ಸುಂಟಿಕೊಪ್ಪ, ಜೂ. 8: 30 ವರ್ಷಗಳಿಂದ ವಾಸವಿದ್ದರೂ ಕುಡಿಯಲು ನೀರಿಲ್ಲ, ರಸ್ತೆಯೂ ಇಲ್ಲ,ಬೀದಿ ದೀಪದ ಸೌಕರ್ಯವೂ ಇಲ್ಲ. ಪಂಚಾಯಿತಿ ಸದಸ್ಯರೇ ಕೆರೆಯ ತಡೆಗೋಡೆಯ ಕಲ್ಲು ಸ್ವಂತಕ್ಕೆ ಕೊಂಡೊಯ್ದಿದ್ದಾರೆ. ಇವೇ ಮೊದಲಾದ ಬೇಡಿಕೆಗಳನ್ನು ಗ್ರಾಮಸ್ಥರು ವಿಶೇಷ ಗ್ರಾಮ ಸಭೆಯ ಮುಂದಿಟ್ಟರು. ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆಯು ಅಧ್ಯಕ್ಷೆ ವಿ.ಆರ್. ರಂಜಿನಿ ಅಧ್ಯಕ್ಷತೆಯಲ್ಲಿ ನಡೆಯಿತು.

ವಿಶೇಷ ಗ್ರಾಮಸಭೆಯನ್ನು 11 ಗಂಟೆಗೆ ನಿಗದಿಪಡಿಸಿದ್ದರೂ 11.45ಕ್ಕೆ ಪ್ರಾರಂಭಿಸಿದಾಗ ಹಾಗೂ ನೋಡಲ್ ಅಧಿಕಾರಿ ಡಾ. ಆನಂದ್ ಸಭೆಗೆ ಬಂದಾಗಲೂ ಗ್ರಾಮಸ್ಥರ ಆಕ್ರೋಶ ವ್ಯಕ್ತವಾಯಿತು.

ಸಭೆಯನ್ನು ನುಂಗಿದ ಕೆರೆ ಕಲ್ಲು; ಅಜೆಂಡಾ ಪ್ರಕಾರ ಸಭೆ ನಡೆಸಲು ಉದ್ಯೋಗ ಖಾತ್ರಿ ಯೋಜನೆಯ ನೋಡಲ್ ಅಧಿಕಾರಿ ಡಾ. ಆನಂದ್ ಮುಂದಾಗುತ್ತಿದ್ದಂತೆ; ಗ್ರಾಮಸ್ಥರಾದ ಶಾಂತು, ಪೊನ್ನ, ಅಭಿಲಾಶ್, ವಿಜಯ, ಸುನೀತ ಶಶಿಕಾಂತ್, ಸಂಪತ್ ಮೊದಲಾದವರು ಸಂಬಾರ ಶೆಟ್ಟಿ ಕೆರೆ ಹೂಳೆತ್ತುವ ಕಾಮಗಾರಿ ಸಂದರ್ಭ ಆ ಕೆರೆಯಲ್ಲಿದ್ದ ಬ್ರಿಟೀಷರ ಕಾಲದ ಕಲ್ಲುಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ. ಈ ಬಗ್ಗೆ ಪಂಚಾಯಿತಿಗೆ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಗಿದೆ. ಪೊಲೀಸರಿಗೂ ದೂರು ನೀಡಿದ್ದೇವೆ. ಪಂಚಾಯಿತಿಯವರು ಏನು ಕ್ರಮ ಕೈಗೊಂಡಿದ್ದಾರೆ ಎಂದು ಉತ್ತರಿಸಬೇಕೆಂದು ವೇದಿಕೆಯತ್ತ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ‘‘ಬೇಲಿಯೇ ಎದ್ದು ಹೊಲ ನುಂಗಿದೆ’’ ಇಂಥವರ ವಿರುದ್ಧ ಏಕೆ ಮೃದು ಧೋರಣೆ ತಾಳಿದ್ದೀರಾ ಎಂದು ಅಧ್ಯಕ್ಷರು ಹಾಗೂ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು.

ಪಿಡಿಓ ಮಧುವತಿ ಈ ಬಗ್ಗೆ ಪ್ರತಿಕ್ರಿಯಿಸಿ, ಈ ವಿಶೇಷ ಗ್ರಾಮ ಸಭೆ ಕಳೆದ ನಂತರ ಅಭಿಪ್ರಾಯ ಸಂಗ್ರಹಿಸಿ ಪಂಚಾಯಿತಿ ಆಸ್ತಿಯ ಕಲ್ಲು ಸಾಗಿಸಿದವರ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ ತೃಪ್ತರಾಗದ ಗ್ರಾಮಸ್ಥರು ಸಭೆಗೆ ಮಾಹಿತಿ ನೀಡಬೇಕೆಂದು ಪಟ್ಟು ಹಿಡಿದರು.

ಮುಖ್ಯ ಅತಿಥಿಗಳಾಗಿದ್ದ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಮಾತನಾಡಿ, ನಾನು ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯ ಸಮ್ಮತವಾಗಿ ಉತ್ತರಿಸಬೇಕಾಗಿದೆ. ಜಿ.ಪಂ. ಅನುದಾನದಲ್ಲಿ ರೂ. 2.60 ಲಕ್ಷ ವೆಚ್ಚದಲ್ಲಿ ಸಂಬಾರಶೆಟ್ಟಿ ಕೆರೆಯ ಹೂಳೆತ್ತುವ ಕಾಮಗಾರಿ ನಡೆಸಲಾಗಿದೆ. ಆದರೆ ಕೆರೆಯಲ್ಲಿದ್ದ ಬ್ರಿಟೀಷರ ಕಾಲದ ಕಲ್ಲುಗಳನ್ನು ಅಕ್ರಮವಾಗಿ ಯಾರ ಗಮನಕ್ಕೂ ತರದೆ ಸಾಗಿಸಲಾಗಿದೆ. ಗ್ರಾ.ಪಂ. ಸದಸ್ಯ ಪಿ.ಎಂ. ಬಿಜು ಅವರ ಮನೆಗೆ ಕಲ್ಲುಗಳನ್ನು ಸತ್ಯ ಎಂಬಾತ ತಂದು ಹಾಕಿರುವದು ತಿಳಿದುಬಂದಿದೆ. ಪಂಚಾಯಿತಿಯವರು ಕ್ರಮ ಕೈಗೊಂಡು ಕಲ್ಲನ್ನು ಮುಟ್ಟುಗೋಲು ಹಾಕಬೇಕೆಂದರು.

ಗ್ರಾಮಸ್ಥರ ಬಿಗಿಹಿಡಿತ; ಸರ್ಕಾರದ ಆಸ್ತಿಯನ್ನು ಕಂಡವರ ಪಾಲಿಗೆ ಬಿಡಬಾರದು. ಗ್ರಾ.ಪಂ. ಸದಸ್ಯರೊಬ್ಬರ ಪ್ರಭಾವದಿಂದ ಮನೆಗೆ ಕಲ್ಲುಗಳನ್ನು ಸಾಗಿಸಲಾಗಿದೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೇವೆ. ಈಗ ಸತ್ಯ ಎಂಬವರು ತಾನೇ ಕಲ್ಲನ್ನು ಅಕ್ರಮವಾಗಿ ಸಾಗಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.

ಆದರಿಂದ ಸದಸ್ಯ ಪಿ.ಎಂ. ಬಿಜು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಗ್ರಾ.ಪಂ. ಸದಸ್ಯ ಬಿಜು, ಸತ್ಯ ಕಲ್ಲನ್ನು ತನ್ನ ಮನೆ ಬಳಿ ಇಳಿಸಿದ್ದಾರೆ. ಅದನ್ನು ವಾಪಾಸು ತೆಗೆದುಕೊಂಡು ಸಂಬಾರಶೆಟ್ಟಿ ಕೆರೆಗೆ ಇಳಿಸುತ್ತೇನೆ. ಆದರೆ ಕೆರೆಯ ತಡೆಗೋಡೆ ನಿರ್ಮಿಸಲು ತನ್ನ ಸಹಕಾರ ಇಲ್ಲ ಎಂದಾಗ ಪರ-ವಿರೋಧ ವಾಕ್ಸಮರ ನಡೆಸಿದ ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓ ಗ್ರಾಮಸ್ಥರ ಹೇಳಿಕೆಗಳನ್ನು ಆಲಿಸಿ, ಪಂಚಾಯಿತಿಗೆ ಸೇರಿದ ಕಲ್ಲುಗಳನ್ನು ಅಕ್ರಮವಾಗಿ ಸಾಗಿಸಿದ ಸತ್ಯ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಲು ಸಮ್ಮತಿಸಿದರು.

ಕೃಷಿ ಇಲಾಖೆಯಿಂದ ಕೊಟ್ಟಿಗೆಗೆ ಅನುದಾನ ನೀಡಿದ್ದು, ಒಟ್ಟಾರೆ ಅದರ ದುರುಪಯೋಗದ ಬಗ್ಗೆ ಗ್ರಾಮಸ್ಥರು ಪ್ರಸ್ತಾಪಿಸಿದಾಗ ಇದರ ಬಗ್ಗೆ ಕ್ರಮ ಕೈಗೊಳ್ಳುವದಾಗಿ ಜನಪ್ರತಿನಿಧಿಗಳು ತಿಳಿಸಿದರು.

ಈ ವಿಶೇಷ ಗ್ರಾಮಸಭೆಯಲ್ಲಿ ತಾ.ಪಂ. ಸದಸ್ಯೆ ಹೆಚ್.ಡಿ. ಮಣಿ, ಗ್ರಾ.ಪಂ. ಕಾರ್ಯದರ್ಶಿ ನಿತ್ಯ, ಸದಸ್ಯರಾದ ಸತೀಶ್, ಪಿ.ಎಂ. ಬಿಜು, ಅಂಬೆಕಲ್ ಚಂದ್ರಶೇಖರ್, ನೋಡಲ್ ಅಧಿಕಾರಿ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಆನಂದ್, ಕೃಷಿ ಅಧಿಕಾರಿ ಪಿ.ಎಸ್. ಬೋಪಯ್ಯ, ಉದ್ಯೋಗ ಖಾತ್ರಿ ಯೋಜನೆಯ ಅಧಿಕಾರಿ ಸಂಪತ್ ಇದ್ದರು.