*ಗೋಣಿಕೊಪ್ಪಲು, ಜೂ. 5: ಕಳತ್ಮಾಡು,ಕೈಕೇರಿ,ಹೊಸಕೋಟೆ, ಪಡಿಕಲ್, ಕಲ್ಲುಕೋರೆ ಗ್ರಾಮಗಳಿಗೆ ನಿರಂತರವಾಗಿ ವಿದ್ಯುತ್ ಕಡಿತವಾಗುತ್ತಿರುವದನ್ನು ಖಂಡಿಸಿ, ಗ್ರಾಮಸ್ಥರು ಗೋಣಿಕೊಪ್ಪ ವಿದ್ಯುತ್ ಘಟಕ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಜಿ.ಪಂ. ಮಾಜಿ ಸದಸ್ಯ ಕೊಲ್ಲೀರ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು ತಾಲೂಕು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಂಕಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಗ್ರಾಮದ ಸಮಸ್ಯೆಯನ್ನು ಆರು ದಿನಗಳ ಒಳಗೆ ಬಗೆಹರಿಸದಿದ್ದರೆ, ಪೊನ್ನಂಪೇಟೆ ಉಪವಿಭಾಗ ವಿದ್ಯುತ್ ಘಟಕಕ್ಕೆ ಬೀಗ ಜಡಿದು ಧರಣಿ ನಡೆಸುವದಾಗಿ ಎಚ್ಚರಿಕೆ ನೀಡಿದರು.
ಗ್ರಾಮಗಳಲ್ಲಿ ನಿರಂತರವಾಗಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. 30 ನಿಮಿಷಕ್ಕೊಮ್ಮೆ ವಿದ್ಯುತ್ ಕಡಿತಗೊಳ್ಳುತ್ತಿದೆ. ಸ್ಥಳೀಯ ಟ್ರಾನ್ಸ್‍ಪಾರ್ಮರ್‍ಗಳು ದುರಸ್ತಿಗೆ ಬಂದಿರುವದರಿಂದ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಕಾಫಿ ಗಿಡಗಳ ಮೇಲೆಯೆ ವಿದ್ಯುತ್ ತಂತಿ ಹಾದು ಹೋಗಿರುವದರಿಂದ ಅನಾಹುತಗಳಿಗೆ ಎಡೆಯಾಗಲಿದೆ. ಆನೆ, ಮಾನವರಿಗೆ ಸಮಸ್ಯೆ ಉಂಟಾಗಬಲ್ಲದು. ಇಲ್ಲಿನ ಟ್ರಾನ್ಸ್‍ಪಾರ್ಮರ್‍ಗಳು ವರ್ಷ ಕಳೆದರೂ ದುರಸ್ತಿ ಕಾಣಲಿಲ್ಲ. ಕಂಬಗಳು ಮುರಿದು ಬಿದ್ದಿವೆ. ಸಣ್ಣ ಗುಡುಗು, ಮಳೆಗೆ ವಿದ್ಯುತ್ ಕಡಿತಗೊಳ್ಳುತ್ತಿದೆ. ಈ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಹೇಳಿದರು.
ಮಾರ್ಗದಾಳುಗಳ (ಲೈನ್‍ಮೆನ್) ಹೊಂದಾಣಿಕೆ ಕೊರತೆಯಿಂದ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಕಾಡಲು ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಸ್ಥಳಕ್ಕೆ ಲೈನ್ ಮ್ಯಾನ್‍ಗಳನ್ನು ಕರೆದು ಶೀಘ್ರವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕಂಬಗಳನ್ನು ಸ್ಥಳಕ್ಕೆ ಸಾಗಿಸುವಂತೆ ಅಧಿಕಾರಿ ಅಂಕಯ್ಯ ಅವರು ಘಟಕದ ಸಹಾಯಕ ಎಂಜಿನಿಯರ್ ಕೃಷ್ಣ ಕುಮಾರ್ ಅವರಿಗೆ ಸೂಚಿಸಿದರು.
ಗ್ರಾಮಸ್ಥರ ಆರೋಪಕ್ಕೆ ಸ್ಪಂದಿಸಿದ ಅಂಕಯ್ಯ ತಮ್ಮ ಮಟ್ಟದಲ್ಲಿ ಆಗಬೇಕಾದ ಕಾರ್ಯಗಳನ್ನು ಅತಿ ವೇಗವಾಗಿ ಮುಗಿಸಿಕೊಡಲಾಗುವದು. ಹೆಚ್ಚಿನ ಸಮಸ್ಯೆಗೆ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲಾಗುವದು. ಲೈನ್ ಮ್ಯಾನ್‍ಗಳ ಕೊರತೆಯಿಂದ ಮಳೆಗಾಲದಲ್ಲಿ ಹೆಚ್ಚು ಸಮಸ್ಯೆ ಕಾಡುತ್ತಿದೆ. ಸರಕಾರ ಹೆಚ್ಚಿನ ಮಾರ್ಗದಾಳುಗಳನ್ನು ನೇಮಿಸಿದರೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಕೊಲ್ಲಿರ ಗಯಾ ಕಾವೇರಪ್ಪ, ಕೆ.ಕೆ. ನಾಣಯ್ಯ, ಬೋಪಣ್ಣ, ಸತೀಶ್ ಸೇರಿದಂತೆ ಗ್ರಾ.ಪಂ, ಅಧ್ಯಕ್ಷ, ಸದಸ್ಯರುಗಳು, ಗ್ರಾಮಸ್ಥರು ಹಾಜರಿದ್ದರು.
ಎಸ್ ಡಿ ಪಿ ಐ ಪ್ರತಿಭಟನೆ
ರಂಜಾóನ್ ತಿಂಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಸಿದ್ದಾಪುರ ಚೆಸ್ಕಾಂ ಇಲಾಖೆ ಮುಂದೆ ಎಸ್‍ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಿದ್ದಾಪುರದ ಸುತ್ತ ಮುತ್ತಲಿನ ಭಾಗದಲ್ಲಿ ನಿರಂತರವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಇಲ್ಲಿಯ ಚೆಸ್ಕಾಂ ಕಚೇರಿ ಮುಂದೆ ಜಮಾಯಿಸಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಕ್ಷದ ಮುಸ್ತಫ ಮಾತನಾಡಿ ನಿರಂತರ ವಿದ್ಯುತ್ ಕಡಿತಗೊಳಿಸುತ್ತಿರುವದರಿಂದ ಸಿದ್ದಾಪುರ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿದೆ, ರಂಝಾನ್ ತಿಂಗಳ ಉಪವಾಸದ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸದಂತೆ ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ, ಕಳೆದ ಒಂದು ವಾರದಿಂದ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಕೂಡಲೆ ಸಮಸ್ಯೆಯನ್ನು ಬಗೆಹರಿಸದಿದ್ದರೆ ಸಾರ್ವಜನಿಕರ ಸಹಕಾರದೊಂದಿಗೆ ಚೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವದಾಗಿ ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಚೆಸ್ಕಾಂ ಅಧಿಕಾರಿ ನವೀನ್ ಕುಮಾರ್ ಮಳೆಗಾಲವಾಗಿರುವದರಿಂದ ಮತ್ತು ಕೆಲವು ಸಮಸ್ಯೆಗಳಿಂದಾಗಿ ವಿದ್ಯುತ್ ಅಭಾವ ಎದುರಾಗುತ್ತಿದೆ ಜೊತೆಗೆ ಸಿಬ್ಬಂದಿಗಳ ಕೊರತೆಯಿದ್ದು ಮುಂದಿನ ದಿನಗಳಲ್ಲಿ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವದು ಎಂದರು. ಈ ಸಂದರ್ಭ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಮುಸ್ತಫ, ಗ್ರಾ.ಪಂ ಸದಸ್ಯರಾದ ಶೌಕತ್ ಅಲಿ, ಕೃಷ್ಣ ಸೇರಿದಂತೆ ಇನ್ನಿತರರು ಇದ್ದರು.
-ದಿನೇಶ್/ ವಾಸು.