ವೀರಾಜಪೇಟೆ, ಜೂ. 7: ಟೇಪ್ ರೆಕಾರ್ಡರ್‍ನ ಹಾಡನ್ನು ಜೋರಾಗಿ ಹಾಕಿದ್ದನ್ನು ಆಕ್ಷೇಪಿಸಿ ಅಕ್ಕ ಪಕ್ಕದ ಮನೆಯವರ ನಡುವೆ ವಿವಾದ ಉಂಟಾಗಿ ಪಣಿ ಎರವರ ಕೆ. ಚಿನ್ನ ಎಂಬಾತನು ಪಕ್ಕದ ಮನೆಯ ಚಾಣೆ ಎಂಬಾತನ ತಲೆಗೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಇಲ್ಲಿನ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ಎಂ. ನಾಗರಾಜ್ ಕಠಿಣ ಜೀವಾವಧಿ ಶಿಕ್ಷೆ ಹಾಗೂ ರೂ30000 ದಂಡ ವಿಧಿಸಿ ಆರೋಪಿ ವಿರುದ್ಧ ತೀರ್ಪು ನೀಡಿದ್ದಾರೆ.

ತಾ. 6.6.2016ರಂದು ರಾತ್ರಿ 9 ಗಂಟೆಯಲ್ಲಿ ನಾಲ್ಕೇರಿ ಗ್ರಾಮದ ಕೆ. ಮಾಚಯ್ಯ ಅವರ ಕಾಫಿ ತೋಟದ ಮನೆಯಲ್ಲಿ ವಾಸಿಸುತ್ತಿದ್ದ ಪಣಿ ಎರವರ ಕೆ.ಚಿನ್ನ ಎಂಬಾತನು ತನ್ನ ಮನೆಯಲ್ಲಿ ಟೇಪ್ ರೆಕಾರ್ಡರ್‍ನಲ್ಲಿ ಹಾಡು ಜೋರಾಗಿ ಹಾಕಿದ್ದನ್ನು ಪಕ್ಕದ ಮನೆಯ ಪಣಿ ಎರವರ ಚಾಣೆ ಪ್ರಶ್ನಿಸಿದ್ದಾನೆ. ಈ ವೇಳೆ ಚಿನ್ನ ಆತನ ತಲೆಗೆ ಕತ್ತಿಯಿಂದ ಕಡಿದುದರಿಂದ ಗಂಭೀರ ಸ್ವರೂಪದ ಗಾಯಗೊಂಡು ಚಾಣೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.

ಕುಟ್ಟ ಪೊಲೀಸರು ಚಿನ್ನನನ್ನು ಬಂಧಿಸಿ ಆತನ ವಿರುದ್ಧ ಕೊಲೆ ಮೊಕದ್ದಮೆ ಹೂಡಿದ ನಂತರ ಕೊಲೆಯ ತನಿಖಾಧಿಕಾರಿ ಸರ್ಕಲ್ ಇನ್ಸ್‍ಪೆಕ್ಟರ್ ಸಿ.ಎನ್.ದಿವಾಕರ್ ಅವರು ಇಲ್ಲಿನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಟಿ.ಎಂ.ನಾಗರಾಜ್ ಅವರು ರೂ. 30000 ದಂಡ ಪಾವತಿಗೆ ತಪ್ಪಿದರೆ ಆರೋಪಿಯು ಒಂದು ವರ್ಷ ಸಾದಾ ಸಜೆ ಅನುಭವಿಸುವಂತೆ ಹಾಗೂ ಐ.ಪಿ.ಸಿ ವಿಧಿಯ ಕಲಂ 428ರ ಅಡಿಯಲ್ಲಿ ಈಗಾಗಲೇ ನ್ಯಾಯಾಂಗ ಅಭಿರಕ್ಷೆಯಲ್ಲಿ ಇದ್ದಂತಹ ಸೆರೆವಾಸವನ್ನು ಶಿಕ್ಷೆಯಲ್ಲಿ ಕಡಿತಗೊಳಿಸದಂತೆ ತಿಳಿಸಿದ್ದಾರೆ.

ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ನಾಗರಾಜ ಆಚಾರ್ ವಾದಿಸಿದರು.