ಬೆಂಗಳೂರು, ಜೂ. 7: ‘ಕರುನಾಡಿನ ಜನತೆಯ ಒಳಿತಿಗಾಗಿ ತಾನು ಹಾಗೂ ತನ್ನ ಸ್ನೇಹಿತರು ಕೊಡಗಿನ ತಲಕಾವೇರಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು, ಇದನ್ನು ಮೌಢ್ಯವೆಂದು ಪರಿಗಣಿಸುವದಾದರೆ, ನಾನು ಮುಂದೆಯೂ ಕಾವೇರಿ ತಾಯಿಗೆ ಲಕ್ಷ ಬಾರಿ ಪೂಜಿಸುವೆ’ ಎಂದು ರಾಜ್ಯ ನೀರಾವರಿ ಸಚಿವ ಎಂ.ಬಿ. ಪಾಟೀಲ್ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ.ಇಂದು ವಿಧಾನಸಭೆ ಅಧಿವೇಶನದಲ್ಲಿ ಕೆಲವರು, ಮಳೆಗಾಗಿ ತಲಕಾವೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಕುರಿತು ಟೀಕೆ ಮಾಡಿದಾಗ, ಕೆರಳಿದಂತೆ ಕಂಡು ಬಂದ ನೀರಾವರಿ ಸಚಿವರು, ಕರ್ನಾಟಕದ ಕೃಷ್ಣೆ ಹಾಗೂ ಕಾವೇರಿಯನ್ನು ತಾನು ತಾಯಿಯೆಂದು ನಂಬಿದ್ದು, ತಮ್ಮ ನಂಬಿಕೆಯನ್ನು ಮೌಢ್ಯವೆನ್ನುವದಾದರೆ ಲಕ್ಷ ಬಾರಿ ಪೂಜೆ ಸಲ್ಲಿಸುವೆ ಎಂದು ಲಿಖಿತ ಉತ್ತರ ನೀಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹಿತ ಬಿಜೆಪಿ ಸರಕಾರವಿದ್ದಾಗ, ಧಾರ್ಮಿಕ ದತ್ತಿ ಇಲಾಖೆ ಮೂಲಕ ಕೋಟಿಗಟ್ಟಲೆ ಹಣ ವ್ಯಯಿಸಿ ಪೂಜೆ ಸಲ್ಲಿಸಿರುವ ದಾಖಲೆಗಳನ್ನು ಸದನದ ಮುಂದಿಟ್ಟು ಸಚಿವ ಎಂ.ಬಿ. ಪಾಟೀಲ್ ಟೀಕಾಕಾರರಿಗೆ ತಿರುಗೇಟು ನೀಡಿದರು.
ಆದರೆ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಮಾತ್ರ, ಮಳೆಗಾಗಿ ಪೂಜೆ ಬಗ್ಗೆ ಕೆಲವರ ಅಪಸ್ವರದಿಂದ ವಿಚಲಿತರಾಗಿ, ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಅಧೀನ ದೇಗುಲಗಳಲ್ಲಿ ಮಳೆಗಾಗಿ ಸಾಮೂಹಿಕ ಪೂಜೆಗೆ ಕೈಗೊಂಡಿದ್ದ ನಿರ್ಧಾರವನ್ನು ಹಿಂಪಡೆಯುವದಾಗಿ ಪ್ರಕಟಿಸಿದರು.