*ಗೋಣಿಕೊಪ್ಪಲು, ಜೂ. 6 : ಇಲ್ಲಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಯೊಂದರಲ್ಲಿ ಮಾರಕ ಜ್ವರ ಡೆಂಘೀ ಪತ್ತೆಯಾಗಿದೆ, ಬಾಳೆಲೆ ಭಾಗದ ಕೆಲವರು ಜ್ವರವೆಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದಾಗ ರೋಗದ ಬಗ್ಗೆ ಮಾಹಿತಿ ದೊರೆತಿದೆ. ಅಲ್ಲಿನ ವೈದ್ಯರು ರೋಗಿಗಳ ರಕ್ತ ಪರೀಕ್ಷೆ ಮಾಡಿದಾಗ ರಕ್ತದಲ್ಲಿ ಡೆಂಘೀ ರೋಗಾಣುಗಳು ಇರುವದು ಗೋಚರಿಸಿವೆ.ಇದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸುಮಾರು 7 ಜನರು ಡೆಂಘೀ ಜ್ವರಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಳೆಲೆ ಭಾಗದ 6 ಜನರಲ್ಲಿ ಡೆಂಘೀ ಶಂಕಿತ ರೋಗಾಣುಗಳು ಕಂಡು ಬಂದಿದ್ದರೆ, ಗೋಣಿಕೊಪ್ಪಲಿನ ವ್ಯಾಪಾರಿ ಒಬ್ಬರಿಗೆ ಈ ರೋಗದ ಲಕ್ಷಣ ಗೋಚರಿಸಿದೆ. ಇವರೆಲ್ಲರೂ ಇದೀಗ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ.

ಗೋಣಿಕೊಪ್ಪಲು ಭಾಗದಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿರುವದು ಇದೇ ಮೊದಲು ಎನ್ನಲಾಗಿದೆ. ಮಾರಕ ಜ್ವರ ಡೆಂಘೀ ಜಿಲ್ಲೆಯ ಕರಿಕೆ ಭಾಗದಲ್ಲಿ ಸಾಮಾನ್ಯವಾಗಿ ಕಾಣಿಸಿ ಕೊಳ್ಳುತ್ತಿತ್ತು. ಇದೀಗ ಗೋಣಿಕೊಪ್ಪಲು, ಬಾಳೆಲೆ ಭಾಗಗಳಲ್ಲಿಯೂ ಕಾಣಿಸಿ ಕೊಂಡಿರುವದು

(ಮೊದಲ ಪುಟದಿಂದ) ಜನತೆಗೆ ಆತಂಕ ಮೂಡಿಸಿದೆ. ಡೆಂಘೀ ಜ್ವರ ಕಾಣಿಸಿಕೊಂಡಿರುವವರಲ್ಲಿ ಬಹುತೇಕ ಮಂದಿ ಕಾಫಿ ಬೆಳೆಗಾರರೇ ಆಗಿದ್ದಾರೆ.

ಈ ಬಗ್ಗೆ ಆಸ್ಪತ್ರೆಯ ವೈದ್ಯರು ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದಾಗ ಅಧಿಕಾರಿಗಳು ಇದನ್ನು ತಳ್ಳಿಹಾಕಿದ್ದಾರೆ. ಗೋಣಿಕೊಪ್ಪಲು ಭಾಗದಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿಲ್ಲ. ಒಂದು ವೇಳೆ ಕಂಡು ಬಂದರೂ ಅವರು ಹೊರಗಿನವರಿರಬಹುದು ಎಂದು ಹೇಳಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವವರು ಸ್ಥಳೀಯರೇ ಹೊರತು, ಹೊರಗಿನವರಲ್ಲ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ‘ಶಕ್ತಿಗೆ' ತಿಳಿಸಿದ್ದಾರೆ.

ಡೆಂಘೀ ಜ್ವರದ ಲಕ್ಷಣ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಆತಂಕ ಪಡುತ್ತಿದ್ದಾರೆ. ಆರೋಗ್ಯಾಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಮಾಡದೆ ರೋಗದ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಅವರನ್ನು ಸಂಪರ್ಕಿಸಿದಾಗ ಡೆಂಘೀ ಬಗ್ಗೆ ಇನ್ನೂ ಖಚಿತವಾಗಿಲ್ಲ. ಕೇವಲ ಅನುಮಾನವೇ ಹೊರತು ಖಚಿತವಲ್ಲ. ರಕ್ತ ಪರೀಕ್ಷೆಯ ಬಳಿಕವೇ ಇದರ ಬಗ್ಗೆ ಖಚಿತ ಮಾಹಿತಿ ಲಭಿಸಲಿದೆ ಎಂದು ಹೇಳಿದರು.

- ವರದಿ: ಎನ್.ಎನ್. ದಿನೇಶ್