ಮಡಿಕೇರಿ, ಜೂ. 8: 84 ಲಕ್ಷ ಜೀವರಾಶಿಗಳನ್ನು ದಾಟಿದ ಬಳಿಕ ಪ್ರಾಪ್ತವಾಗುವ ಮನುಷ್ಯ ಜನ್ಮದಲ್ಲಿ ಜೀವನದ ಉದ್ದೇಶವನ್ನು ತಿಳಿದುಕೊಂಡರೆ, ಪ್ರತಿಯೊಬ್ಬರ ಬದುಕು ಸುಂದರವಾಗಲಿದೆ ಎಂದು ಶ್ರೀ ರಾಮಕೃಷ್ಣಾಶ್ರಮ ಕೊಲ್ಕತ್ತಾದ (ಬೇಲೂರು) ಮಠದ ಮತ್ತು ರಾಮಕೃಷ್ಣ ಮಿಷನ್‍ನ ಉಪಾಧ್ಯಕ್ಷರಾಗಿರುವ ಸ್ವಾಮಿ ಗೌತಮಾನಂದ ಮಹಾರಾಜ್ ವಿಶ್ಲೇಷಿಸಿದರು. ಮಠದ ಚೆನ್ನೈ ಶಾಖೆಯ ಅಧ್ಯಕ್ಷರೂ ಆಗಿರುವ ಅವರು, ಶತಮಾನೋತ್ಸವ ಕಂಡಿರುವ ಇಲ್ಲಿನ ವೇದಾಂತ ಸಂಘದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು, ಶಾರದಾಮಾತೆ ಹಾಗೂ ಸ್ವಾಮಿ ವಿವೇಕಾನಂದರ ಚಿತ್ರಪಟ ಅನಾವರಣಗೊಳಿಸಿ ಪೂಜೆ ಸಲ್ಲಿಸುವದರೊಂದಿಗೆ ಆಶೀರ್ವಚನ ನೀಡಿದರು.

ಜಗನ್ಮಾತೆ ಮಹಾಕಾಳಿಯ ಆರಾಧಕರಾಗಿದ್ದ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರ ಸಂಶಯವನ್ನು ದೂರಗೊಳಿಸಿ ನಂಬಿಕೆ ಹುಟ್ಟು ಹಾಕುವ ಮೂಲಕ ಸರಳ ಮಾರ್ಗದಿಂದ ದೈವಭಕ್ತಿಯನ್ನು ಜನಸಾಮಾನ್ಯರಿಗೆ ಕಲಿಸಿಕೊಟ್ಟರೆಂದು ಸ್ವಾಮೀಜಿ ನೆನಪಿಸಿದರು.

ಪರಮಾತ್ಮನು ಸನ್ಮಾರ್ಗದಲ್ಲಿ ಬದುಕು ಕಂಡುಕೊಂಡವರಿಗೆ ಧರ್ಮ, ಅರ್ಥ, ಕಾಮ, ಮೋಕ್ಷವೆಂಬ

(ಮೊದಲ ಪುಟದಿಂದ) ನಾಲ್ಕು ಪುರುಷಾರ್ಥಗಳನ್ನು ಭಕ್ತಿ ಮಾರ್ಗದಲ್ಲಿ ಕರುಣಿಸಲಿದ್ದಾನೆ ಎಂದು ರಾಮಕೃಷ್ಣರು ವಿಜ್ಞಾನಿಗಳ ಸಹಿತ ಸಾಮಾನ್ಯ ಮನುಷ್ಯರಿಗೆ ತೋರಿಸಿದ ಪರಿಣಾಮ, ಇಡೀ ವಿಶ್ವ ಇಂದು ಅವರ ವಿಚಾರಧಾರೆಯನ್ನು ಒಪ್ಪಿಕೊಂಡಿದೆ ಎಂಬದಾಗಿ ಬೊಟ್ಟು ಮಾಡಿದರು. ಮನುಷ್ಯ ಜೀವನದ ಲಕ್ಷ್ಯ ಮೋಕ್ಷ ಸಾಧನೆಯಿಂದ ಪರಮಾತ್ಮನನ್ನು ಕಾಣುವದೇ ಹೊರತು; ಅಡ್ಡ ಮಾರ್ಗದಲ್ಲಿ ಸಂಪಾದನೆ ಅಲ್ಲವೆಂದು ನೆನಪಿಸಿದ ಅವರು, ಅವತಾರ ಪುರುಷರು ಮಾತ್ರ ಈ ಸತ್ಯವನ್ನು ಅರ್ಥೈಸಿಕೊಳ್ಳುವದು ಸಾಧ್ಯವೆಂದು ರಾಮಕೃಷ್ಣರನ್ನು ಉದಾಹರಿಸಿದರು.

ಜ್ಞಾನ - ವಿಜ್ಞಾನ ಎರಡು ಸತ್ಯ

ಆಧ್ಯಾತ್ಮ ಮಾರ್ಗದಿಂದ ಸಂಪಾದಿಸಿಕೊಳ್ಳುವ ಆಂತರ್ಯದ ಜ್ಞಾನ ಹಾಗೂ ಬಾಹ್ಯ ಸಾಧನೆಯಿಂದ ಕಂಡುಕೊಳ್ಳುವ ವಿಜ್ಞಾನ ಎgಡೂ ಕೂಡ ಸತ್ಯವೆಂದು ಪ್ರತಿಪಾದಿಸಿದ ಸ್ವಾಮೀಜಿ, ಎಲ್ಲವೂ ಕೂಡ ಸಾಮೂಹಿಕ ಪರಿಶ್ರಮ ಮತ್ತು ಪರಮಾತ್ಮನಿಂದ ದೊರಕುವದು ಎಂದು ವ್ಯಾಖ್ಯಾನಿಸಿದರು.

ಪ್ರತಿಯೊಬ್ಬರು ತಮ್ಮ ಜೀವನ ಶೈಲಿಯಿಂದ ಬದುಕು ಏನೆಂದು ಅರ್ಥೈಸಿಕೊಳ್ಳಲು ಮುಂದಾದರೆ, ಅವರವರ ಕಾಯಕಕ್ಕೆ ತಕ್ಕಂತೆ ಪರಮಾತ್ಮ ಕರ್ಮಫಲ ಕೊಡುತ್ತಾನೆ ಎಂದರಲ್ಲದೆ, ಸರಳ ಜೀವನದಿಂದ ಆ ಕರ್ಮ ಫಲ ವಿಧಾತನಿಂದ ಮೋಕ್ಷ ಪಡೆಯುವಂತೆ ಸ್ವಾಮೀಜಿ ಕರೆ ನೀಡಿದರು.

ಮನುಷ್ಯನು ಮೋಕ್ಷಕ್ಕೆ ಸಾಧನ ಮಾರ್ಗದಲ್ಲಿ ಬದುಕು ಕಟ್ಟಿಕೊಂಡು, ಜೀವನದ ಮೂಲ ಉದ್ದೇಶದೊಂದಿಗೆ ಗುರಿಯತ್ತ ಸಾಗಲು ಸತ್ಸಂಗ, ಸಾಮೂಹಿಕ ಭಜನೆ, ಕೀರ್ತನೆಗಳಿಂದ ಇಂದಿಗೂ ಸುಲಭವಾಗಿ ಪರಮಾತ್ಮನನ್ನು ಕಂಡುಕೊಳ್ಳುವದು ಸಾಧ್ಯವೆಂದು ಅವರು ತಿಳಿಹೇಳಿದರು. ಗೌತಮಾನಂದ ಮಹಾರಾಜ್ ಅವರಿಗೆ ವೇದಾಂತ ಸಂಘದ ವತಿಯಿಂದ ಗೌರವಿಸಿ ಈ ಸಂದರ್ಭ ಭಿನ್ನವತ್ತ್ತಳೆ ಸಮರ್ಪಿಸಲಾಯಿತು.

ಸಂಘದ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ಸ್ವಾಗತಿಸಿದರು. ರಾಮಕೃಷ್ಣ ಆಶ್ರಮ ಬಳಗದ ಸ್ವಾಮಿ ಆತ್ಮಜ್ಞಾನನಂದಾ ಮಹಾರಾಜ್, ಸ್ವಾಮಿ ಧರ್ಮಾತ್ಮಾನಂದ ಮಹಾರಾಜ್, ಸ್ವಾಮಿ ನಿತ್ಯಸ್ಥಾನಂದ ಮಹಾರಾಜ್ ಸೇರಿದಂತೆ ಇತರ ಸಂತರು, ಭಾರತೀಯ ವಿದ್ಯಾಭವನ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ವೇದಾಂತ ಸಂಘದ ಕಾರ್ಯದರ್ಶಿ ಎ.ಟಿ. ಗೋಪಾಲಕೃಷ್ಣ, ಹಿರಿಯರಾದ ಕೆ.ಪಿ. ಉತ್ತಪ್ಪ ಮೊದಲಾದವರು ಪಾಲ್ಗೊಂಡಿದ್ದರು. ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿಗಳ ಸಹಿತ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ವೇದಾಂತ ಸಂಘದ ಮಾಜಿ ಕಾರ್ಯದರ್ಶಿಗಳಾದ ಕೆ.ಪಿ. ಬಾಲಸುಬ್ರಹ್ಮಣ್ಯ ಭಿನ್ನವತ್ತಳೆ ವಾಚಿಸಿದರೆ, ಚಿ.ನಾ. ಸೋಮೇಶ್ ನಿರೂಪಿಸಿ, ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ತಪೋಜ್ಞಾನನಂದಜೀ ಪೂಜೆ ನೆರವೇರಿಸಿ, ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದ ಮಹಾರಾಜ್ ವಂದಿಸಿದರು.