ಕುಶಾಲನಗರ, ಜೂ. 7: ದಿಡ್ಡಳ್ಳಿ ನಿರಾಶ್ರಿತರಿಗೆ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಪುನರ್ವಸತಿ ಕೇಂದ್ರಗಳಲ್ಲಿ ಶಾಶ್ವತ ಮನೆ ನಿರ್ಮಾಣದ ಯೋಜನೆಗೆ ಚಾಲನೆ ನೀಡಲಾಗಿದೆ. ಅಂದಾಜು ರೂ 4 ಲಕ್ಷ ವೆಚ್ಚದಲ್ಲಿ 358 ಮನೆಗಳನ್ನು ನಿರ್ಮಿಸಲು ಸರಕಾರದಿಂದ ಅನುಮೋದನೆ ದೊರೆತಿದ್ದು ಮಾದರಿ ಮನೆವೊಂದನ್ನು ಎರಡು ಶಿಬಿರಗಳಲ್ಲಿ ನಿರ್ಮಿಸಲಾಗಿದೆ.ಈ ಮನೆ 30x30 ಅಡಿ ವಿಸ್ತೀರ್ಣದ ಜಾಗದಲ್ಲಿ ನಿರ್ಮಾಣಗೊಳ್ಳುತ್ತಿದ್ದು 1 ವರಾಂಡ, 1 ಬೆಡ್‍ರೂಂ, 1 ಅಡುಗೆ ಕೋಣೆ, 1 ಬಾತ್‍ರೂಂ ಮತ್ತು ಶೌಚಗೃಹವನ್ನು ಒಳಗೊಂಡಿದೆ. ಮೇಲ್ಚಾವಣಿಗೆ ಮಂಗಳೂರು ಹಂಚನ್ನು ಅಳವಡಿಸಲಾಗುತ್ತಿದೆ. ಕಿಟಕಿ, ಬಾಗಿಲು ಹಾಗೂ ಛಾವಣಿಗಳನ್ನು ಕಬ್ಬಿಣದಲ್ಲಿ ನಿರ್ಮಿಸಲಾಗಿದೆ.

ಬಸವನಹಳ್ಳಿ ಪುನರ್ವಸತಿ ಕೇಂದ್ರದಲ್ಲಿ 182 ಮನೆಗಳು ಮತ್ತು ಬ್ಯಾಡಗೊಟ್ಟ ಶಿಬಿರದಲ್ಲಿ 176 ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಮಾದರಿ ಕಟ್ಟಡವನ್ನು ಈಗಾಗಲೆ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಶಾಶ್ವತ ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ.

ಪ್ರತಿ ಮನೆಗೆ ರೂ 4 ಲಕ್ಷ ವೆಚ್ಚವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜ ಮಾಹಿತಿ ನೀಡಿದ್ದಾರೆ. ಮನೆ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು ಕೆಲಸ ಪೂರೈಸಲು ಕಾಲಾವಕಾಶ ನಿಗದಿಗೊಳಿಸಲಾಗಿದೆ. ವಿದ್ಯುಚ್ಛಕ್ತಿ, ನೀರು ಪೂರೈಕೆ, ರಸ್ತೆ, ಚರಂಡಿ ಮತ್ತಿತರ ಮೂಲಭೂತ ಕಾಮಗಾರಿಗಳು ಕೂಡ ನಡೆಯುತ್ತಿದೆ.

ಪ್ರಸಕ್ತ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಲಾಗಿದ್ದು ಶಾಶ್ವತ ಮನೆಗಳು ಪೂರ್ಣಗೊಳ್ಳುವ ತನಕ ಈ ಶೆಡ್‍ಗಳಲ್ಲಿ ನಿರಾಶ್ರಿತರು ಆಶ್ರಯ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿಡ್ಡಳ್ಳಿಯಿಂದ ತೆರವುಗೊಳಿಸಿದ ನಿರಾಶ್ರಿತರು ಇದೀಗ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಿದ್ದು ನೆಮ್ಮದಿಯ ನೆಲೆ ದೊರಕಿರುವ ಬಗ್ಗೆ ನಿಟ್ಟುಸಿರು ಬಿಡುತ್ತಿದ್ದಾರೆ. ಬಹುತೇಕ ನಿರಾಶ್ರಿತರ ಮುಖದಲ್ಲಿ ಆತಂಕ ಮರೆಯಾಗಿ ನೆಮ್ಮದಿಯ ನಗೆ ಕಾಣುವಂತಾಗಿದೆ.

ಈ ಎರಡೂ ಪುನರ್ವಸತಿ ಶಿಬಿರಗಳನ್ನು ರಾಜ್ಯದಲ್ಲಿಯೇ ಮಾದರಿ ಶಿಬಿರಗಳನ್ನಾಗಿ ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಶಿಬಿರಕ್ಕೆ ಭೇಟಿ ನೀಡಿ 1 ದಿನದ ವಾಸ್ತವ್ಯ ಹೂಡಿದ್ದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ತಿಳಿಸಿದ್ದಾರೆ. ಸದÀ್ಯದಲ್ಲಿಯೇ ಎಲ್ಲಾ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರಗಳನ್ನು ನೀಡಲು ಕ್ರಮಕೈಗೊಳ್ಳಲಾಗುವದು ಎಂದು ಅವರು ಹೇಳಿದ್ದಾರೆ.

ಈ ಪುನರ್ವಸತಿ ಕೇಂದ್ರಗಳ ಅಭಿವೃದ್ಧಿ ಬಗ್ಗೆ ಸ್ವತಃ ಮುಖ್ಯಮಂತ್ರಿಗಳು ಕಾಳಜಿ ಹೊಂದಿದ್ದು ದಿನನಿತ್ಯದ ಆಗುಹೋಗುಗಳ ಬಗ್ಗೆ ಬೆಂಗಳೂರಿನಿಂದಲೇ ವರದಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೆಲವು ಸಮಯ ಗೊಂದಲದ ನಡುವೆ ದಿಡ್ಡಳ್ಳಿ ನಿರಾಶ್ರಿತರು ಸಿಲುಕಿ ತಮ್ಮ ನೆಲೆ ಬಗ್ಗೆ ಚಿಂತೆಯೊಂದಿಗೆ ಹೋರಾಟಗಳು ಕೂಡ ನಡೆದಿರುವದನ್ನು ಇಲ್ಲಿ ಸ್ಮರಿಸಬಹುದು.

ಕೊಡಗು ಜಿಲ್ಲಾಡಳಿತ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಸಮರೋಪಾದಿಯ ಕೆಲಸ ನಿರ್ವಹಿಸುವದರೊಂದಿಗೆ ಜಿಲ್ಲೆಯ ಬಹುದೊಡ್ಡ ಸಮಸ್ಯೆಯೊಂದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.