ನಾಪೆÇೀಕ್ಲು, ಜೂ. 6: ಪ್ರವಾಸೋದ್ಯಮ ಇಲಾಖೆ ವತಿಯಿಂದ ಸುಮಾರು 3.25 ಕೋಟಿ ರೂ. ವೆಚ್ಚದಲ್ಲಿ ಚೆಯ್ಯಂಡಾಣೆ ಪಟ್ಟಣದಿಂದ ಚೇಲಾವರವರೆಗಿನ 6 ಕಿ.ಮೀ ಕಾಂಕ್ರಿಟ್ ರಸ್ತೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈಗ ಸ್ಥಗಿತಗೊಳಿಸಲಾಗಿದೆ. ಕೂಡಲೇ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರಾದ ಬಾಚಮಂಡ ತಿಲಕ್, ನಡಿಕೇರಿಯಂಡ ದಿಲೀಪ್ ಚಂಗಪ್ಪ, ಪಟ್ಟಚೆರುವಂಡ ರಂಜು ಕಾರ್ಯಪ್ಪ, ಜಿಮ್ಮ, ಸುಂದರ, ಹೊಸೋಕ್ಲು ಚಿತ್ರಾ ಮತ್ತಿತರರು ಆಗ್ರಹಿಸಿದ್ದಾರೆ.

ಈಗಾಗಲೇ ಮುಂಗಾರು ಮಳೆ ಆರಂಭಗೊಂಡಿದೆ. ಹಾಗೆಯೇ ಶಾಲಾ ಕಾಲೇಜುಗಳು ಪ್ರಾರಂಭಗೊಂಡಿವೆ. ಮಳೆಗಾಲದಲ್ಲಿ ಚೇಲಾವರ ಜಲಪಾತವನ್ನು ವೀಕ್ಷಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ಎಲ್ಲರೂ ಕಾಲ್ನಡಿಗೆಯಲ್ಲಿ ಚೇಲಾವರ ಜಲಪಾತಕ್ಕೆ ತೆರಳಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದಿದ್ದಾರೆ. ಈಗ ಚೆಯ್ಯಂಡಾಣೆ ಪ್ರೌಢಶಾಲೆಯಿಂದ ಚೇಲಾವರದ ಪೆÇನ್ನೋಲ ಪ್ರಾಥಮಿಕ ಶಾಲೆಗೆ ಸಂಪರ್ಕಿಸುವ ಸಂಪರ್ಕ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಕಚ್ಚಾ ರಸ್ತೆಯಲ್ಲಿ ಮಳೆಗಾಲದಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ. ಅದರೊಂದಿಗೆ ಈ ರಸ್ತೆಯಲ್ಲಿ ಸಂಜೆಯಾಗುತ್ತಿದ್ದಂತೆ ಕಾಡಾನೆಗಳು ಕಾಣಿಸಿಕೊಳ್ಳುವದರಿಂದ ಸಂಚಾರ ಅಸಾಧ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಣಿಸಿಕೊಳ್ಳದ ಗುತ್ತಿಗೆದಾರ: ಈ ಕಾಮಗಾರಿಯನ್ನು ವಹಿಸಿಕೊಂಡ ಗುತ್ತಿಗೆದಾರ ಯಾರೆಂಬುದೇ ಗ್ರಾಮಸ್ಥರಿಗೆ ತಿಳಿದಿಲ್ಲ. ಯುಗಾದಿ ಹಬ್ಬಕ್ಕೆಂದು ಕೆಲಸ ಸ್ಥಗಿತಗೊಳಿಸಿ ತೆರಳಿದ ಕೆಲಸಗಾರರು 10 ದಿನಗಳ ಹಿಂದೆ ಹಿಂತಿರುಗಿ ಕಾಮಗಾರಿ ಆರಂಭಿಸಿದ್ದರು. ಇನ್ನೂ 100 ಮೀ. ರಸ್ತೆ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಆದರೆ ಈಗ ಕಾಮಗಾರಿಗೆ ಬೇಕಾದ ಜಲ್ಲಿ, ಸೀಮೆಂಟ್, ಮರಳು ಇಲ್ಲದ ಕಾರಣ ಕೆಲಸ ಸ್ಥಗಿತಗೊಂಡಿದೆ. ಕೆಲಸಗಾರರನ್ನು ವಿಚಾರಿಸಿದಾಗ ಸಾಮಗ್ರಿ ಇಲ್ಲದೆ ನಾವು ಹೇಗೆ ಕೆಲಸ ಮಾಡುವದು ಎಂದು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಕಳಪೆ ಕಾಮಗಾರಿ ಆರೋಪ: ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಅಡಕ ಎಂಬ ಸ್ಥಳದಲ್ಲಿ ರಸ್ತೆ ಗುಂಡಿ ಬಿದ್ದಿದೆ. ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದಿರುವ ಗ್ರಾಮಸ್ಥರು, ರಸ್ತೆಯ ಎರಡು ಕಡೆಗಳ ಹೊಂಡಕ್ಕೆ ಮಣ್ಣು ತುಂಬಿಸುವ ಕಾರ್ಯವಾಗಬೇಕಾಗಿದೆ. ಮಳೆಗಾಲದಲ್ಲಿ ವಾಹನಗಳು ಈ ಗುಂಡಿಗೆ ಬೀಳುವ ಅಪಾಯ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

-ಪಿ.ವಿ. ಪ್ರಭಾಕರ್