*ಗೋಣಿಕೊಪ್ಪಲು, ಜೂ. 8: ಕಳೆದ ಕೆಲವು ತಿಂಗಳುಗಳಿಂದ ಕಾಡಿನಿಂದ ನಾಡಿಗೆ ಬಂದು ಗಾಯದ ನೋವಿನಿಂದ ನರಳುತ್ತ ಕೆರೆ ನೀರಿನ ಆಶ್ರಯ ಪಡೆದಿದ್ದ ಕಾಡು ಹೆಣ್ಣಾನೆಗೆ ವೈದ್ಯರ ಚಿಕಿತ್ಸೆ ಲಭಿಸಿ ಕೊನೆಗೂ ಈ ‘ಗಜಗೌರಿ’ಗೆ ಮುಕ್ತಿ ಸಿಕ್ಕಂತಾಗಿದೆ.

ಬಾಳೆಲೆ ಸಮೀಪದ ಮಲ್ಲೂರು ಕುಂಬಾರಕಟ್ಟೆ ಕಾಡಂಚಿನ ಕೆರೆಯಲ್ಲಿ ಆನೆ ಬೀಡುಬಿಟ್ಟಿತ್ತು. ಮೂರು ದಿನಗಳಿಂದ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ನೀರಿನಿಂದ ಮೇಲೆಳದ ಆನೆ ಮತ್ತಿಗೋಡು ಸಾಕಾನೆ ಶಿಬಿರದ ಆನೆಗಳಾದ ಅಭಿಮನ್ಯು, ಕೃಷ್ಣ, ಗೋಪಾಲಕೃಷ್ಣ, ದ್ರೋಣ, ಭೀಮ ಸಹಾಯದಿಂದ ನೀರಿನಿಂದ ಮೇಲೆತ್ತಿ ಚಿಕಿತ್ಸೆ ನೀಡಲಾಗಿದೆ.

40 ವರ್ಷದ ಹೆಣ್ಣಾನೆ ಆನೆ ಕಾಲು ಹಾಗೂ ಬೆನ್ನಿನ ಭಾಗದ ಗಾಯದ ನೋವಿನಿಂದ ನರಳುತ್ತಿತ್ತು. ನೋವನ್ನು ಶಮನ ಮಾಡಿಕೊಳ್ಳಲು ನೀರು ಹಾಗೂ ಕೆರೆಯ ಕೆಸರಿನ ಆಶ್ರಯ ಪಡೆದುಕೊಂಡಿತ್ತು. ಆರಣ್ಯಾಧಿಕಾರಿಗಳು ಆನೆಗೆ ಚಿಕಿತ್ಸೆ ನೀಡಲು ನೀರಿನಿಂದ ಮೇಲೆತ್ತಲು ಪ್ರಯತ್ನಿಸಿದರೂ ಹಲವು ಬಾರಿ ವಿಫಲತೆಯೇ ಎದುರಾಗಿತ್ತು. ಕೊನೆಗೂ ಸಾಕಾನೆಗಳಿಗೆ ಶರಣಾದ ಆನೆ ನೀರಿನಿಂದ ಮೇಲೆ ಬಂದು ವೈದ್ಯರ ಚಿಕಿತ್ಸೆಗೆ ಸ್ಪಂದಿಸಿದೆ.

ಡಾ|| ಉಮಾಶಂಕರ್ ಆನೆಯ ಗಾಯಗಳಿಗೆ ಔಷಧಿ ಸಿಂಪಡಿಸಿದರು. ನಂತರ ನಿಯಂತ್ರಣ ಕಳೆದುಕೊಂಡ ಆನೆಗೆ ಗ್ಲೂಕೋಸ್ ನೀಡಿದರು. ಆದರೆ, ಆನೆ ಚಿಕಿತ್ಸೆಗೆ ಒಗ್ಗಿಕೊಳ್ಳುತ್ತಿಲ್ಲ. ಹಲವು ದಿನಗಳಿಂದ ಸಾಕಷ್ಟು ಆಹಾರ ಸೇವನೆ ಮಾಡದ ಕಾರಣ ನಿತ್ರಾಣ ಗೊಂಡಿದೆ. ಹೀಗಾಗಿ ಶೀಘ್ರವಾಗಿ ಚಿಕಿತ್ಸೆಗೆ ಚೇತರಿಸಿಕೊಂಡಿಲ್ಲ.

ಬೆಳಿಗ್ಗೆ 11 ಘಂಟಗೆ ನೀರಿನಿಂದ ಮೇಲೆತ್ತಿದ ಆನೆಗೆ ಲೀಟರ್ ಗಟ್ಟಲೆ ಗ್ಲೂಕೋಸ್ ನೀಡಿದರು ಪೂರ್ಣ ವಾಗಿ ಚೇತರಿಸಿಕೊಂಡಿಲ್ಲ. ಗಂಟೆಗೊಮ್ಮೆ ಎದ್ದು ನಿಲ್ಲಲು ಪ್ರಯತ್ನಿಸಿದರು ದೇಹದಲ್ಲಿ ಶಕ್ತಿ ಕುಂದಿದ್ದರಿಂದ ಮೇಲೆಳಲು ಸಾಧ್ಯವಾಗದ ಸ್ಥಿತಿಯಾಗಿದೆ. ಆನೆಯು ಚೇತರಿಸಿಕೊಳ್ಳದಿದ್ದರೆ ಬದುಕುಳಿಯುವ ಸಾಧ್ಯತೆಗಳು ಕಡಿಮೆ ಎಂದು ಆರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆನೆ ಚೇತರಿಸಿಕೊಂಡರೆ ಸಮೀಪದ ಕಲ್ಲಳ ಅರಣ್ಯ ಪ್ರದೇಶಕ್ಕೆ ಬಿಡುವದಾಗಿ ಮಾಹಿತಿ ನೀಡಿದ್ದಾರೆ.

ಚಿತ್ರ ವರದಿ ಎನ್.ಎನ್.ದಿನೇಶ್