ಶನಿವಾರಸಂತೆ, ಜೂ 7: ಅಪರಿಚಿತ ಮಹಿಳೆಯೊಬ್ಬರ ಮೋಸದ ಜಾಲಕ್ಕೆ ಸಿಲುಕಿ ಗೃಹಿಣಿಯೊಬ್ಬರು ಚಿನ್ನದ ಮಾಂಗಲ್ಯ ಸರ ಕಳೆದುಕೊಂಡ ಘಟನೆ ಸ್ಥಳೀಯ ಸಂತೆ ಮಾರುಕಟ್ಟೆಯಲ್ಲಿ ನಡೆದಿದೆ.
ದುಂಡಳ್ಳಿ ಗ್ರಾಮದ ಎಸ್. ವೆಂಕಟಮ್ಮ ಮಾಂಗಲ್ಯ ಸರ ಕಳೆದುಕೊಂಡ ಗೃಹಿಣಿ. ಈಕೆ ಸಂತೆಯಲ್ಲಿ ಸಾಮಗ್ರಿ ಖರೀದಿಸಿ ಮೀನು ಮಾರುಕಟ್ಟೆಯ ಬಳಿ ಹೋದಾಗ ಘಟನೆ ನಡೆದಿದೆ. ಇಲ್ಲಿಗೆ ಬಂದ ಅಪರಿಚಿತ ಮಹಿಳೆ ಸರಕಾರಿ ಆಸ್ಪತ್ರೆಯ ದಾರಿ ವಿಚಾರಿಸಿ ತನ್ನ ತಂಗಿ ಗರ್ಭಿಣಿಯಾಗಿದ್ದು, ಆಸ್ಪತ್ರೆ ಖರ್ಚಿಗೆ ಹಣ ಬೇಕಾಗಿರುವದರಿಂದ ತನ್ನ ಬಳಿ ಇರುವ ಹಳೆಯ ಚಿನ್ನವನ್ನು ಕಡಿಮೆ ಬೆಲೆಗೆ ಕೊಡುತ್ತೇನೆ ಎಂದು ಹೇಳಿದಳು ಎನ್ನಲಾಗಿದೆ. ಆಗ ಗೃಹಿಣಿ ತನಗೆ ಚಿನ್ನ ಬೇಕಾಗಿಲ್ಲ ಹಣದ ಅವಶ್ಯಕತೆಯಿದ್ದರೆ ಗಿರವಿ ಅಂಗಡಿಯಲ್ಲಿ ಮಾರು ಎಂದು ಉತ್ತರಿಸಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ ಅಪರಿಚಿತ ಪುರುಷ ಆ ಅಪರಿಚಿತ ಮಹಿಳೆಗೆ ನಿನ್ನಲ್ಲಿರುವ ಚಿನ್ನ ಕೊಡು 10 ಸಾವಿರ ರೂಪಾಯಿ ಕೊಡುತ್ತೇನೆ ಎಂದು ಹೇಳಲು ಅಪರಿಚಿತ ಮಹಿಳೆ ತನಗೆ ಅಷ್ಟು ಹಣ ಸಾಲುವದಿಲ್ಲ ಎಂದು ನಿರಾಕರಿಸುತ್ತಾಳೆ. ಇಬ್ಬರ ಮಧ್ಯೆ ಚರ್ಚೆ ನಡೆದು ಪುರುಷ ಹೆಚ್ಚಿನ ಹಣ ತರುವದಾಗಿ ಹೇಳಿ ಹೊರಟು ಹೋಗುತ್ತಾನೆ. ಪುನಃ ಅಪರಿಚಿತ ಮಹಿಳೆ ಗೃಹಿಣಿಯ ಬಳಿ ಬಂದು ತಾನು ಆತನಿಗೆ ಚಿನ್ನ ಕೊಡುವದಿಲ್ಲ. ನೀವು ಒಳ್ಳೆಯವರಂತೆ ಕಾಣುತ್ತೀರಿ ನಿಮ್ಮಲ್ಲಿರುವ ಕಡಿಮೆ ಚಿನ್ನದ ಮಾಂಗಲ್ಯ ಸರ ಕೊಟ್ಟರೆ ತನ್ನ ಬಳಿ ಇರುವ ಚಿನ್ನವನ್ನು ಕೊಡುವದಾಗಿ ಹೇಳಿದ್ದಾಳೆ. ವೆಂಕಟಮ್ಮ ತಮ್ಮ ಕೊರಳಲ್ಲಿದ್ದ ಮಾಂಗಲ್ಯ ಸರ ಬಿಚ್ಚಿ ಕೊಟ್ಟಾಗ ಅಪರಿಚಿತ ಮಹಿಳೆ ಬಟ್ಟೆಯಲ್ಲಿ ಗಂಟು ಕಟ್ಟಿದ ಚಿನ್ನದಂತೆ ತೋರುತ್ತಿದ್ದ 2 ಕಾಸಿನ ಸರವನ್ನು ವೆಂಕಟಮ್ಮನ ಚೀಲದಲ್ಲಿರಿಸಿ ಜೋಪಾನವಾಗಿ ಇಟ್ಟುಕೊಳ್ಳಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದಾಳೆ.
ಮನೆಗೆ ಮರಳಿದ ಗೃಹಿಣಿ ವೆಂಕಟಮ್ಮ ಆ ಬಟ್ಟೆಯ ಗಂಟನ್ನು ಮನೆಯಲ್ಲಿ ಇಟ್ಟಿದ್ದು, ಮಗ ವೆಂಕಟೇಶ ತಾಯಿಯ ಕೊರಳಲ್ಲಿದ್ದ ಚಿನ್ನದ ಸರ ಎಲ್ಲಿ? ಎಂದು ವಿಚಾರಿಸಿದಾಗ ನಡೆದ ಘಟನೆಯನ್ನು ಹೇಳಿ ತನ್ನಲ್ಲಿದ್ದ 2 ಸರವನ್ನು ತೋರಿಸುತ್ತಾರೆ. ಅದು ನಕಲಿ ಚಿನ್ನ ಎಂದು ಮಗ ತಿಳಿಸಿದ ಮೇರೆಗೆ ತನ್ನನ್ನು ವಂಚಿಸಿದ ಅಪರಿಚಿತ ಮಹಿಳೆ ಹಾಗೂ ಪುರುಷನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ. ಕೆಲ ಸಮಯದ ಹಿಂದೆಯೂ ಶನಿವಾರಸಂತೆಯಲ್ಲಿ ಸಂತೆ ದಿನ ಇಂಥದ್ದೇ ಪ್ರಸಂಗ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
-ನರೇಶ್.