*ಗೋಣಿಕೊಪ್ಪಲು, ಜೂ. 8: ‘ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ’ ಇದು ನಮ್ಮ ಹಿರಿಯರು ಆಗಾಗ್ಗೆ ಬಳಸುತ್ತಿದ್ದ ಗಾದೆ ಮಾತು. ಈಗ ಇಂತಹ ಗಾದೆ ಮಾತುಗಳು ಕಡಿಮೆಯಾಗಿವೆ. ಅಂದ ಮಾತ್ರಕ್ಕೆ ಧನ ಪಿಶಾಚಿಗಳು ಕಡಿಮೆಯಾಗಿದ್ದಾರೆ ಎಂದರ್ಥವಲ್ಲ. ಹಣಕ್ಕಾಗಿ ಬಾಯಿ ತೆರೆದುಕೊಂಡಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನು ಕಾಣಬೇಕಾದರೆ ಪಾಲಿಬೆಟ್ಟ, ತಿತಿಮತಿ, ಸಿದ್ದಾಪುರ, ಗೋಣಿಕೊಪ್ಪಲು ಭಾಗಗಳಿಗೆ ಬರಬೇಕು. ಗಲ್ಲಿಗಲ್ಲಿಗಳಲ್ಲಿ, ಅಂಗಡಿಗಳ ಕಾರಿಡಾರ್ಗಳಲ್ಲಿ, ಚಹಾ ಹೊಟೇಲ್ಗಳಲ್ಲಿ ಅನ್ಯಾಯದಿಂದ ಹಣ ಸಂಪಾದಿಸುವ ತಂಡವೇ ಇದೆ. ಇವರಿಂದ ಮುಗ್ಧ ಕಾರ್ಮಿಕರು, ಕೃಷಿಕರು, ಬಡವರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ.
ಕೊಡಗಿನಲ್ಲಿ ಕೂಲಿ ಕಾರ್ಮಿಕರಾಗಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರು ಜಿಲ್ಲೆಯವರಾಗಿದ್ದಾರೆ. ಇವರ ಜತೆಗೆ ಇತ್ತೀಚಿಗೆ ಅಸ್ಸಾಂನವರು ಸೇರಿಕೊಂಡಿದ್ದಾರೆ. ಇವರ ಬದುಕು ಕೂಲಿಯನ್ನೇ ಅವಲಂಭಿಸಿದೆ. ಕೂಲಿ ಸಿಕ್ಕಿದರೆ ಆಯ್ತು, ಇಲ್ಲದಿದ್ದರೆ ಬರಿ ಕೈ. ಮಕ್ಕಳನ್ನು ಶಾಲೆಗೆ ಸೇರಿಸಲು, ಬಟ್ಟೆ ಪುಸ್ತಕ ಕೊಳ್ಳಲು, ಇತರ ವೆಚ್ಚಗಳಿಗೆ ಸಾಲ ಮಾಡುವದು ಅನಿವಾರ್ಯವಾಗಿದೆ. ಇಂತಹ ಬಡವರ ಕಷ್ಟವನ್ನು ನೋಡಿಕೊಂಡಿರುವ ಕೇರಳ ಹಾಗೂ ತಮಿಳುನಾಡಿನ ಕೆಲವು ಹಣಕಾಸು ಲೇವಾದೇವಿದಾರರು ಕಷ್ಟದಲ್ಲಿರುವ ಕಾರ್ಮಿಕರಿಗೆ ಮೀಟರ್ ಬಡ್ಡಿ, ದಿನ ಬಡ್ಡಿ, ತಿಂಗಳ ಬಡ್ಡಿಗೆ ಹಣ ನೀಡಿ ಅವರನ್ನು ಶೋಷಿಸುತ್ತಿದ್ದಾರೆ.
ಇತ್ತ ಕಾರ್ಮಿಕರು ಕೂಡ ಅನಿವಾರ್ಯವಾಗಿ ಎಷ್ಟೇ ಬಡ್ಡಿಯಾದರೂ ಚಿಂತೆ ಇಲ್ಲ ಎಂದು ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೋಗ್ಯ ಸುಧಾರಣೆಗೆ, ಆಸ್ಪತ್ರೆ ಖರ್ಚಿಗೆ ಬಡ್ಡಿ ವ್ಯವಹಾರ ನಡೆಸುವವರಿಂದ ಹಣ ಪಡೆದು ಮತ್ತಷ್ಟು ಸಾಲದ ಸುಳಿಗೆ ಬೀಳುತ್ತಿದ್ದಾರೆ. ಮೀಟರ್ ಬಡ್ಡಿ ದಂಧೆ ಪಾಲಿಬೆಟ್ಟ, ಗೋಣಿಕೊಪ್ಪಲು ಸಿದ್ದಾಪುರ ಭಾಗಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಸಾಲ ಕೊಟ್ಟ ಬಡ್ಡಿದಾರರು ತಮ್ಮ ಹಣವನ್ನು ಬಡ್ಡಿ ಸಮೇತ ಅಷ್ಟೇ ನಿರ್ಧಾಕ್ಷಿಣ್ಯದಿಂದ ವಸೂಲಿ ಮಾಡುತ್ತಿದ್ದಾರೆ.
ಇವರ ಬಡ್ಡಿ ದಂಧೆಗೆ ಸಿಲುಕಿದ ಬಡವರು ತಾವು ದುಡಿದ ಕೂಲಿ ಹಣವನ್ನು ಕೇವಲ ಬಡ್ಡಿ ಕಟ್ಟಿ ಮತ್ತಷ್ಟು ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದಾರೆ.
ಹಿಂದೆ ಸಾಲದ ಬಾಧೆಯನ್ನು ಸಹಿಸಿಕೊಳ್ಳಲಾಗದ ರೈತರು ಆತ್ಮಹತ್ಯೆ ದಾರಿ ತುಳಿದಾಗ ಸರ್ಕಾರ ಬಡ್ಡಿಕೋರರ ಮೇಲೆ ಧಾಳಿ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿತ್ತು. ಅವರ ಮೇಲೆ ಮೊಕದ್ದಮೆ ಹಾಕಿ ಕೆಲವರನ್ನು ಜೈಲಿಗೂ ಅಟ್ಟಿತ್ತು. ಆದರೆ ಇದೀಗ ಇಂತಹ ಕ್ರಮ ಕಡಿಮೆಯಾಗಿದೆ.
ಬಡ್ಡಿ ದಂಧೆಕೋರರ ವಿರುದ್ಧ ಕ್ರಮಕೈಗೊಂಡು ಬಡವರನ್ನು ಸಾಲದ ಸುಳಿಯಿಂದ ಪಾರು ಮಾಡಬೇಕಿದೆ. ಪೊಲೀಸರು ಇಂತಹ ಕ್ರಮಕ್ಕೆ ಮುಂದಾಗಲಿ ಎಂಬದು ಸಾರ್ವಜನಿಕರ ಆಗ್ರಹ.
ವರದಿ: ಎನ್.ಎನ್. ದಿನೇಶ್