ಬೆಂಗಳೂರು,ಜೂ.7: ಬೆಂಗಳೂರು ವಿಧಾನ ಸಭಾ ಮಳೆಗಾಲ ಅಧಿವೇಶನದಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದ ಮೂರು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಇಲಾಖೆಯಿಂದ ಇಂದು ಉತ್ತರ ಲಭಿಸಿದೆ. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 561 ರಲ್ಲಿ ಶಾಸಕ ಬೋಪಯ್ಯ ಅವರು ಕಳೆದ ಮೂರು ವರ್ಷಗಳಲ್ಲಿ ಕೊಡಗು ಜಿಲ್ಲೆಯ ರಸ್ತೆ ಅಭಿವೃದ್ಧಿಗಾಗಿ ಮುಂಗಡ ಪತ್ರದಲ್ಲಿ ವಿಶೇಷ ಅನುದಾನ ನೀಡಲಾಗಿದೆಯೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಎಚ್.ಕೆ.ಪಾಟೀಲ್ ಅವರನ್ನು ಪ್ರಶ್ನಿಸಿದ ಮೇರೆ 2013-14ನೇ ಸಾಲಿನ ಮುಂಗಡ ಪತ್ರದಲ್ಲಿ ರೂ.1600 ಲಕ್ಷಗಳು, (ಮೊದಲ ಪುಟದಿಂದ) 2014-15 ನೇ ಸಾಲಿನಲ್ಲಿ ರೂ. 2500 ಲಕ್ಷಗಳ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. 2016-17 ನೇ ಸಾಲಿನ ಪ್ರಸ್ತಾಪ ಇಲ್ಲದ ಬಗ್ಗೆ ಶಾಸಕ ಬೋಪಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯಿಸಿದ ಶಾಸಕರು, ವಿಶೇಷ ಪ್ಯಾಕೇಜ್ ಎಂದು ಹೇಳಿ ಯಾವದೇ ಅನುದಾನ ನೀಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಮಡಿಕೇರಿ ತಾಲೂಕಿನಲ್ಲಿ ಕೈಗೊಂಡ ಒಟ್ಟು ಕಾಮಗಾರಿ 92, ಸೋಮವಾರ ಪೇಟೆಯಲ್ಲಿ 106 ಕಾಮಗಾರಿ ಹಾಗೂ ವೀರಾಜಪೇಟೆಯಲ್ಲಿ ಒಟ್ಟು 93 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಒಟ್ಟು ಬಿಡುಗಡೆಯಾದ ಅನುದಾನ ರೂ.3,920 ಲಕ್ಷದಲ್ಲಿ ಎಲ್ಲವೂ ಖರ್ಚಾಗಿರುವದಾಗಿ ತೋರಿಸಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಶಾಸಕ ಕೆ.ಜಿ. ಬೋಪಯ್ಯ ಅವರುಗಳು ನಿಯಮ 73ರ ಅಡಿಯಲ್ಲಿ ಗಮನ ಸೆಳೆಯುವ ಸೂಚನೆ ಸಂಖ್ಯೆ 26ಕ್ಕೆ ಉತ್ತರಿಸಿದ ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು, ಕೂಡಿಗೆ ಸಿಂಥೆಟಿಕ್ ಟರ್ಫ್ ಮೈದಾನವನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸ ಲಾಗುವದು ಎಂದು ಮಾಹಿತಿ ನೀಡಿದರು.

ಕಳೆದ ಎರಡು ವರ್ಷಗಳಿಂದ ಭೂಮಿಪೂಜೆಯೊಂದಿಗೆ ಆರಂಭಿಸಲಾದ ಟರ್ಫ್ ಮೈದಾನ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಶಾಸಕ ದ್ವಯರ ಅಸಮಾಧಾನಕ್ಕೆ ಪ್ರಮೋದ್ ಮಧ್ವರಾಜ್, ಸೋಮವಾರಪೇಟೆ ಸಿಂಥೆಟಿಕ್ ಟರ್ಫ್ ಮೈದಾನದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, ಅತಿ ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವದು ಎಂದು ಉತ್ತರಿಸಿದರು.

ಕೂಡಿಗೆ ಸಿಂಥೆಟಿಕ್ ಟರ್ಫ್ ಮೈದಾನ ರೂ.385 ಲಕ್ಷ ವೆಚ್ಚದಲ್ಲಿ ಹಾಗೂ ಸೋಮವಾರಪೇಟೆ ಟರ್ಫ್ ಮೈದಾನ ರೂ.300 ಲಕ್ಷ ಅನುದಾನದಲ್ಲಿ ಸಿದ್ಧವಾಗಲಿದೆ ಎಂದು ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2009ರಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಮುಂಗಡ ಪತ್ರದಲ್ಲಿ ರೂ.5 ಕೋಟಿ ವೆಚ್ಚದ ಕಾಮಗಾರಿ ಘೋಷಣೆಯಾಗಿದ್ದರೂ, ಕಾಮಗಾರಿಯು ಅರ್ಧದಲ್ಲಿಯೇ ನಿಂತು ಹೋಗಿದೆ. ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿರುವದರಿಂದ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಪ್ರಶ್ನಿಸಲಾಗಿ,

2011-12 ರ ಸಾಲಿನ ಆಯವ್ಯಯ ಭಾಷಣದಲ್ಲಿ ಉದ್ದೇಶಿತ ಕ್ರೀಡಾಂಗಣ ನಿರ್ಮಾಣಕ್ಕೆ ರೂ.5 ಕೋಟಿಯನ್ನು ಒದಗಿಸುವದಾಗಿ ಘೋಷಿಸಲಾಗಿತ್ತು. ಅದರಂತೆ ವೀರಾಜಪೇಟೆಯಲ್ಲಿ ರೂ. 5 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ದಿನಾಂಕ 15-11-2011ರಲ್ಲಿ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಮೊದಲನೇ ಹಂತದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ರೂ.311.20 ಲಕ್ಷಗಳ ಅಂದಾಜು ಮೊತ್ತದಲ್ಲಿ ಇ-ಪ್ರಕ್ಯೂರ್‍ಮೆಂಟ್ ಪೆÇೀರ್ಟಲ್ ಮುಖಾಂತರ ಟೆಂಡರ್ ಅಹ್ವಾನಿಸಿ, ಟೆಂಡರ್ ಅಂತಿಮಗೊಳಿಸಿ ತಾ.12-03-2013ರಂದು ಕಾರ್ಯಾದೇಶ ಪತ್ರವನ್ನು ಗುತ್ತಿಗೆದಾರ ಅರಕಲ ಗೋಡು ತಾಲೂಕಿನ ಮುತ್ತುಗದ ಹೊಸೂರು, ದೊಡ್ಡಿಹಳ್ಳಿ ನಿವಾಸಿ ಎಂ.ಎಸ್.ರಂಗರಾಜು ಅಯ್ಯಂಗಾರ್ ಅವರಿಗೆ ನೀಡಲಾಗಿದ್ದು, 16-05-2013ರಂದು ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿತ್ತು.

ಒಳಾಂಗಣ ಕ್ರೀಡಾಂಗಣದ ಪ್ರಗತಿ ಆಧರಿಸಿ ಗುತ್ತಿಗೆದಾರರಿಗೆ ಒಟ್ಟು ರೂ.1,19,75,564 ಮೊತ್ತವನ್ನು ಪಾವತಿಸಲಾಗಿದೆ. ಒಳಾಂಗಣ ಕ್ರೀಡಾಂಗಣ ಕಟ್ಟಡ ಕಾಮಗಾರಿ, ಮೇಲ್ಛಾವಣಿ ಕಾಮಗಾರಿ, ಬಾಗಿಲು, ಕಿಟಕಿಗಳನ್ನು ಅಳವಡಿಸುವ ಕಾಮಗಾರಿ, ಒಳಭಾಗ ಮತ್ತು ಹೊರಭಾಗದ ಮಡ್ಡಿ( ಪ್ಲಾಸ್ಟರಿಂಗ್) ಮಾಡುವ ಕಾಮಗಾರಿಗಳು ಪೂರ್ಣಗೊಂಡಿವೆ. ನೆಲಹಾಸು ಕಾಮಗಾರಿ ಪ್ರಗತಿಯಲ್ಲಿದೆ.

ಗುತ್ತಿಗೆದಾರ ರಂಗರಾಜು ಅವರು ಮಂದಗತಿಯಲ್ಲಿ ಕಾಮಗಾರಿ ಕೈಗೊಂಡಿರುವದರಿಂದ ತಾ.30-03-2016 ಹಾಗೂ 20-05-2016 ರಲ್ಲಿ ಎರಡು ಬಾರಿ ನೋಟೀಸನ್ನು ಜಾರಿ ಮಾಡಲಾಗಿದೆ. ಮರಳಿನ ಅಭಾವದಿಂದಾಗಿ ಕಾಮಗಾರಿ ಕುಂಠಿತಗೊಂಡಿರುವದಾಗಿ ಗುತ್ತಿಗೆದಾರ ಸಮಜಾಯಿಷಿ ನೀಡಿದ್ದು, ಟೆಂಡರ್ ನಿಯಮಾನುಸಾರ ಗುತ್ತಿಗೆದಾರನಿಗೆ ದಂಡವಿಧಿಸಿ ಕಾಮಗಾರಿಯನ್ನು ಪ್ರಸ್ತುತ ಸಾಲಿನಲ್ಲಿಯೇ ಪೂರ್ಣ ಗೊಳಿಸಲು ಕ್ರಮ ಜರುಗಿಸುವದಾಗಿ ಕ್ರೀಡಾ ಸಚಿವರು ಭರವಸೆ ನೀಡಿದ್ದಾರೆ.

9,786 ನಿವೇಶನ ರಹಿತರು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 562 ಕ್ಕೆ ಉತ್ತರಿಸಿದ ವಸತಿ ಸಚಿವ ಎಂ.ಕೃಷ್ಣಪ್ಪ ಅವರು, ಶಾಸಕ ಕೆ.ಜಿ.ಬೋಪಯ್ಯ ಅವರು ಕೇಳಿದ ಪ್ರಶ್ನೆಗೆ ಕೊಡಗು ಜಿಲ್ಲೆಯಲ್ಲಿ 9786 ವಸತಿ ರಹಿತರ ಪಟ್ಟಿ ತಯಾರಿಸಲಾಗಿದೆ ಎಂದು ಉತ್ತರಿಸಿದರು.

ಕೊಡಗು ಜಿಲ್ಲೆಯ ನಿವೇಶನ ರಹಿತರಿಗೆ ಈವರೆಗೆ ಗ್ರಾಮೀಣ ನಿವೇಶನ ಯೋಜನೆಯಡಿ 1402, ವಾಜಪೇಯಿ ನಗರ ನಿವೇಶನ ಯೋಜನೆಯಡಿ 165 ಒಳಗೊಂಡಂತೆ ಒಟ್ಟು 1567 ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಹಕ್ಕುಪತ್ರ ನೀಡಲು ಬಾಕಿ ಇದೆ, ವಿಳಂಬವಾಗಲು ಕಾರಣವೇನು ಎಂದು ಶಾಸಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣಪ್ಪ ಅವರು, ಜಿಲ್ಲೆಯಲ್ಲಿ ಒಟ್ಟಾರೆಯಾಗಿ 9786 ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಲು ಬಾಕಿ ಇದೆ. ಬಾಕಿ ಇರುವ ನಿವೇಶನ ರಹಿತರಿಗೆ ನಿವೇಶನ ಸಹಿತ ವಸತಿ ಸೌಕರ್ಯ ಒದಗಿಸಲು ಸ್ಥಳೀಯವಾಗಿ ಲಭ್ಯ ಇರುವ ಸರ್ಕಾರಿ ಜಮೀನನ್ನು ಗುರುತಿಸಿ, ಜಿಲ್ಲಾಧಿಕಾರಿಗಳಿಂದ ಮಂಜೂರು ಮಾಡಿಸಿ ನಿವೇಶನ ಹಂಚಿಕೆ ಮಾಡಲಾಗುತ್ತದೆ.ಜಮೀನಿನ ಗುರುತಿಸುವಿಕೆ,ಮಂಜೂರಾತಿ ಹಾಗೂ ಅಭಿವೃದ್ಧಿ ಕಾರ್ಯಮಾಡುವ ಹಂತದಲ್ಲಿ ವಿಳಂಬವಾಗು ತ್ತಿದೆ.ಒಂದೊಮ್ಮೆ ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ವಸತಿಗೆ ಸೂಕ್ತವಾದ ಖಾಸಗಿ ಜಮೀನನ್ನು ಭೂಮಾಲೀಕರ ಸಹಮತದೊಂದಿಗೆ ಖರೀದಿಸಲು ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಜಿಲ್ಲಾ ಸಮಿತಿಗಳನ್ನು ರಚಿಸಿದ್ದು, ಖರೀದಿ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ವಸತಿ ಸಚಿವರು ಉತ್ತರಿಸಿದರು.