ಶ್ರೀಮಂಗಲ, ಜೂ. 7: ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದ ಬ್ರಹ್ಮಗಿರಿ ಹಾಗೂ ತಲಕಾವೇರಿ ವಲಯವನ್ನು ಸೂಕ್ಷ್ಮ ಪರಿಸರ ತಾಣವಾಗಿ ಕೇಂದ್ರ ಸರಕಾರ ಘೋಷಿಸಿರುವದಕ್ಕೆ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್ ಅವರನ್ನು ಅಭಿನಂದಿಸುವದಾಗಿ ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಅವರು ಲೇವಡಿ ಮಾಡಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಸದ ಹಾಗೂ ಶಾಸಕದ್ವಯರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದು, ಇವರ ಮೇಲೆ ಜನರು ಇರಿಸಿದ್ದ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. ಈ ಶಾಸಕದ್ವಯರನ್ನು ಮೂರು ಬಾರಿ ಹಾಗೂ ಸಂಸದರನ್ನು ಜನರು ಆಯ್ಕೆಮಾಡಿದ್ದಕ್ಕೆ ಪ್ರತಿಫಲ ನೀಡಿದ್ದಾರೆ ಎಂದು ಟೀಕಿಸಿದರು.
ಹಲವು ವರ್ಷದಿಂದ ಈ ಯೋಜನೆಯ ವಿರುದ್ದ ಜಿಲ್ಲೆಯ ಜನತೆ ಅನುಭವ ಇರುವ ಶಾಸಕದ್ವಯರ ನೇತೃತ್ವದಲ್ಲಿ ಹೋರಾಟ ನಡೆಸಿದ್ದರು. ರಾಜಕೀಯ ರಹಿತವಾಗಿ ನಡೆದ ಹೋರಾಟದಲ್ಲಿ ಈ ಯೋಜನೆಯನ್ನು ಖಾಸಗಿ ಜಾಗಕ್ಕೆ ಅನ್ವಯವಾಗದಂತೆ ಅನುಷ್ಟಾನಗೊಳಿಸಲು ಬೆಂಬಲ ನೀಡುತ್ತಾ ಬಂದರು. ಆದರೆ ತಮ್ಮ ಅನುಭವ ಹಾಗೂ ಅಧಿಕಾರವಿದ್ದರೂ ಜನರಿಗೆ ಪ್ರಯೋಜನ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಸಂಸದ ಪ್ರತಾಪ್ಸಿಂಹ ಅವರು, ಈ ಯೋಜನೆಯನ್ನು ತನ್ನ ಹೆಗಲಿಗೆ ಹಾಕಿ ನಿಶ್ಚಿಂತೆಯಿಂದ ಇರಿ ಎಂದು ಹೇಳಿದ್ದರು. ರಾಜ್ಯ ಸರಕಾರದಿಂದ ಈ ಯೋಜನೆ ಅನುಷ್ಠಾನ ವಿರೋಧಿಸಿ ಕೇಂದ್ರ ಸರಕಾರಕ್ಕೆ ಸೂಕ್ತ ರೀತಿಯ ವರದಿ ಸಲ್ಲಿಸಲಾಗಿದೆ. ಆದರೂ ಕೇಂದ್ರ ಸರಕಾರ ಸ್ಪಂದಿಸಿಲ್ಲ. ಕಳೆದ ಬಾರಿ ರಾಜ್ಯದಲ್ಲಿ ಬಿ.ಜೆ.ಪಿ. ಸರಕಾರ ಅಧಿಕಾರದಲ್ಲಿದ್ದಾಗ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರ ಅಧಿಕಾರದಲ್ಲಿತ್ತು. ಆಗ ಈ ಯೋಜನೆ ಜಾರಿಯಾಗದಂತೆ ತಡೆಯಲು ರಾಜ್ಯದ ಕಾಂಗ್ರೆಸ್ ಸಂಸದರು, ಶಾಸಕರು ಹಾಗೂ ಮುಖಂಡರು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬೇಕೆಂದು ಜಿಲ್ಲೆಯ ಶಾಸಕದ್ವಯರು ಒತ್ತಾಯಿಸಿದ್ದರು. ಆದರೆ ಪ್ರಸ್ತುತ ಕೇಂದ್ರದಲ್ಲಿ ಬಿ.ಜೆ.ಪಿ. ನೇತೃತ್ವದ ಸರಕಾರ ಅಧಿಕಾರದಲ್ಲಿದ್ದು, ರಾಜ್ಯದ ಬಿ.ಜೆ.ಪಿ. ಸಂಸದರು, ಶಾಸಕರು ಮತ್ತು ಮುಖಂಡರು ತಮ್ಮದೇ ಸರಕಾರದ ಮೇಲೆ ಒತ್ತಡ ಹಾಕಿ ಏಕೆ ಯೋಜನೆಯನ್ನು ತಡೆ ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ ಶಿವು ಮಾದಪ್ಪ ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸರ ತಾಣ ಯೋಜನೆ ಅನುಷ್ಟಾನ ಮಾಡಲು ಜಿಲ್ಲೆಯ ಸಂಸದ ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.