ಬೆಂಗಳೂರು, ಜೂ.6: ಕೊಡಗಿನ ಜಮ್ಮಾಗುಮ್ಮ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಕಂದಾಯ ಇಲಾಖೆ ಮಟ್ಟದಲ್ಲಿ ಕೆಲಸ ಸಾಗಿದೆ. ಇಂದು ವಿಧಾನ ಸಭಾ ಅಧ್ಯಕ್ಷ ಕೆ.ಬಿ.ಕೋಳಿವಾಡ ಅನುಪಸ್ಥಿತಿಯಲ್ಲಿ ಕಿಮ್ಮನೆ ರತ್ನಾಕರ್ ಅಧ್ಯಕ್ಷತೆಯಲ್ಲಿ ಗಮನ ಸೆಳೆಯುವ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರ ಸೂಚನೆಗೆ ಉತ್ತರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕೊಡಗು ಜಿಲ್ಲೆಯ ಒಟ್ಟು 4000 ಎಕರೆ ಜಮ್ಮಾಬಾಣೆಗೆ ಕಂದಾಯ ನಿಗದಿಯಾಗಿರುವದಾಗಿ ಮಾಹಿತಿ ನೀಡಿದರು.ಶಾಸಕ ಕೆ.ಜಿ.ಬೋಪಯ್ಯ ಅವರ ಸೂಚನೆಗೆ ಉತ್ತರಿಸಿದ ಕಾಗೋಡು ತಿಮ್ಮಪ್ಪ ಅವರು ಇನ್ನೂ 3000 ಎಕರೆ ಜಮ್ಮಾಬಾಣೆಗೆ ಕಂದಾಯ ನಿಗದಿ ಬಾಕಿ ಇದ್ದು ಹಂತ ಹಂತವಾಗಿ ಸಮಸ್ಯೆಯನ್ನು ಬಗೆ ಹರಿಸಲಾಗುವದು ಎಂದು ಹೇಳಿದರು. ಕಂದಾಯ ನಿಗದಿಗೆ ತಿದ್ದುಪಡಿ ಯಾಗಿದ್ದು ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಸಮಸ್ಯೆ ಇನ್ನು ಮುಂದೆ ಉದ್ಭವಿಸ ಲಾರದು. ಕಂದಾಯ ವ್ಯಾಪ್ತಿಗೆ ಜಮ್ಮಾಬಾಣೆ ಒಳಪಡದಿದ್ದಲ್ಲಿ ಭೂ ಮಾಲೀಕರು ಈ ಬಗ್ಗೆ ಕಾರ್ಯೋನ್ಮು ಖವಾಗಬೇಕಾಗಿದೆ ಎಂದು ಬೋಪಯ್ಯ ಅವರು ಮನವಿ ಮಾಡಿದ್ದಾರೆ.

(ಮೊದಲ ಪುಟದಿಂದ)

ಚರ್ಚೆಗೆ ಅವಕಾಶ

ಇಂದು ಬೆಳಿಗ್ಗೆ ಸದನದ ಕಲಾಪ ಪ್ರಮುಖವಾಗಿ ರಾಜ್ಯದ ಬರಗಾಲ ನಿರ್ವಹಣೆ, ಫಸಲು ಭೀಮಾ ಯೋಜನೆ ಅವ್ಯವಸ್ಥೆ ಕುರಿತಾಗಿ ಚರ್ಚೆಗೆ ಗ್ರಾಸವಾಯಿತು. ಈ ಹಂತದಲ್ಲಿ ರಾಜ್ಯದ ಯಾವದೇ ಜಿಲ್ಲೆಯಲ್ಲಿ ಗಂಭೀರ ಘಟನೆ ಸಂಭವಿಸಿದಾಗ ಶೂನ್ಯವೇಳೆಯಲ್ಲಿ ಚರ್ಚೆ ಮಾಡಲು ಸದನದಲ್ಲಿ ಅವಕಾಶವಿದೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಾಡಾನೆ ಧಾಳಿಗೆ ತಾ.5 ರಂದು ವ್ಯಕ್ತಿಯೋರ್ವ ಮೃತಪಟ್ಟಿದ್ದು ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಶೂನ್ಯ ಅವಧಿಯಲ್ಲಿ ಹಾಸನದ ಶಾಸಕ ಶಿವಲಿಂಗೇ ಗೌಡ, ಶಾಸಕ ಬೋಪಯ್ಯ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹಾಗೂ ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಒತ್ತಾಯಿಸಿದರು.

ಇದೇ ಸಂದರ್ಭ ಅರಣ್ಯಸಚಿವರು ಮೃತನ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಲಾಗುವದು. ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಮಾಡಿದ್ದಾರೆ. ಕಾಡಾನೆ ಹಿಂಡುಗಳ ಫೆÇೀಟೋ ಕ್ಲಿಕ್ಕಿಸುವ ಸಂದರ್ಭ ಆನೆಯೊಂದು ಧಾಳಿ ಮಾಡುವ ಮೂಲಕ ವ್ಯಕ್ತಿ ಸಾವನ್ನಪ್ಪಿರುವದು ಖಚಿತ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.

ಕೊಡಗು, ಹಾಸನ ಇತ್ಯಾದಿ ಜಿಲ್ಲೆಗಳಲ್ಲಿ ಆನೆ ಮಾನವ ಸಂಘರ್ಷ ಮಿತಿಮೀರುತ್ತಿದೆ ಈ ಬಗ್ಗೆ ಚರ್ಚಿಸಲು ಅವಕಾಶಕೊಡಿ ಎಂದು ಶಾಸಕರು ಕೇಳಿದಾಗ ಮುಂದೆ ಅರ್ಧಗಂಟೆ ಅವಕಾಶ ಮಾಡಿಕೊಡಲಾಗುವದು ಎಂದು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹಾಗೂ ಮುಖ್ಯಮಂತ್ರಿ ಸಮಾಧಾನಪಡಿಸಿದರು.

ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಎಂಆರ್‍ಐ ಸ್ಕ್ಯಾನಿಂಗ್, ಡಯಾಲಿಸೀಸ್ ವ್ಯವಸ್ಥೆ, ಸಿಟಿಸ್ಕ್ಯಾನ್ ಮಾದರಿ ವ್ಯವಸ್ಥೆ ಅಳವಡಿಸುವ ಅಗತ್ಯ ಹಾಗೂ ಖಾಸಗಿ ಆಸ್ಪತ್ರೆಗಳಿಂದ ಇರುವ ಅಡೆತಡೆ ಬಗ್ಗೆ ಮತ್ತು ಅಂತಹ ಖಾಸಗಿ ಆಸ್ಪತ್ರೆ ಬಗ್ಗೆ ತೆಗೆದುಕೊಳ್ಳಬೇಕಾದ ಕಠಿನ ನಿಲುವಿನ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಮಾತನಾಡಿದರು. ಖಾಸಗಿ ಆಸ್ಪತ್ರೆಗಳು ಬಡವರನ್ನೂ ನೋಡದೆ ಡಯಾಲಿಸಿಸ್, ಇಸಿಜಿ ಇತ್ಯಾದಿ ಚಿಕಿತ್ಸೆ ನೆಪದಲ್ಲಿ ಹಣ ಸುಲಿಗೆ ಮಾಡುವದಕ್ಕೂ ಇನ್ನು ಮುಂದೆ ಕಡಿವಾಣ ಹಾಕಲು ಇದೇ ಸಂದರ್ಭ ಎಲ್ಲ ಶಾಸಕರು ಕೈಜೋಡಿಸಬೇಕು. ಕನಿಷ್ಟ ಮೂರು ತಿಂಗಳಿಗೊಮ್ಮೆ ಜಿಲ್ಲಾಸ್ಪತ್ರೆಯಲ್ಲಿ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಬೇಕೆಂದು ಒತ್ತಾಯ ಕೇಳಿಬಂತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ನಾಲ್ಕು ವರ್ಷ ಕಳೆದರೂ ರೈತರಿಗೆ ಯಾವದೇ ಸಾಲ ಮನ್ನಾ ಮಾಡಲಿಲ್ಲ. ಈ ಹಿಂದಿನ ಎಲ್ಲ ಸರ್ಕಾರಗಳೂ ಬರಗಾಲದ ಸಂದರ್ಭ ಸಾಲ ಮನ್ನಾ ಮಾಡಿವೆ. ಇದೀಗ 160 ತಾಲೂಕುಗಳಲ್ಲಿ ಬರಗಾಲವಿದ್ದು ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮುಂದಾಗಬೇಕು ಎಂದು ವಿಧಾನ ಸಭೆ ವಿಪಕ್ಷ ನಾಯಕ ಜಗದೀಶ್‍ಶೆಟ್ಟರ್ ವಿಧಾನ ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಲಾ ರೂ.1 ಲಕ್ಷದ ವರೆಗೆ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳನ್ನು ಕುಟುಕಿದರು.

ಮಹಾರಾಷ್ಟ್ರದಲ್ಲಿಯೂ ಮುಖ್ಯಮಂತ್ರಿಗಳು ರೂ.30 ಸಾವಿರಕೋಟಿ ಕೃಷಿ ಸಾಲ ಮನ್ನಾ ಮಾಡಿದ್ದಾರೆ ಎಂದು ಹೇಳಿದರಲ್ಲದೆ, ರಾಜ್ಯದಲ್ಲಿರುವದು ರೈತಪರ ಸರ್ಕಾರ ಎಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದರು. ರಾಜ್ಯದ ರೈತರಿಗೆ ಫಸಲು ಭೀಮಾ ಯೋಜನೆಯಿಂದ ನ್ಯಾಯ ಸಿಗುತ್ತಿಲ್ಲ ಎಂದೂ ಇದೇ ಸಂದರ್ಭ ಶಾಸಕರುಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್‍ನಲ್ಲಿಯೂ ಇಂದು ಸಭಾಪತಿ ಶಂಕರಮೂರ್ತಿ ಅಧ್ಯಕ್ಷತೆಯಲ್ಲಿ ಕಲಾಪ ನಡೆಯಿತು. ಕೃಷಿ ಯೋಜನೆ ಬಗ್ಗೆ, ರಾಜ್ಯದಲ್ಲಿ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ದುಸ್ಥಿತಿ ಬಗ್ಗೆ ಹಾಗೂ ಶಾಲೆಯಲ್ಲಿ ಹಾಜರಾತಿ ಕೊರತೆ ಇದ್ದು ಮುಚ್ಚುವ ಸ್ಥಿತಿಯ ಬಗ್ಗೆ ಚರ್ಚೆ ನಡೆಯಿತು. ಕೊಡಗು ಜಿಲ್ಲೆಯ ಉಸ್ತುವಾರಿ ಮಂತ್ರಿ ಎಂ.ಆರ್.ಸೀತಾರಾಮ್ ಹಾಗೂ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಭಾಗವಹಿಸಿದ್ದರು. ಕೃಷ್ಣ ಬೈರೇಗೌಡ, ಶಿಕ್ಷಣ ಸಚಿವ ತನ್ವೀರ್ ಸೇಟ್ ಮುಂತಾದವರು ಪರಿಷತ್ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.