ಕುಶಾಲನಗರ, ಜೂ. 6 : ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಅರಣ್ಯ ಇಲಾಖೆಯ ನೌಕರನನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಕುಶಾಲನಗರ ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ವಿನೋದ್ ಕುಮಾರ್ ಎಂಬಾತ ಎಸಿಬಿ ಬಲೆಗೆ ಸಿಲುಕಿದ್ದಾರೆ.ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ಬಿಡಿಸಲು ಲಾರಿ ಚಾಲಕನಿಂದ ರೂ 20 ಸಾವಿರ ನಗದು ಲಂಚವಾಗಿ ಸ್ವೀಕರಿಸುತ್ತಿದ್ದ ಆರೋಪದಡಿ ಬಂಧಿಸಲಾಗಿದೆ ಎಂದು ಎಸಿಬಿ ಡಿವೈಎಸ್ಪಿ ಶಾಂತಮಲ್ಲಪ್ಪ ಮಾಹಿತಿ ನೀಡಿದ್ದಾರೆ.
(ಮೊದಲ ಪುಟದಿಂದ) ಶಿರಂಗಳ್ಳಿ ಮಾದಾಪುರದ ನಂಜಪ್ಪ ಎಂಬವರಿಗೆ ಸೇರಿದ ಲಾರಿಯೊಂದನ್ನು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಅಕ್ರಮ ಮರ ಸಾಗಾಟ ಆರೋಪದಡಿ ಅರಣ್ಯ ಇಲಾಖೆ ವಶಪಡಿಸಿಕೊಂಡಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ವಶಪಡಿಸಿಕೊಂಡ ಲಾರಿಯನ್ನು ಬಿಡಿಸಲು ಕಡತ ವಿಲೇವಾರಿಗೆ ರೂ 25 ಸಾವಿರ ಬೇಡಿಕೆ ಇಟ್ಟಿದ್ದ ವಿನೋದ್ಕುಮಾರ್ ಲಾರಿ ಚಾಲಕ ವಿನೋದ್ ಎಂಬವರಿಂದ ಮಂಗಳವಾರ ಸಂಜೆ ರೂ 20 ಸಾವಿರ ಪಡೆಯುತ್ತಿದ್ದ ಸಂದರ್ಭ ಎಸಿಬಿ ತಂಡ ಕಾರ್ಯಾಚರಣೆ ನಡೆಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರು ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ ಎಂದು ಡಿವೈಎಸ್ಪಿ ಶಾಂತಮಲ್ಲಪ್ಪ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್ಪೆಕ್ಟರ್ಗಳಾದ ಗಂಗಾಧರ, ಮಂಜು, ಸಿಬ್ಬಂದಿಗಳಾದ ದಿನೇಶ್, ಸಜನ್, ಲೋಹಿತ್, ಪ್ರವೀಣ್, ರಾಜೇಶ್, ದೀಪಿಕಾ ಅವರುಗಳು ಪಾಲ್ಗೊಂಡಿದ್ದರು.