ಮಡಿಕೇರಿ, ಜೂ. 7: ಜಿಲ್ಲೆಯ ಮಡಿಕೇರಿ, ಕುಶಾಲನಗರ ಹಾಗೂ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಯ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಲಭ್ಯಕ್ಕೆ ಅಗತ್ಯ ಅನುದಾನ ನೀಡಲು ಸರಕಾರ ಕ್ರಮಕೈಗೊಳ್ಳಲಿದೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಈ ಬಗ್ಗೆ ಗಮನ ಸೆಳೆದಿದ್ದು, ಮೂರು ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಹಾಗೂ ಸಿಬ್ಬಂದಿ ಕೊರತೆಯನ್ನು ಸರಿಪಡಿಸುವಂತೆ ಮನವಿ ಮಾಡಿದರು. ಇದಕ್ಕೆ ಕೃಷಿ ಮಾರುಕಟ್ಟೆ ಸಚಿವರ ಪರವಾಗಿ ಉತ್ತರಿಸಿದ ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ಸರಕಾರ ಆಗಿಂದಾಗ್ಗೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅನುದಾನ ನೀಡುತ್ತಾ ಬಂದಿದೆ. ಕೆಲವು ವರ್ಷ ಹೆಚ್ಚು ಅನುದಾನ ನೀಡಲಾಗಿದ್ದರೆ ಕೆಲವು ವರ್ಷ ಕಡಿಮೆಯಾಗಿದೆ. 2015-16ರಲ್ಲಿ ಸೋಮವಾರಪೇಟೆ ತಾಲೂಕಿಗೆ ರೂ. 90 ಲಕ್ಷ, ಮಡಿಕೇರಿಗೆ ರೂ. 25 ಲಕ್ಷ ಒದಗಿಸಲಾಗಿದೆ. ಗೋಣಿಕೊಪ್ಪಲುವಿಗೆ ಕಡಿಮೆಯಾಗಿದೆ. ಇದಲ್ಲದೆ ಎ.ಪಿ.ಎಂ.ಸಿ.ಗಳಿಗೆ ಸ್ವಂತ ಸಂಪನ್ಮೂಲವೂ ಇದೆ. ಮಡಿಕೇರಿಗೆ 25 ಲಕ್ಷ, ಸೋಮವಾರಪೇಟೆಗೆ 94 ಲಕ್ಷ ಹಾಗೂ ಗೋಣಿಕೊಪ್ಪಲು ಎಪಿಎಂಸಿಗೆ ರೂ. 141 ಲಕ್ಷ ಆದಾಯವಿದೆ ಎಂದರು. ಈ ಬಾರಿ ಅಗತ್ಯ ಅನುದಾನ ನೀಡಲು ಕ್ರಮಕೈಗೊಳ್ಳುವದಾಗಿ ಹೇಳಿದ ಸಚಿವರು, ಸಿಬ್ಬಂದಿ ನಿಯೋಜನೆಗೆ ಬೇರೆ ಮೂಲದಿಂದ ಪರಿಶೀಲನೆ ನಡೆಸಲಾಗುವದು. ಕೊಡಗಿನಲ್ಲಿ ಶುಂಠಿ ಹಾಗೂ ಕರಿಮೆಣಸು ಹೆಚ್ಚಿದೆ. ಆದರೆ ಈ ಉತ್ಪನ್ನಗಳು ಕೃಷಿ ಮಾರುಕಟ್ಟೆಗೆ ಬರುತ್ತಿಲ್ಲ. ಎಲ್ಲಾ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಈ ಉತ್ಪನ್ನಗಳು ಕೃಷಿ ಮಾರುಕಟ್ಟೆಗೆ ಬರುವಂತೆ ಮಾಡಿದರೆ ಸಿಬ್ಬಂದಿ ನೇಮಕ ಮಾಡುವದಕ್ಕೆ ಪ್ರಯೋಜನವಾಗಲಿದೆ. ಪ್ರಸ್ತುತ ವಹಿವಾಟು ಕಡಿಮೆ ಇದೆ. ಜನಪ್ರತಿನಿಧಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕೆಂದು ಹೇಳಿದರು.