ಮಡಿಕೇರಿ, ಜೂ. 7: “ಬನ್ನಿ, ನಾಳೆಗಾಗಿ ಗಿಡ ನೆಡೋಣ” ಎಂಬ ಘೋಷವಾಕ್ಯದೊಂದಿಗೆ ವಿಜಯ ಕರ್ನಾಟಕ ಆರಂಭಿಸಿರುವ “ಹಸಿರುಯಾನ” ಕಾರ್ಯಕ್ರಮಕ್ಕೆ ಜಿಲ್ಲೆಯ ಹಲವೆಡೆಗಳಲ್ಲಿ ಗಿಡ ನೆಟ್ಟು ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಡಿಕೇರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ಸರಕಾರಿ ಪ್ರೌಢ ಶಾಲೆಯಲ್ಲಿ ಹಸಿರುಯಾನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಚಾಲನೆ ನೀಡಿ, ಪತ್ರಿಕೆಯ ಸಾಮಾಜಿಕ ಕಳಿಕಳಿಯನ್ನು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ, ಮಾಧ್ಯಮಗಳಲ್ಲಿ ಈ ರೀತಿಯ ಬದಲಾವಣೆಯಿಂದ ಸಮಾಜಕ್ಕೆ ಸಾಕಷ್ಟು ಪ್ರಯೋಜನವಾಗುತ್ತದೆ. ಇಂದು ಪ್ರಕೃತಿಯನ್ನು ರಕ್ಷಿಸಲು ತೀವ್ರ ಪ್ರಯತ್ನ ನಡೆಯಬೇಕಿದೆ. ಇಂದು ಬರಗಾಲದಿಂದ ತತ್ತರಿಸುವಂತಾಗಿದೆ. ಇದಕ್ಕೆ ಪ್ರಕೃತಿ ನಾಶವೇ ಕಾರಣ. ಯುವ ಜನತೆ ಎಚ್ಚೆತ್ತುಕೊಂಡು ನಾಳೆಯ ಉತ್ತಮ ಭವಿಷ್ಯಕ್ಕಾಗಿ ಗಿಡಗಳನ್ನು ನೆಟ್ಟು ಅವುಗಳನ್ನು ರಕ್ಷಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಪ್ರಕೃತಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಆಗಬೇಕು ಎಂದು ಹೇಳಿದರು.

ಗ್ರೀನ್ ಸಿಟಿ ಫೆÇೀರಂನ ಸಂಚಾಲಕ ಚೆಯ್ಯಂಡ ಸತ್ಯ ಅವರು ಪರಿಸರ ರಕ್ಷಣೆಯ ಪ್ರತಿಜ್ಞೆಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಡಿಎಫ್‍ಒ ಎಂ.ಎಂ. ಜಯ, ಅರಣ್ಯ ಇಲಾಖೆಯ ಪೂರ್ಣಿಕಾರಾಣಿ, ಮುಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಬಿಇಒ ಗಾಯತ್ರಿ, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಸಾವಿತ್ರಿ, ಮುಖ್ಯೋಪಾಧ್ಯಾಯರಾದ ಗುರುರಾಜ್, ಗ್ರೀನ್ ಸಿಟಿ ಪದಾಧಿಕಾರಿಗಳಾದ ಕುಕ್ಕೇರ ಜಯ ಚಿಣ್ಣಪ್ಪ, ಅಂಬೆಕಲ್ ನವೀನ್ ಕುಶಾಲಪ್ಪ, ವಕೀಲ ರತನ್ ತಮ್ಮಯ್ಯ ಮುಂತಾದವರು ಉಪಸ್ಥಿತರಿದ್ದರು.