ನವದೆಹಲಿ, ಜೂ. 6: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯವು ದಕ್ಷಿಣ ಕೊಡಗಿನ ಬ್ರಹ್ಮಗಿರಿ ವನ್ಯ ಜೀವಿ ತಾಣವನ್ನು ಸೂಕ್ಷ್ಮ ಪರಿಸರ ವಲಯವಾಗಿ ಜೂ. 1 ರಂದು ಘೋಷಿಸಿದೆ.

ಪರಿಸರ ತಾಣದ ನಿರ್ಬಂಧಗಳನ್ನು ದಕ್ಷಿಣ ಕೊಡಗಿನ 14 ಪ್ರಮುಖ ಗ್ರಾಮಗಳಿಗೆ ಅನ್ವÀಯವಾಗುವಂತೆ ಪರಿಸರ ತಾಣದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಆರ್ಜಿ ಗ್ರಾಮದ 33.75 ಹೆಕ್ಟೇರ್ ಪ್ರದೇಶ, ನಾಂಗಾಲ ಗ್ರಾಮದ 281.72 ಹೆಕ್ಟೇರ್ ಪ್ರದೇಶ, ರುದ್ರಗುಪ್ಪೆಯ 546.18 ಹೆಕ್ಟೇರ್ ವಿಸ್ತೀರ್ಣ, ಕುಟ್ಟಂದಿಯ 613.11 ಹೆಕ್ಟೇರ್, ಬಾಡಗ ಗ್ರಾಮ ಮತ್ತು ಅರಣ್ಯ ಪ್ರದೇಶದ 500.52 ಹೆಕ್ಟೇರ್, ಬೇಗೂರುವಿನ 98.65 ಹೆಕ್ಟೇರ್, ಹೈಸೊಡ್ಲೂರುವಿನ 350.80 ಹೆಕ್ಟೇರ್, ಬಾಡಗರಕೇರಿಯ 536.40 ಹೆಕ್ಟೇರ್, ಪರಕಟಗೇರಿಯ 1508.63 ಹೆಕ್ಟೇರ್, ವೆಸ್ಟ್ ನೆಮ್ಮಲೆಯ 151.26 ಹೆಕ್ಟೇರ್, ತೆರಾಲು ಗ್ರಾಮ ಮತ್ತು ಅರಣ್ಯ ಪ್ರದೇಶದ 781.51 ಹೆಕ್ಟೇರ್, ಕುರ್ಚಿ ಗ್ರಾಮದಲ್ಲಿ 941.23 ಹೆಕ್ಟೇರ್, ಮಂಚಳ್ಳಿ ಗ್ರಾಮ ಮತ್ತು ಅರಣ್ಯ ಪ್ರದೇಶದಲ್ಲಿ 457.29 ಹೆಕ್ಟೇರ್, ಕುಟ್ಟದಲ್ಲಿ 640.02 ಹೆಕ್ಟೇರ್- ಹೀಗೆ ಒಟ್ಟು 7441. 14 ಹೆಕ್ಟೇರ್ ಗ್ರಾಮಾಂತರ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಗುರುತಿಸಿ ಕೇಂದ್ರ ಸರಕಾರ ಸ್ಪಷ್ಟ ಆದೇಶ ಹೊರಡಿಸಿರುವದು ಅಧಿಕೃತವಾಗಿ “ಶಕ್ತಿ”ಯ ಗಮನಕ್ಕೆ ಬಂದಿದೆ.

ನಿರ್ಬಂಧಗಳು

ಸೂಕ್ಷ್ಮ ಪರಿಸರ ತಾಣವಾಗಿ ಘೋಷಿಸಿರುವ ಗ್ರಾಮಗಳಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸಲು ಸುಮಾರು 30 ನಿರ್ಬಂಧಗಳನ್ನು ಸರಕಾರ ವಿಧಿಸಿದೆ. ಆ ಪೈಕಿ ಪ್ರಮುಖವಾಗಿ ವಾಣಿಜ್ಯ ಗಣಿಗಾರಿಕೆ ನಿಷೇಧ; ಜಲ, ವಾಯು, ನೆಲ, ಶಬ್ದ ಮಾಲಿನ್ಯಗಳಿಗೆ ಕಾರಣವಾಗುವ ಕೈಗಾರಿಕೆಗಳಿಗೆ ನಿಷೇಧ; ಜಲ ವಿದ್ಯುತ್ ಯೋಜನೆಗಳಿಗೆ ನಿಷೇಧ; ಆತಂಕಕಾರಿ ಉತ್ಪನ್ನಗಳ ಬಳಕೆ, ಉತ್ಪಾದನೆ ಮತ್ತು ಸಂಸ್ಕರಣೆಗಳಿಗೆ ನಿಷೇಧ; ಪ್ರಕೃತಿದತ್ತ ಜಲ ಮತ್ತು ಭೂಮಿಗೆ ಅಶುದ್ಧೀಕೃತ ವಸ್ತುಗಳನ್ನು ಎಸೆಯುವದಕ್ಕೆ ನಿಷೇಧ; ಘನ ತ್ಯಾಜ್ಯ ಮತ್ತಿತರ ತ್ಯಾಜ್ಯ ವಸ್ತುಗಳನ್ನು ನಾಶಗೊಳಿಸುವ ಆಧುನೀಕೃತ ವ್ಯವಸ್ಥೆ ಕಲ್ಪಿಸಬೇಕು; ಬೃಹತ್ ಪ್ರಮಾಣದ ಜಾನುವಾರು ಸಾಕಣಿಕೆ, ಕೋಳಿ ಸಾಕಣಿಕೆಗಳಿಗೆ ನಿಷೇಧ; ನೂತನ ಮರದ ಮಿಲ್‍ಗಳನ್ನು ಸ್ಥಾಪಿಸಬಾರದು; ಇಟ್ಟಿಗೆ ತಯಾರಿಕೆಗೆ ಅವಕಾಶವಿಲ್ಲ; ಸೌದೆಯನ್ನು ವಾಣಿಜ್ಯ ಕಾರ್ಯಗಳಿಗೆ ಬಳಸುವಂತಿಲ್ಲ; ವಾಣಿಜ್ಯೋದ್ಯಮದ ಹೊಟೇಲ್ ಹಾಗೂ ರಿಸಾರ್ಟ್‍ಗಳನ್ನು ಸ್ಥಾಪಿಸುವಂತಿಲ್ಲ; ಹೊಸದಾಗಿ ವಾಣಿಜ್ಯೋದ್ಯಮ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ; ಅರಣ್ಯ, ಸರಕಾರಿ, ಕಂದಾಯ ಹಾಗೂ ಖಾಸಗಿ ಜಾಗಗಳಲ್ಲಿ ಪೂರ್ವಾನುಮತಿಯಿಲ್ಲದೆ ಮರ ಕಡಿಯುವಂತಿಲ್ಲ; ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಕಾನೂನಿನ ನಿರ್ಬಂಧದಡಿ ಮಾತ್ರ ಸಾಧ್ಯ; ವಿದ್ಯುತ್ ಸಂಪರ್ಕ, ಮೊಬೈಲ್ ಮೊದಲಾದ ಸಂಪರ್ಕ ಟವರ್‍ಗಳು, ಕೇಬಲ್‍ಗಳ ಅಳವಡಿಕೆ ಮತ್ತಿತರ ಮೂಲಭೂತ ಸೌಲಭ್ಯಗಳ ಕೆಲಸಗಳನ್ನು ಕಾನೂನಿನ ನಿರ್ಬಂಧದ ಅನ್ವಯ ಮಾತ್ರ ನಡೆಸಬಹುದು; ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆಯನ್ನು ಮುಂದುವರಿಸಲು ಕಾನೂನಿನ ಅನ್ವಯ ಅನುಮತಿ ಪಡಯಬೇಕು; ಕೃಷಿ ಮತ್ತು ಇತರ ಕಾರ್ಯಗಳಿಗೆ ಬೇಕಾದ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳನ್ನು ನಿರ್ಮಿಸಲು ಕೆಲವಾರು ನಿರ್ಬಂಧಗಳಿದ್ದು, ಸಂಬಂಧಿತ ಅಧಿಕಾರಿಗಳು ಇದನ್ನು ನಿರ್ವಹಿಸುತ್ತಾರೆ; ಪರಿಸರ ಪ್ರವಾಸೋದ್ಯಮವು ಕೂಡ ಕಾನೂನಿನ

(ಮೊದಲ ಪುಟದಿಂದ) ನಿರ್ಬಂಧಕ್ಕೆ ಒಳಪಡುತ್ತದೆ; ಪಾಲಿಥಿನ್ ಬ್ಯಾಗ್‍ಗಳನ್ನು ಬಳಸಲು, ಸೂಚನಾ ಫಲಕಗಳನ್ನು ಅಳವಡಿಸಲು ಕೂಡ ನಿರ್ಬಂಧಗಳಿವೆ.

ಮುಕ್ತ ಅವಕಾಶಗಳು

ಈ ಪರಿಸರ ತಾಣ ಪ್ರದೇಶಗಳಲ್ಲಿ 10 ಚಟುವಟಿಗಳಿಗೆ ಮುಕ್ತಾವಕಾಶ ಕಲ್ಪಿಸಲಾಗಿದೆ. ಮಳೆ ನೀರು ಸಂರಕ್ಷಣೆ; ಸಾವಯವ ಗೊಬ್ಬರ ಬಳಕೆ; ಹಸಿರು ಪೂರಕ ತಂತ್ರಜ್ಞಾನ ಅಳವಡಿಕೆ; ಗೃಹ ಕೈಗಾರಿಕೆ; ಸೂರ್ಯ ಶಕ್ತಿ ಬಳಕೆ, ಬಯೋ ಗ್ಯಾಸ್ ಬಳಕೆಗೆ ಅವಕಾಶ; ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಅವಕಾಶ; ಕೌಶಾಲ್ಯಾಭಿವೃದ್ಧಿಗೆ ಪ್ರೋತ್ಸಾಹ; ನಿರ್ಲಕ್ಷ್ಯಕ್ಕೆ ಒಳಪಟ್ಟ ಭೂಮಿಯ ಫಲವತ್ತೀಕರಣಕ್ಕೆ ಅವಕಾಶ; ಪರಿಸರ ಜಾಗೃತಿ ಕಾರ್ಯ- ಈ ಎಲ್ಲ ಚಟುವಟಿಕೆಗಳಿಗೆ ಮುಕ್ತಾವಕಾಶವಿದೆÀ.

ನಿರ್ವಹಣಾ ಸಮಿತಿ

ಸೂಕ್ಷ್ಮ ಪರಿಸರ ತಾಣದ ಉಸ್ತುವಾರಿಗೆ ಕೇಂದ್ರ ಸರಕಾರವು ನಿರ್ವಹಣಾ ಸಮಿತಿ ರಚಿಸದೆ. ಈ ಸಮಿತಿಯ ಅಧ್ಯಕ್ಷರಾಗಿ ಮೈಸೂರಿನ ಪ್ರಾದೇಶಿಕ ಆಯುಕ್ತರನ್ನು ನೇಮಿಸದೆ. ಸದಸ್ಯ ಕಾರ್ಯದರ್ಶಿಯಾಗಿ ಮಡಿಕೇರಿ ವನ್ಯ ಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಯವರನ್ನು ನೇಮಿಸಿದೆ. ಸದಸ್ಯರುಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕರು, ಕರ್ನಾಟಕ ಸರಕಾರದ ಪರಿಸರ ಇಲಾಖೆಯಿಂದ ಓರ್ವ ಪ್ರತಿನಿಧಿ, ರಾಜ್ಯ ಸರಕಾರದ ಪೌರಾಭಿವೃದ್ಧಿ ಇಲಾಖೆಯ ಓರ್ವ ಪ್ರತಿನಿಧಿ, ರಾಜ್ಯ ಸರಕಾರವು 3 ವರ್ಷಗಳಿಗೆ ನೇಮಿಸಿಕೊಳ್ಳಬೇಕಾದ ಸರ್ಕಾರೇತರ ಪರಿಸರ ಸಂಘಟನೆಗಳ ಓರ್ವ ಪ್ರತಿನಿಧಿ, ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ, ಸರ್ಕಾರವು 3 ವರ್ಷಗಳಿಗೆ ನೇಮಿಸಿಕೊಳ್ಳುವ ಯಾವದಾದರೂ ಖ್ಯಾತ ವಿಶ್ವ ವಿದ್ಯಾಲಯ ಅಥವ ವಿದ್ಯಾಸಂಸ್ಥೆಗಳ ಓರ್ವ ಪರಿಸರ ತಜ್ಞ, ರಾಜ್ಯ ಜೀವ ವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ ಅಥವಾ ಅವರ ಓರ್ವ ಪ್ರತಿನಿಧಿ ಈ ಸಮಿತಿಯಲ್ಲಿರುತ್ತಾರೆ.