ಮಡಿಕೇರಿ, ಜೂ. 7: ಯುವ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ನಿರ್ಮಿಸಲಾಗಿರುವ ‘ಯುವ ಭವನ’ ಇನ್ಯಾವದೋ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಮಹಿಳೆಯರಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಸ್ಥಾಪನೆಯಾಗಿರುವ ಮಹಿಳಾ ಕಾಲೇಜಿಗೆ ಕಟ್ಟಡವಿಲ್ಲದೆ ಸೊರಗುತ್ತಿದೆ.., ಇತ್ತ ಯುವ ಭವನಕ್ಕೂ ಮುಕ್ತಿಯಿಲ್ಲ. ವಿದ್ಯಾರ್ಥಿನಿಯರಿಗೂ ನೆಲೆಯಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಯುವ ಭವನಕ್ಕಾಗಿ ಯುವಪಡೆ ಬೀದಿಗಿಳಿದಿದ್ದರೆ, ಇತ್ತ ಯುವ ಭವನ ಇಲ್ಲವಾದರೆ ವಿದ್ಯಾರ್ಥಿನಿಯರ ಪಾಡೇನು ಎಂಬ ಚಿಂತೆ ಕಾಡತೊಡಗಿದೆ.
ಕೊಡಗು ಜಿಲ್ಲಾ ಯುವ ಒಕ್ಕೂಟದ ವತಿಯಿಂದ ಯುವ ಚಟುವಟಿಕೆಗಳಿಗಾಗಿ ಭವನವೊಂದನ್ನು ನಿರ್ಮಿಸುವ ಉದ್ದೇಶದೊಂದಿಗೆ ಸರಕಾರದೊಂದಿಗೆ ವ್ಯವಹರಿಸಿ ಸುದರ್ಶನ ಅತಿಥಿಗೃಹದ ಬಳಿ 10 ಸೆಂಟ್ ನಿವೇಶನ ಲಭಿಸಿದೆ. ರಾಜ್ಯ ಯುವಜನ ಮೇಳದಲ್ಲಿ ಉಳಿಕೆಯಾದ ರೂ. 1 ಲಕ್ಷ ಹಣ ಹಾಗೂ ಆಗಿನ ಸಂಸದ ಡಿ.ವಿ. ಸದಾನಂದ ಗೌಡ ಅವರ ಅನುದಾನದ ರೂ. 1 ಲಕ್ಷ, ಯುವ ಒಕ್ಕೂಟದವರು ಸಂಗ್ರಹಿಸಿದ ಹಣ ಸೇರಿಸಿ ಒಟ್ಟು ರೂ. 5.25 ಲಕ್ಷದಲ್ಲಿ ಅಡಿಪಾಯ
(ಮೊದಲ ಪುಟದಿಂದ) ಹಾಕಿ ಪಿಲ್ಲರ್‍ಗಳನ್ನು ಹಾಕಲಾಗಿತ್ತು. ನಂತರದಲ್ಲಿ ಆಗಿನ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಅವರ ಅವಧಿಯಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಮೂಲಕ ರೂ. 31 ಲಕ್ಷ ಅನುದಾನ ಬಿಡುಗಡೆಗೊಂಡಿತು. ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ವಹಿಸಲಾಯಿತು.
2009ರಲ್ಲಿ ಕಾಮಗಾರಿ ಕೈಗೆತ್ತಿಕೊಂಡ ಭೂಸೇನಾ ನಿಗಮ ಆಮೆಗತಿಯಲ್ಲಿ ಕೆಲಸ ಮಾಡಿ 2013ರಲ್ಲಿ ಪೂರ್ಣಗೊಳಿಸಿತು. ಕಳಪೆ ಕಾಮಗಾರಿಗೆ ಹೆಸರಾಗಿರುವ ಭೂಸೇನಾ ನಿಗಮದ ಕಾಮಗಾರಿ ಇಲ್ಲಿಯೂ ಪರಿಪೂರ್ಣವಾಗಿಲ್ಲ. ನೀಲ ನಕಾಶೆಯಂತೆ ನಿರ್ಮಿಸದೆ ಬೇಕಾಬಿಟ್ಟಿ ನಿರ್ಮಿಸಿ ತನ್ನ ಕಾರ್ಯ ಪೂರೈಸಿತು.
ಹಸ್ತಾಂತರವಾಗಿಲ್ಲ
ಕಾಮಗಾರಿ ಸಮರ್ಪಕವಾಗಿಲ್ಲದ ಕಾರಣ ಯುವಜನ ಸೇವಾ ಇಲಾಖೆ ಹಾಗೂ ಯುವ ಒಕ್ಕೂಟದವರು ಭವನವನ್ನು ಭೂಸೇನಾ ನಿಗಮದಿಂದ ಪಡೆದುಕೊಂಡಿರಲಿಲ್ಲ. ಕೀಲಿಕೈ ಭೂಸೇನಾ ನಿಗಮದವರ ಬಳಿಯೇ ಇತ್ತು. ಇದೇ ಸಂದರ್ಭದಲ್ಲಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳ ಪ್ರಯತ್ನದಿಂದ ಜಿಲ್ಲೆಗೆ ಮಹಿಳಾ ಕಾಲೇಜು ಮಂಜೂರಾಯಿತು. ಕಾಲೇಜು ಕಟ್ಟಡ ನಿರ್ಮಾಣಕ್ಕೆಂದು ರೂ. 2 ಕೋಟಿ ಅನುದಾನ ಕೂಡ ಬಿಡುಗಡೆ ಯಾಯಿತು. ಆದರೆ ಕಟ್ಟಡ ನಿರ್ಮಿಸಲು ಜಾಗವಿಲ್ಲದ್ದರಿಂದ ಸಮಸ್ಯೆ ಎದುರಾಯಿತು. ಆಗ ಕಣ್ಣಿಗೆ ಬಿದ್ದದ್ದು ‘ಯುವ ಭವನ’..!
6 ತಿಂಗಳ ಒಪ್ಪಂದ
ತಾತ್ಕಾಲಿಕವಾಗಿ ಯುವಭವನ ವನ್ನು ಬಿಟ್ಟುಕೊಡುವಂತೆ ಪ್ರಸ್ತಾಪ ಮಾಡಲಾಯಿತು. ಆದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಇದಕ್ಕೆ ಸಮ್ಮತಿಸದೆ ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೆ ಭವನ ಬಿಟ್ಟುಕೊಡಲು ಸಾಧ್ಯವಿಲ್ಲವೆಂದು ಪತ್ರ ಬರೆದರು. ಯುವ ಒಕ್ಕೂಟದವರೂ ಕೂಡ ಸಮ್ಮತಿಸದೇ ಇದ್ದಾಗ ಆಗಿನ ಅಪರ ಜಿಲ್ಲಾಧಿಕಾರಿ ಪ್ರಸನ್ನ ಅವರು ಭೂಸೇನಾ ನಿಗಮದವರನ್ನು ಕರೆಸಿ ಭವನವನ್ನು ಮಹಿಳಾ ಕಾಲೇಜಿಗೆ ನೀಡಿದರು. ಈ ಸಂದರ್ಭ ಯುವ ಒಕ್ಕೂಟದವರು ತೀವ್ರ ವಿರೋಧ ವ್ಯಕ್ತಪಡಿಸಿದ ಸಂದರ್ಭ ಶಾಸಕ ಅಪ್ಪಚ್ಚು ರಂಜನ್ ಅವರು ಮಧ್ಯಸ್ಥಿಕೆ ವಹಿಸಿ ಮನವೊಲಿಸಿ 6 ತಿಂಗಳಮಟ್ಟಿಗೆ ಭವನ ಬಿಟ್ಟುಕೊಡುವಂತೆ ಮನವಿ ಮಾಡಿದರು. ಹಾಗಾಗಿ 6 ತಿಂಗಳಮಟ್ಟಿಗೆ ಮೂರು ವರ್ಷದ ಹಿಂದೆ ಯುವ ಭವನವನ್ನು ಮಹಿಳಾ ಕಾಲೇಜಿಗೆ ಬಿಟ್ಟುಕೊಡಲಾಗಿತ್ತು.
ಎಲ್ಲರ ನಿರ್ಲಕ್ಷ್ಯ
ನಂತರದಲ್ಲಿ ಕಾಲೇಜಿನ ಪ್ರಾಂಶುಪಾಲರಾಗಲೀ, ಜಿಲ್ಲಾಡಳಿತ ವಾಗಲೀ, ಜನಪ್ರತಿನಿದಿ üಗಳಾಗಲೀ ಕಾಲೇಜಿಗೆ ಜಾಗ ಹುಡುಕುವ, ಕಟ್ಟಡ ನಿರ್ಮಿಸುವ ಗೋಜಿಗೆ ಹೋಗಲಿಲ್ಲ. ಭವನ ಇಂದು ಅಥವಾ ನಾಳೆ ಸಿಗಬಹುದೆಂದು ಕಾಯುತ್ತಾ ಕುಳಿತಿದ್ದ ಯುವ ಒಕ್ಕೂಟದವರು ತಮ್ಮ ಕಾರ್ಯ ಚಟುವಟಿಕೆಗಳನ್ನು ಬಾಡಿಗೆ ಸಭಾಂಗಣದಲ್ಲಿ ನಡೆಸಿಕೊಂಡು ಬಂದರು. ಆದರೆ ಭವನ ತಮ್ಮ ಕೈಸೇರುವ ಸೂಚನೆ ಕಂಡು ಬಾರದೇ ಇದ್ದಾಗ ಭವನಕ್ಕಾಗಿ ಬೇಡಿಕೆಯಿಟ್ಟರು. ಅಲ್ಲಿಂದ ಎಲ್ಲರೂ ಕೊಂಚ ಎಚ್ಚೆತ್ತುಕೊಂಡಂತೆ ಕಂಡುಬಂದಿತು.
ಬ್ಲಾಸಂ ಶಾಲೆ ನೀಡಿದರು.
ಅಲ್ಲಿ ಇಲ್ಲಿ ಜಾಗ ಹುಡುಕಾಡುತ್ತಲೇ ಇರುವಾಗ ಜಿಲ್ಲಾಡಳಿತದಿಂದ ತಾತ್ಕಾಲಿಕವಾಗಿ ಸನಿಹವೇ ಇರುವ ಬ್ಲಾಸಂ ಶಾಲೆಯಲ್ಲಿ ಎರಡು ಕೊಠಡಿಗಳನ್ನು ಒದಗಿಸಲಾಯಿತು. ಇಲ್ಲಿ ದುಡುಕಿದ ಕಾಲೇಜಿನ ಪ್ರಾಂಶುಪಾಲರು ಬ್ಲಾಸಂ ಶಾಲೆಗೆ ತೆರಳಿ ಕೊಠಡಿಯನ್ನು ಕೂಡಲೇ ಬಿಟ್ಟುಕೊಡುವಂತೆ ಒತ್ತಾಯಿಸಿ ಬೀಗ ಹಾಕಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಬ್ಲಾಸಂ ಶಾಲಾ ಆಡಳಿತ ಕೊಠಡಿ ಒದಗಿಸಲು ನಿರಾಕರಿಸಿದ್ದರಿಂದ ಅದೂ ಕೂಡ ಕೈಬಿಟ್ಟು ಹೋಯಿತು.
ಹೋರಾಟದ ನಡೆ
ಶಾಸಕ ಅಪ್ಪಚ್ಚು ರಂಜನ್ ಮಾದಾಪುರ ರಸ್ತೆ, ಅಬ್ಬಿಫಾಲ್ಸ್ ರಸ್ತೆ, ರಾಜಾಸೀಟ್ ಹಿಂಭಾಗ ಹೀಗೆ ಮೂರ್ನಾಲ್ಕು ಕಡೆಗಳಲ್ಲಿ ಜಾಗ ಗುರುತಿಸಿದರಾದರೂ ಅದು ಮಹಿಳಾ ಕಾಲೇಜಿಗೆ ರಕ್ಷಣೆಯಿಲ್ಲದ ಸ್ಥಳವೆಂಬ ಕಾರಣದಿಂದ ಯಾವದೂ ಸರಿದೂಗಿ ಬರುತ್ತಿಲ್ಲ. ಇದೀಗ ಯುವ ಪಡೆ ಹೋರಾಟಕ್ಕಿಳಿದಿದೆ. ಹೋರಾಟಕ್ಕೆ ಎಲ್ಲ ಕಡೆಗಳಿಂದಲೂ ಬೆಂಬಲ ವ್ಯಕ್ತಗೊಳ್ಳುತ್ತಿದೆ. ಆದರೆ ಜಿಲ್ಲಾಡಳಿತ ವಾಗಲೀ, ಜನಪ್ರತಿನಿಧಿ ಗಳಾಗಲೀ ಈ ಬಗ್ಗೆ ಯಾವದೇ ಕ್ರಮಕ್ಕೆ ಮುಂದಾದಂತೆ ಕಂಡುಬರುತ್ತಿಲ್ಲ. ವಿದ್ಯಾರ್ಥಿನಿಯರ ಭವಿಷ್ಯದ ಬಗ್ಗೆಯೂ ಚಿಂತನೆ ಹರಿಸಿದಂತೆ ಕಂಡು ಬರುತ್ತಿಲ್ಲ...!
- ಕುಡೆಕಲ್ ಸಂತೋಷ್