ಭಾಗಮಂಡಲ, ಜೂ. 6: ತಲಕಾವೇರಿ ವನ್ಯಧಾಮ ಪ್ರದೇಶವನ್ನು ಸೂಕ್ಷ್ಮಪರಿಸರ ತಾಣ ವ್ಯಾಪ್ತಿಗೆ ಸೇರ್ಪಡೆಗೊಳಿಸಿರುವ ಹಿನ್ನೆಲೆಯಲ್ಲಿ ಇಂದು ಏರ್ಪಾಟಾಗಿದ್ದ ಗ್ರಾಮಸಭೆ ಯನ್ನು ಬಹಿಷ್ಕರಿಸಬೇಕೆಂಬ ವಿಚಾರವಾಗಿ ಗ್ರಾಮಸ್ಥರ ನಡುವೆ ಪರ-ವಿರೋಧ ಚರ್ಚೆಗಳು ನಡೆದು ಗೊಂದಲದ ಗೂಡಿನಂತಾಗಿ ಕೊನೆಯಲ್ಲಿ ಶಾಂತಿಯುತವಾಗಿ ಅಂತ್ಯಕಂಡಿತು. ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಗ್ರಾ.ಪಂ. ಮಾಜಿ ಸದಸ್ಯ ಕಾಳನ ರವಿ ಮಾತನಾಡಿ, ಗ್ರಾಮಸಭೆ ನಡೆಸುವದರಿಂದ (ಮೊದಲ ಪುಟದಿಂದ) ಯಾವದಾದರೂ ಪ್ರಯೋಜನ ಇದೆಯಾ ಎಂದು ಅಧ್ಯಕ್ಷರಲ್ಲಿ ಪ್ರಶ್ನಿಸಿದರು. ಕಳೆದ ಮೂರು ವರ್ಷಗಳಿಂದ ಕಸ್ತೂರಿ ರಂಗನ್ ವರದಿ ಬಗ್ಗೆ ವಿರೋಧ ವ್ಯಕ್ತಪಡಿಸಿ ಗ್ರಾ.ಪಂ.ನಲ್ಲಿ ನಿರ್ಣಯ ಕೈಗೊಂಡು ಕಳುಹಿಸಿಕೊಟ್ಟಿದ್ದರು. ಇದೀಗ ತಲಕಾವೇರಿ ವನ್ಯಧಾಮ ಪ್ರದೇಶವನ್ನು ಸೂಕ್ಷ್ಮಪರಿಸರ ತಾಣ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ. ಹಾಗಾಗಿ ಇಂತಹ ಗ್ರಾಮಸಭೆಗಳಿಂದ ಯಾವದೇ ಪ್ರಯೋಜನವಿಲ್ಲ. ಸಭೆಯನ್ನು ಎಲ್ಲರೂ ಬಹಿಷ್ಕರಿಸಬೇಕೆಂದು ಹೇಳಿದರು. ಅಮೆ ಬಾಲಕೃಷ್ಣ, ಕುದುಕುಳಿ ಭರತ್, ಜಿ.ಪಂ. ಮಾಜಿ ಸದಸ್ಯ ಪಿ.ಎಂ. ರಾಜೀವ್ ಅವರುಗಳು ಕೂಡ ಇದಕ್ಕೆ ದನಿಗೂಡಿಸಿದರು.

ಈ ಸಂದರ್ಭ ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಸುನಿಲ್ ಪತ್ರಾವೊ ಮಾತನಾಡಿ, ಗ್ರಾಮಸಭೆಯನ್ನು ಯಾವದಾದರೊಂದು ನಿರ್ದಿಷ್ಟ ಕಾರಣಕ್ಕಾಗಿ ನಡೆಸುತ್ತಿಲ್ಲ. ಫಲಾನುಭವಿಗಳನ್ನು ಗುರುತಿಸುವದು. ಅಭಿವೃದ್ಧಿ ದೃಷ್ಟಿಯಿಂದ ನಡೆಸಲಾಗುತ್ತಿದೆ. ಸಭೆ ಬಹಿಷ್ಕರಿಸುವದು ಬೇಡ, ಸಭೆ ನಡೆಯಬೇಕೆಂದು ಆಗ್ರಹಿಸಿದರು. ಜೆಡಿಎಸ್‍ನ ಹೊಸೂರು ಸತೀಶ್ ಕುಮಾರ್ ದನಿಗೂಡಿಸಿ ಮುಂದಿನ 15 ದಿನಗಳೊಳಗೆ ಜಿಲ್ಲಾಧಿಕಾರಿಗಳು, ಹಿರಿಯ ಅರಣ್ಯ ಇಲಾಖಾಧಿಕಾರಿಗಳು, ಕಂದಾಯ ಅಧಿಕಾರಿಗಳನ್ನು ಒಳಗೊಂಡು ವಿಶೇಷ ಸಭೆ ಏರ್ಪಡಿಸುವಂತೆ ನಿರ್ಣಯ ಕೈಗೊಂಡು ಸಭೆ ಮುಂದುವರಿಸುವಂತೆ ಸಲಹೆ ನೀಡಿದರು.

ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದು ಅಂತಿಮವಾಗಿ ನಿರ್ಣಯ ಕೈಗೊಂಡು ಸಭೆ ಮುಂದುವರಿಸುವಂತೆ ತೀರ್ಮಾನಿಸಲಾಯಿತು. ತಾ. 12ರಂದು ವಿಶೇಷ ಸಭೆ ಏರ್ಪಡಿಸುವ ಬಗ್ಗೆ ತೀರ್ಮಾನಿಸಲಾಯಿತು.

ಆಕ್ರೋಶ: ಮುಂದುವರಿದ ಸಭೆಯಲ್ಲಿ ಅರಣ್ಯ ಇಲಾಖಾಧಿಕಾರಿ ಸಭೆಗೆ ಹಾಜರಾಗದ ಬಗ್ಗೆ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತಗೊಂಡಿತು. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಅಶೋಕ್ ಹಾಗೂ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ಕರೆ ಮಾಡಿ ಸಭೆಗೆ ಆಗಮಿಸುವಂತೆ ಸೂಚಿಸಿದ ಮೇರೆಗೆ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ಆಗಮಿಸಿದರು, ಸಭೆಗೆ ಮಾಹಿತಿ ನೀಡಿದ ಅವರು, ಕಸ್ತೂರಿರಂಗನ್ ವರದಿ ಇನ್ನೂ ಕೂಡ ಜಾರಿಗೆ ಬಂದಿಲ್ಲ. ಇದೀಗ ವನ್ಯಧಾಮ ಪ್ರದೇಶವನ್ನು ಸೂಕ್ಷ್ಮಪರಿಸರ ತಾಣಕ್ಕೆ ಸೇರ್ಪಡೆಗೊಳಿಸಲಾಗಿದೆಯಷ್ಟೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಯಾವದೇ ತೊಂದರೆ ಇಲ್ಲ. ಯಂತ್ರವನ್ನು ಬಳಸಿ ಕೃಷಿ ಚಟುವಟಿಕೆ ಕೈಗೊಳ್ಳಬಹುದಾಗಿದೆ. ಆದರೆ ಕೈಗಾರಿಕೆ, ವಾಣಿಜ್ಯ ಕಟ್ಟಡ, ರೆಸಾರ್ಟ್‍ಗಳಿಗೆ ಅವಕಾಶವಿರುವದಿಲ್ಲ. ಕೋಟಿಗಟ್ಟಲೆ ವೆಚ್ಚದ ಉದ್ಯಮಗಳಿಗೆ ಅವಕಾಶವಿರುವದಿಲ್ಲ. ಪರಿಸರ ಮಾಲಿನ್ಯ ಮಾಡಲು ಅವಕಾಶವಿರುವದಿಲ್ಲವೆಂದು ಹೇಳಿದರು.

ಕಂದಾಯ ಇಲಾಖೆಯ ಬಗ್ಗೆ ಪ್ರಸ್ತಾಪ ಬಂದಾಗ ಅಧಿಕಾರಿ ಶರ್ಮಿಳಾ ಅವರು ತಮ್ಮ ಪರಿಚಯ ಹೇಳಿಕೊಳ್ಳುತ್ತಿರುವಾಗಲೇ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು. ಬಿಪಿಎಲ್ ಪಟ್ಟಿಯಲ್ಲಿ ಇದ್ದವರಿಗೂ ರೂ. 60 ರಿಂದ 70 ಸಾವಿರ ಆದಾಯ ದೃಢೀಕರಣ ಪತ್ರ ನೀಡಲಾಗುತ್ತಿದ್ದು, ಇದರಿಂದ ಬಡವರ್ಗದವರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವದಿಲ್ಲವೆಂದು ದೂರಿದರು.

ಪೂರಕವಾಗಿ ಮಾತನಾಡಿದ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ತಾನು ಕಂದಾಯ ಕಚೇರಿಗೆ ಭೇಟಿ ನೀಡಿದಾಗಲೂ ಕನಿಷ್ಟ ಸೌಜನ್ಯ ತೋರದೇ ಇರುವ ನೀವು ಗ್ರಾಮಸ್ಥರೊಂದಿಗೆ ಯಾವ ರೀತಿಯಲ್ಲಿ ವರ್ತಿಸಿರಬಹುದೆಂದು ಮನದಟ್ಟಾಗುತ್ತದೆ. ಇನ್ನು ಮುಂದಕ್ಕೆ ಈ ರೀತಿಯ ದೂರುಗಳು ಬಂದಲ್ಲಿ ಕ್ರಮಕೈಗೊಳ್ಳುವದಾಗಿ ಎಚ್ಚರಿಸಿದರು.

ಸೀಮೆಎಣ್ಣೆ: ಆಹಾರ ಇಲಾಖೆ ಅಧಿಕಾರಿ ಉತ್ತಯ್ಯ ಅವರು, ಅನಿಲ ಸಹಿತ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆಯ ಅವಶ್ಯಕತೆಯಿದ್ದರೆ ಪತ್ರ ಬರೆದುಕೊಟ್ಟರೆ ಮುಂದಿನ ತಿಂಗಳಿಂದ ಒಂದು ಲೀಟರ್ ಸೀಮೆಎಣ್ಣೆ ವಿತರಿಸಲಾಗುವದೆಂದು ಹೇಳಿದರು.

ಪ್ರಾಣಿಗಳೇ ಮುಖ್ಯನಾ...?

ತಣ್ಣಿಮಾನಿಯಲ್ಲಿ ರೂ. 13.20 ಲಕ್ಷ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ ಮಂಜೂರಾಗಿದ್ದು, ಘಟಕ ಸ್ಥಾಪನೆಗೆ ಅರಣ್ಯ ಇಲಾಖೆ ತಡೆಯೊಡ್ಡಿದ್ದು, ಕೋರಂಗಾಲದಲ್ಲಿ ಜಾಗ ಗುರುತಿಸಲಾಗಿದೆ. ಆದರೆ ಕೋರಂಗಾಲ ದಲ್ಲಿ ಅವಕಾಶ ನೀಡುವದಿಲ್ಲ ಎಂದು ಗ್ರಾಮಸ್ಥರು ಹೇಳಿದರು. ತಣ್ಣಿಮಾನಿಯಲ್ಲಿ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಮನುಷ್ಯರಿಗಿಂತ ಪ್ರಾಣಿಗಳೇ ಮುಖ್ಯನಾ? ಎಂದು ಪ್ರಶ್ನಿಸಿದರು. ಗದ್ದೆ ಕೃಷಿ ಮಾಡುವವರಿಗೂ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ನೀಡಬೇಕೆಂದು ಆಗ್ರಹಿಸಿದರು.

ಸೂಕ್ಷ್ಮಪರಿಸರ ತಾಣದ ಚರ್ಚೆಯಿಂದಾಗಿ ಸಭೆಯ ದಿಕ್ಕು ಬದಲಾಗಿ ವಾರ್ಡ್ ಸಭೆಗಳಲ್ಲಿ ಸಲ್ಲಿಸಲ್ಪಟ್ಟ ಅರ್ಜಿಗಳ ಕ್ರಿಯಾ ಯೋಜನೆಗೆ ಅನುಮೋದನೆ ಇಲ್ಲದೆ ಮುಕ್ತಾಯಕಂಡಿತು. ಸಭೆಯಲ್ಲಿ ನೋಡೆಲ್ ಅಧಿಕಾರಿ ತೋಟಗಾರಿಕಾ ಇಲಾಖಾ ಅಧಿಕಾರಿ ಗಿರೀಶ್, ತಾ.ಪಂ. ಸದಸ್ಯೆ ಸಂಧ್ಯಾ, ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ ಹರೀಶ್, ಸದಸ್ಯರುಗಳು ಹಾಜರಿದ್ದರು.