ಗೋಣಿಕೊಪ್ಪಲು, ಜೂ. 8: ಕೊಡವ ಕುಲಶಾಸ್ತ್ರೀಯ ಅಧ್ಯಯನಕ್ಕೆ ಕೇಂದ್ರ ಸರ್ಕಾರದ ಸೂಚನೆ ಮೇರೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಮುಂದಾದರೂ ಹಲವು ಕುಟುಂಬಗಳು ಸಮರ್ಪಕ ವಾದ ಮಾಹಿತಿ ನೀಡದಿರುವ ಹಿನ್ನೆಲೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಉತ್ತರ ನೀಡಿದ್ದಾರೆ.ಕೊಡಗು ಜಿಲ್ಲೆಯ ಪ್ರಮುಖ ಜನಾಂಗವಾದ ಕೊಡವರ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಸರ್ವೆ ನಡೆಸಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯ ಸರ್ಕಾರವು 1.12.2016 ರಂದು ಆದೇಶ ಹೊರಡಿಸಿ ದ್ದರೂ, ಇದುವರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸರ್ವೆ ಕಾರ್ಯ ಪ್ರಾರಂಭಿಸಿರುವದಿಲ್ಲ. ಕೇಂದ್ರ ಸರ್ಕಾರದ ಸೂಚನೆಯಂತೆ ಕೊಡವ ಸಮುದಾಯ ಕುಲಶಾಸ್ತ್ರೀಯ ಅಧ್ಯಯನವನ್ನು ಪ್ರಾರಂಭಿಸುವ ವಿಚಾರವಾಗಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಕೇಳಿದ ಪ್ರಶ್ನೆಗೆ ಸಚಿವ ಆಂಜನೇಯ ಉತ್ತರ ನೀಡಿದ್ದಾರೆ.

ಕೊಡಗು ಜಿಲ್ಲೆಯ ಕೊಡವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಈ ಬಗ್ಗೆ ಜಿಲ್ಲೆಯ ಸಂಘಟನೆಗಳು ಹಾಗೂ ಪ್ರಮುಖರು ವಿರೋಧ ವ್ಯಕ್ತಪಡಿಸಿ, ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಗಳು ಪ್ರಸಾರವಾಗತೊಡಗಿದವು; ಕ್ಷೇತ್ರ ಕಾರ್ಯಕೈಗೊಂಡ ಮಾಹಿತಿ ಸಂಗ್ರಹಕಾರರಿಗೆ ಸಹ ಸಮರ್ಪಕವಾದ ಮಾಹಿತಿಯನ್ನು ಕುಟುಂಬಗಳು ನೀಡದ ಹಿನ್ನೆಲೆಯಲ್ಲಿ ಸದರಿ ವಿಷಯವು ಅತೀ ಸೂಕ್ಷ್ಮವೆಂದು ಪರಿಗಣಿಸಿ ಅಧ್ಯಯನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸಚಿವ ಆಂಜನೇಯ ಸ್ಪಷ್ಟಪಡಿಸಿದ್ದಾರೆ.