ಮಡಿಕೇರಿ, ಜೂ. 7: ಮಾಜಿ ಮುಖ್ಯಮಂತ್ರಿ, ಕುಶಾಲನಗರ ನಿವಾಸಿ, ದಿವಂಗತ ಗುಂಡೂರಾಯರ ಕನಸಿನ ಕೂಸು ಕುಶಾಲನಗರದ ಈ ಗುಂಡೂರಾವ್ ಬಡಾವಣೆ.ಗುಂಡೂರಾಯರ ಅಭಿಲಾಷೆ ಯಂತೆ ಹಿಂದುಳಿದ ಜನಾಂಗ ಮತ್ತು ಇತರ ಜನಾಂಗದ ನಿವೇಶನ ರಹಿತರಿಗೆ ಮನೆ ದಳ ಹಂಚಲು ಬೈಚನಹಳ್ಳಿ ಹಾಗೂ ಮುಳ್ಳುಸೋಗೆ ಗ್ರಾಮಗಳಲ್ಲಿನ 43.59 ಎಕರೆ ಪ್ರದೇಶವನ್ನು ಸುಮಾರು 12 ಮಂದಿ ಜಾಗ ಮಾಲೀಕರಿಂದ 1984 ರಲ್ಲಿ ವಶಪಡಿಸಿಕೊಳ್ಳಲಾಯಿತು.

ಕುಶಾಲನಗರ ಪುರಸಭೆ ವತಿಯಿಂದ ಸಮಗ್ರ ಪಟ್ಟಣ ಅಭಿವೃದ್ಧಿ ಯೋಜನೆಯಲ್ಲಿ ಸ್ವಾಧೀನಪಡಿಸಿ ಕೊಂಡ ಈ ಜಾಗಗಳಲ್ಲಿ ನಿವೇಶನ ಪಡೆಯಬೇಕಾದವರು ವಾರ್ಷಿಕ 8600 ಗರಿಷ್ಠ ಆದಾಯ ಹೊಂದಿರಬೇಕು ಎಂಬ ನಿಯಮದಡಿ ಈ ಯೋಜನೆ ರೂಪುಗೊಂಡಿತ್ತು. ಆದರೆ ನಿವೇಶನ ಹಂಚಿಕೆ ಬಗ್ಗೆ ಅಂದಿನ ಹಾಗೂ ನಂತರದ ಆಡಳಿತ ಮಂಡಳಿಯವರು ಆಸಕ್ತಿ ತೋರದ್ದರಿಂದ ಅಬಲರು ಜಾಗ ಪಡೆಯಲು ವಂಚಿತರಾದರೆ, ಜಾಗ ಬಿಟ್ಟುಕೊಟ್ಟವರು ಪುಡಿಕಾಸಿನ ಪರಿಹಾರಕ್ಕೇ ತೃಪ್ತಿ ಪಟ್ಟ್ಟುಕೊಳ್ಳ ಬೇಕಾಯಿತು.

ನಂತರ 2002 ರಲ್ಲಿನ ಆಡಳಿತ ಮಂಡಳಿ ಈ ಜಾಗದಲ್ಲಿ ಹಲವು ಮನೆ ದಳಗಳನ್ನು ಹರಾಜು ಹಾಕಿದ ಸಂದರ್ಭ ಅನೇಕ ಅನುಕೂಲಸ್ಥರು ಹರಾಜಿನಲ್ಲಿ ಜಾಗ ಪಡಕೊಂಡ ರಾದರೂ, 2017 ರವರೆಗೆ ನೋಂದಾವಣಿ ಸಾಧ್ಯವಾಗಲಿಲ್ಲ.

ಈ ಬಗ್ಗೆ 9.2.2017 ರಂದು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಹಿಂದೆ ಹರಾಜಿನಲ್ಲಿ ಜಾಗ ಪಡೆದವರ ಹೆಸರಿಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾವಣೆ ಮಾಡಿಕೊಡಲು ತೀರ್ಮಾನಿಸ ಲಾಯಿತು.

(ಮೊದಲ ಪುಟದಿಂದ) ಅದರಂತೆ ಕಳೆದ ತಿಂಗಳು ತಾ. 8 ರಂದು ಹಲವು ಖರೀದಿದಾರರಿಗೆ ಕುಶಾಲನಗರ ಮುಖ್ಯಾಧಿಕಾರಿ ಶ್ರೀಧರ್ ಅವರು ಸರಕಾರದ ಪ್ರತಿನಿಧಿಯಾಗಿ ನೋಂದಣಿ ಮಾಡಿಕೊಟ್ಟರು.

ಈಗ ಹೊಗೆಯಾಡಿತು!

ಬಡವರಿಗೆ ನಿವೇಶನ ನೀಡಲು ಸ್ವಾಧೀನ ಪಡಿಸಿಕೊಂಡ ಜಾಗವನ್ನು ಹರಾಜು ಹಾಕಿ ಯಾವಾಗ ಖರೀದಿದಾರರಿಗೆ ನೋಂದಣಿ ಮಾಡಿಕೊಡಲಾಯಿತೋ, ಆವಾಗÀ ಒಟ್ಟು ಪ್ರಕ್ರಿಯೆ ಬಗ್ಗೆ ಸಾರ್ವಜನಿಕ ಚರ್ಚೆ ಆರಂಭವಾಯಿತು.

ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರವಿತ್ತೆ? ಕಾನೂನಾತ್ಮಕವಾಗಿ ಹರಾಜು ಪ್ರಕ್ರಿಯೆಗೆ ಅವಕಾಶವಿದೆಯೆ? 2002ರಲ್ಲಿ 3.86 ಸೆಂಟಿಗೆ ರೂ. 99 ಸಾವಿರ ಪಾವತಿಸಿ ಖರೀದಿಸಿದ ಜಾಗವನ್ನು ಅದೇ ಮೊತ್ತಕ್ಕೆ ಕೇವಲ 5,544 ರೂಪಾಯಿ ಮುದ್ರಾಂಕ ಶುಲ್ಕ ಪಾವತಿಸಿ 2017ರಲ್ಲಿ ನೋಂದಾಣಿ ಮಾಡಬಹುದೇ? ಹೀಗೆ ಹಲವು ಪ್ರಶ್ನೆಗಳು ಉದ್ಭವಿಸಿದವು.

ಈ ಎಲ್ಲಾ ಸಂಶಯಗಳ ನಡುವೆಯೇ ಮತ್ತೆ ತಾ. 16.5.2017ರಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಪ್ರಕಟಣೆಯೊಂದನ್ನು ಹೊರಡಿಸಿದ್ದು, 50 ನಿವೇಶನಗಳನ್ನು ಇದೇ ತಾ. 15 ರಂದು ಬೆಳಿಗ್ಗೆ 10.30 ರಿಂದ ಹರಾಜು ಮಾಡುವ ಬಗ್ಗೆ ವಿವರಣೆ ನೀಡಿತು. ಈಗ ಒಂದು ಸೆಂಟ್ ಜಾಗಕ್ಕೆ 4 ಲಕ್ಷ ಕನಿಷ್ಟ ಬಿಡ್ ಮೊತ್ತವನ್ನೂ ಪಂಚಾಯತ್ ನಿಗದಿಪಡಿಸಿತು.

ಈ ಬಗ್ಗೆ ಹಲವರು ತಕರಾರು ವ್ಯಕ್ತಪಡಿಸಿದ್ದಾರೆ. ಮೂಲ ಉದ್ದೇಶವನ್ನು ಬಿಟ್ಟು ಸ್ವಾಧೀನ ಪಡಿಸಿಕೊಂಡ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ; ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಹಲವರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕುಶಾಲನಗರದ ಪ್ರಮುಖರು ವಿವರಿಸುತ್ತಾರೆ.

ಕುಶಾಲನಗರ ಪಟ್ಟಣ ಪಂಚಾಯಿತಿಯ ಕಾನೂನು ಸಲಹೆಗಾರರಾದ ವಕೀಲ ನಾಗೇಂದ್ರ ಬಾಬು ಅವರೇ ಈ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾನೂನು ಅನುಸರಿಸದೆ ಹಿಂದೆ ಹರಾಜು ಮಾಡಿ ನೋಂದಾವಣೆ ವಿಳಂಬವಾದಲ್ಲಿ, ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಮುದ್ರಣ ಶುಲ್ಕ ಪಡೆಯಬೇಕು; ಇಲ್ಲವಾದಲ್ಲಿ ಖರೀದಿದಾರರಿಗೆ ಅವರು ಹೂಡಿದ ಮೊತ್ತಕ್ಕೆ ಇದುವರೆಗಿನ ಬಡ್ಡಿ ನೀಡಿ ಒಟ್ಟು ಹಣ ಹಿಂತಿರುಗಿಸಬೇಕು ಎಂದು ಅವರು ಪ್ರತಿಪಾದಿಸುತ್ತಾರೆ.

ಪಟ್ಟಣ ಪಂಚಾಯಿತಿ ತಾ. 15 ರಂದು ನಡೆಸಲಿರುವ ಹರಾಜು ಪ್ರಕ್ರಿಯೆಗೆ ಕಾನೂನಾತ್ಮಕವಾಗಿ ಯಾವದೇ ಮಾನ್ಯತೆ ಇದರೆ, ಖರೀದಿದಾರರು ಮುಂದೆ ಸಂಕಷ್ಟಕ್ಕೆ ಈಡಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸುವ ನಾಗೇಂದ್ರ ಬಾಬು, ಇದೀಗ ಜಾಗದ ಮೂಲ ಮಾಲೀಕರು ನ್ಯಾಯಾಲಯದ ಮೊರೆ ಹೋಗಲು ತಯಾರಿ ನಡೆಸುತ್ತಿರುವದಾಗಿ ಮಾಹಿತಿ ನೀಡಿದ್ದಾರೆ.

ತಾನು ಕೂಡಾ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಬಯಸಿದ್ದರೂ, ಸರಿಯಾದ ವಿವರಗಳು ಲಭ್ಯವಾಗಿಲ್ಲ; ಈ ಬಗ್ಗೆ ಹೋರಾಟ ಅನಿವಾರ್ಯವಾಗಿದೆ ಎಂದು ಮುಂದಿನ ಹೆಜ್ಜೆ ಬಗ್ಗೆ ಸುಳಿವು ನೀಡಿದ್ದಾರೆ.

ಗುಂಡೂರಾಯರ ಆಶಯ ಈಡೇರದೆ ಶ್ರೀಮಂತರು ಈ ಜಾಗಗಳನ್ನು ಪಡೆಯುವದಾದರೆ; ಪುಡಿಕಾಸಿನ ಪರಿಹಾರ ಪಡೆದ ಮೂಲ ಮಾಲೀಕರಿಗೆ ನ್ಯಾಯ ಸಿಗಬೇಕಾದುದು ಕಾನೂನಿನ ಧರ್ಮ ಎಂದು ವಕೀಲರು ತಮ್ಮ ಆಕ್ರೋಶಕ್ಕೆ ಸಮರ್ಥನೆ ನೀಡುತ್ತಾರೆ.

ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಸಮಿತಿಯ ಅಡಿಯಲ್ಲಿ ಇದರ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು, ಸದಸ್ಯರುಗಳಾಗಿರುವ ತಹಶೀಲ್ದಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ, ಮುಖ್ಯಾಧಿಕಾರಿ, ಕೆಇಬಿ ಅಧಿಕಾರಿ, ಕುಡಾ ಅಧ್ಯಕ್ಷ ಹಾಗೂ ಇತರರನ್ನು ಹೊಂದಿರುವ ಸಮಿತಿ ಮೂಲಕ ಹರಾಜು ಪ್ರಕ್ರಿಯೆ ನಡೆಯಲಿದ್ದು, ಮೇಲಿನ ಗೊಂದಲಗಳ ಬಳಿಕದ ಇವರುಗಳ ನಡೆಯನ್ನು ಕಾದು ನೋಡಬೇಕಿದೆ.