ಮಡಿಕೇರಿ, ಜೂ.7 : ಜಿಲ್ಲೆಯ ನಾನಾ ಭಾಗಗಳ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ನಿವೇಶನ ಹಾಗೂ ವಸತಿ ರಹಿತ ಆದಿವಾಸಿ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಹೇಳಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಪಂಗಡ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆಯ ಅನುದಾನದಲ್ಲಿ ಅರಣ್ಯ ಅಂಚಿನ, ಅರಣ್ಯ ವಾಸಿಗಳಿಗೆ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಹಕ್ಕು ಪತ್ರ ನೀಡಿದವರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಸಂಬಂಧ ಬಿಡುಗಡೆಯಾದ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.
ಸದ್ಯ ಲೈನ್‍ಮನೆಗಳಲ್ಲಿ ವಾಸಿಸುವ ವಸತಿ ಹಾಗೂ ನಿವೇಶನ ರಹಿತ ಆದಿವಾಸಿಗಳ ಕುಟುಂಬಗಳನ್ನು ಗುರುತಿಸಿ 30x40 ಅಡಿ ಅಳತೆಯ ನಿವೇಶನ ಹಂಚಿಕೆ ಮಾಡಲು ಯೋಚಿಸಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಹೆಗ್ಗಳ, ಬಿರುನಾಣಿ, ಹುದಿಕೇರಿ, ತೆರಾಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 60 ಎಕರೆ ಭೂಮಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ವಸತಿ ಹಾಗೂ ನಿವೇಶನ ರಹಿತ ಸುಮಾರು 900 ರಿಂದ ಒಂದು ಸಾವಿರ ಆದಿವಾಸಿ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡ ಬಹುದಾಗಿದೆ. ಆ ದಿಸೆಯಲ್ಲಿ ಸಾಧ್ಯವಾದಷ್ಟು ಶೀಘ್ರ ಪ್ರಕ್ರಿಯೆ ಆರಂಭಿಸುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಿಡುಗಡೆಯಾಗಿರುವ ಅನುದಾನದಲ್ಲಿ ಇದುವರೆಗೆ ಅರಣ್ಯದಂಚಿನ ಆದಿವಾಸಿ ಹಾಡಿಗಳಲ್ಲಿ ಯಾವದೇ ಇಲಾಖೆಯಿಂದ ಕಾಮಗಾರಿ ನಡೆಯದಿರುವ ಬಗ್ಗೆ ಖಚಿತಪಡಿಸಿಕೊಂಡು ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಲು ಸಭೆಯಲ್ಲಿ ಅನುಮೋದಿಸಲಾಯಿತು.
ಜಿಲ್ಲೆಯ ಪೈಸಾರಿ ಜಾಗದಲ್ಲಿ ವಾಸಿಸುವ ಆದಿವಾಸಿ ಹಾಡಿಗಳಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದಿರುವ ಬಗ್ಗೆ ಮಾಹಿತಿಗಳು ಕೇಳಿ ಬರುತ್ತವೆ. ಈ ಸಂಬಂಧ ಸೆಸ್ಕ್ ಅಧಿಕಾರಿಗಳ ಜೊತೆಗೂಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಿತಿ ಸದಸ್ಯರು ಹಾಗೂ ಜಿ.ಪಂ.ಸದಸ್ಯ ಕೆ.ಕೆ.ಕುಮಾರ ಅವರು ಮಡಿಕೇರಿ ತಾಲೂಕಿನ ಕಕ್ಕಬೆ, ಭಾಗಮಂಡಲ ಭಾಗದ ಆದಿವಾಸಿಗಳು ವಾಸಿಸುವ ಪ್ರದೇಶಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಅವರು ಆಧುನಿಕ ಯುಗದಲ್ಲಿಯೂ ವಿದ್ಯುತ್ ಸಂಪರ್ಕ ನೀಡದಿದ್ದರೆ ಹೇಗೆ, ಪೈಸಾರಿ ಜಾಗದಲ್ಲಿ ವಾಸಿಸುವ ಎಲ್ಲಾ ಹಾಡಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಮತ್ತೊಬ್ಬ ಸದಸ್ಯೆ ಪಂಕಜ ಮಾತನಾಡಿ ತಿತಿಮತಿ ಸೇರಿದಂತೆ ವಿವಿಧ ಹಾಡಿಗಳ ಆದಿವಾಸಿಗಳಿಗೆ ಟಾರ್ಪಲ್ ವಿತರಿಸುವಂತಾಗಬೇಕು, ಮಳೆಗಾಲವಾದ್ದರಿಂದ ಆದಿವಾಸಿಗಳಿಗೆ ಟಾರ್ಪಲ್ ಅಗತ್ಯ ಎಂದು ಮನವಿ ಮಾಡಿದರು. ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ ಅವರು ಕ್ರೀಯಾಯೋಜನೆ ಅನುಮೋದನೆ ಬಗ್ಗೆ ಹಲವು ಮಾಹಿತಿ ನೀಡಿದರು.
ಬಳಿಕ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಈಗಾಗಲೇ ನಿರ್ಮಿಸಲಾಗುತ್ತಿರುವ ಮನೆಗಳ ನಿರ್ಮಾಣದ ಪ್ರಗತಿ, ಟಾಟಾ ಗೂಡ್ಸ್ ಆಟೋ ವಿತರಿಸಲು ಫಲಾನುಭವಿಗಳನ್ನು ಆಯ್ಕೆ ಮಾಡುವದು, ಸ್ವ ಉದ್ಯೋಗ ಕಾರ್ಯಕ್ರಮದಡಿ ವಿವಿಧ ತರಬೇತಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಮತ್ತಿತರ ಚರ್ಚೆ ನಡೆಯಿತು.
ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಸ್ವ ಉದ್ಯೋಗ ಪಡೆಯುವಂತಾಗಲು ಹೆಸರು ನೋಂದಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಮಿತಿ ಸದಸ್ಯರು ಹಾಗೂ ಐಟಿಡಿಪಿ ಇಲಾಖೆ ಅಧಿಕಾರಿಗಳಿಗೆ ಸಲಹೆ ಮಾಡಿದರು. ಎಸ್.ಎನ್.ರಾಜಾರಾವ್ ಮಾತನಾಡಿ ಜೇನುಕುರುಬರ ಸಮಾವೇಶ ಆಯೋಜಿಸಲು ತ್ವರಿತ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಮನವಿ ಮಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕೃಷ್ಣರಾಜು, ಸಮಿತಿ ಸದಸ್ಯರಾದ ಜೆ.ಕೆ.ರಾಮು, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಚೆನ್ನಬಸವಯ್ಯ, ರಾಮೇಗೌಡ, ಚಂದ್ರಶೇಖರ, ಗಿರಿಜನ ಕಲ್ಯಾಣ ವಿಸ್ತರಣಾಧಿಕಾರಿಗಳಾದ ಲೋಹಿತ್, ನವೀನ್ ಕುಮಾರ್, ರಂಗನಾಥ ಇತರರು ಇದ್ದರು.