಾಧಿಕಾರ ದಿಂದ ಕಾನೂನಿಗೆ ಸಂಬಂಧಿಸಿದಂತೆ ಉಚಿತ ಸಲಹೆ, ಮಾರ್ಗದರ್ಶನ ದೊರೆಯಲಿದೆ. ಈ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು. ಈ ಸಂಬಂಧ ನಾಮಫಲಕಗಳನ್ನು ಅಳವಡಿಸಬೇಕು. ಲೋಕಾದಲತ್ ಹಾಗೂ ಸಂಧಾನದ ಮೂಲಕ ಹೆಚ್ಚಿನ ಪ್ರಕರಣ ಇತ್ಯರ್ಥಪಡಿಸಬೇಕಿದೆ. ಆ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಇನ್ನಷ್ಟು ಕಾರ್ಯಕ್ರಮ ಆಯೋಜಿಸುವಂತೆ ಹೇಳಿದರು.

ಜಿಲ್ಲೆಯ ಕಾರಾಗೃಹಗಳಲ್ಲಿ ಇರುವ ಎಲ್ಲಾ ಆರೋಪಿಗಳಿಗೂ ವಿಶೇಷ ಕಾನೂನು ನೆರವು ಸೌಲಭ್ಯ ದೊರೆಯುವಂತಾಗಬೇಕು. ಆರೋಪಿ ಗಳಿಗೆ ವಕಾಲತು ವಹಿಸಲು ವಕೀಲರು ನಿಯೋಜನೆಗೊಂಡಿರ ಬೇಕು. ಪ್ಯಾನಲ್ ವಕೀಲರು ಕಡ್ಡಾಯವಾಗಿ ವಾರಕ್ಕೆ ಎರಡು ಬಾರಿ ಕಾರಾಗೃಹಕ್ಕೆ ಭೇಟಿ ನೀಡಿ, ಬಂಧಿಗಳ ಕುಂದುಕೊರತೆ ವಿಚಾರಿಸಬೇಕು.

ಕಾನೂನು ಅರೆಕಾಲಿಕ ಸ್ವಯಂ ಸೇವಕರು ಬಂಧಿಗಳನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿ ಕಾನೂನು ಸೇವಾ ಕೇಂದ್ರದ ಸೇವೆಗಳು ದೊರೆಯುವಂತೆ ಮಾಡಬೇಕು.

ಜಿಲ್ಲೆಯಲ್ಲಿ ದಾಖಲಾಗುವ ಹೆಚ್ಚಿನ ಪ್ರಕರಣಗಳ ಸಂಬಂಧ ಕಾನೂನು ಅರಿವಿನ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ನಾಮಫಲಕಗಳನ್ನು ಅಳವಡಿಸಬೇಕು. ಭೂಮಿ ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿದಂತೆ ನುರಿತ ವಕೀಲರ ತಂಡವನ್ನು ರಚಿಸಿ ಜನರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಆದಿವಾಸಿಗಳು ಮುಖ್ಯವಾಹಿನಿಯಿಂದ ದೂರವಿದ್ದು, ಆದಿವಾಸಿಗಳ ಬದುಕು ಹಸನುಗೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆ ಜೊತೆ ಕೈಜೋಡಿಸಿ ಕಾನೂನು ಅರಿವು ಶಿಬಿರಗಳನ್ನು ಹಮ್ಮಿಕೊಳ್ಳುವಂತೆ ಜಯಂತ್ ಪಟೇಲ್ ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಕೆ.ಜಿ. ಎಂ.ಎಂ. ಮಹಾಸ್ವಾಮೀಜಿ ಮಾತನಾಡಿ ಜಿಲ್ಲಾ ಕೇಂದ್ರದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗುತ್ತ್ತಿದೆ. ಹಾಗೆಯೇ ಜಿಲ್ಲಾ ನ್ಯಾಯಾಧೀಶರ ವಸತಿ ಗೃಹ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್ ವಕೀಲರ ಕುಂದುಕೊರತೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

ಅರೆಕಾಲಿಕ ಕಾನೂನು ಸ್ವಯಂ ಸೇವಕರ ಸಮಸ್ಯೆಗಳನ್ನು ನ್ಯಾಯಾಧೀಶರು ಆಲಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಕೆ.ಡಿ.ದಯಾನಂದ, ಕಾರ್ಯದರ್ಶಿ ಪ್ರೀತಂ, ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶÀ ಡಿ.ಪವನೇಶ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಸೆಲ್ವ ಕುಮಾರ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಯ ಪ್ರಕಾಶ್(ವೀರಾಜಪೇಟೆ), ಪರಶುರಾಮ ದೊಡ್ಡಮನಿ (ಸೋಮವಾರಪೇಟೆ), ಸಿವಿಲ್ ನ್ಯಾಯಾಧೀಶರಾದ ಶರ್ಮಿಳಾ (ವೀರಾಜಪೇಟೆ), ನಟರಾಜು (ಕುಶಾಲನಗರ), ಶಿವಾನಂದ ಹಂಚಿ (ಮಡಿಕೇರಿ), ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಜಿ.ಪಂ.ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಇನ್ಸ್‍ಪೆಕ್ಟರ್ ಮೇದಪ್ಪ, ಡಿವೈಎಸ್‍ಪಿ ನಾಗಪ್ಪ, ಸರ್ಕಾರಿ ವಕೀಲ ಶ್ರೀಧರ್ ನಾಯರ್, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ, ಪ್ಯಾನಲ್ ವಕೀಲರು, ಅರೆಕಾಲಿಕ ಕಾನೂನು ಸ್ವಯಂ ಸೇವಕರು ಹಾಗೂ ಇತರರು ಇದ್ದರು.