ಸೋಮವಾರಪೇಟೆ, ಜೂ. 8: ಅನಾಮಧೇಯ ಕರೆಗಳನ್ನು ನಂಬಿ ತಮ್ಮ ಬ್ಯಾಂಕ್ ಮಾಹಿತಿಗಳನ್ನು ನೀಡಿ ಸಾವಿರಾರು ರೂಪಾಯಿ ಕೈಸುಟ್ಟುಕೊಂಡ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅತ್ತಲಿಂದ ಕೇಳಿದ ಮಾಹಿತಿಯನ್ನೆಲ್ಲಾ ನೀಡಿ ಹಣ ಕಳೆದುಕೊಂಡ ನಂತರ ದೂರು ನೀಡುವ ಘಟನೆಗಳೂ ನಡೆದಿವೆ.ಇಂತಹ ಒಂದು ಕರೆ ಬಂದ ಗ್ರಾಹಕರೋರ್ವರು ಅನಾಮಧೇಯ ಕರೆ ಮಾಡಿದ ವ್ಯಕ್ತಿಗೆ ಬ್ಯಾಂಕ್ ಮಾಹಿತಿ ನೀಡದೇ ಸಂಬಂಧಿಸಿದ ಸಂಖ್ಯೆಯ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ವರದಿಯಾಗಿದೆ.

ಇಲ್ಲಿನ ಐಡಿಯಾ ಪಾಯಿಂಟ್‍ನ ಮಾಲೀಕರಾದ ಕಿಬ್ಬೆಟ್ಟ ಗ್ರಾಮದ ಕೆ.ಎಂ. ನೇಮರಾಜ್ ಅವರಿಗೆ ಇಂದು 919609117685 ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಯೋರ್ವ ‘ನಾನು ಬ್ಯಾಂಕ್‍ನಿಂದ ಮಾತನಾಡುತ್ತಿದ್ದು, ತಮ್ಮ ಎಟಿಎಂ ಕಾರ್ಡ್ ತಕ್ಷಣದಲ್ಲೇ ರದ್ದಾಗುತ್ತದೆ. ಈಗಿರುವ ನಿಮ್ಮ ಎಟಿಎಂನ 18 ಸಂಖ್ಯೆಗಳನ್ನು ನೀಡಿದರೆ ಮುಂದಿನ 15 ದಿನಗಳ ಒಳಗೆ ನೂತನ ಎಟಿಎಂ ಕಾರ್ಡ್‍ನ್ನು ಅಂಚೆ ಮೂಲಕ ಮನೆಗೆ ತಲುಪಿಸಲಾಗುತ್ತದೆ’ ಎಂದು ಹೇಳಿದ್ದಾನೆ.

ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದು, ಬೇಸ್ತು ಬಿದ್ದ ಮಂದಿಯ ಬಗ್ಗೆ ಪತ್ರಿಕೆಗಳಲ್ಲಿ ವರದಿ ಗಮನಿಸಿದ್ದ ನೇಮರಾಜ್ ಅವರು ‘ನಾನು ಬ್ಯಾಂಕಿನಲ್ಲಿ ಈ ಬಗ್ಗೆ ವಿಚಾರಿಸುತ್ತೇನೆ. ನಂತರ ನಿಮಗೆ ಕರೆ ಮಾಡುತ್ತೇನೆ’ ಎಂದು ಉತ್ತರಿಸಿದ ಸಂದರ್ಭ ಅತ್ತಲಿನಿಂದ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿ ಮೊಬೈಲ್‍ಕರೆಯನ್ನು ಸ್ಥಗಿತಗೊಳಿಸಿದ್ದಾರೆ.

ನಂತರ ಬ್ಯಾಂಕ್‍ಗೆ ತೆರಳಿ ವಿಚಾರಿಸಿದ ಸಂದರ್ಭ ಈ ಬಗ್ಗೆ ನಮಗೆ ಮಾಹಿತಿಯಿಲ್ಲ; ಅನಾಮಧೇಯ ಕರೆಗಳನ್ನು ನಂಬಬೇಡಿ ಎಂದು ಸಲಹೆ ನೀಡಿದ್ದಾರೆ. “ಒಂದು ವೇಳೆ ನಾನು ನನ್ನ ಎಟಿಎಂ ಕಾರ್ಡ್‍ನ ಸಂಖ್ಯೆಗಳನ್ನು ನೀಡಿದ್ದರೆ ಖಾತೆಯಲ್ಲಿದ್ದ ಹಣವನ್ನು ಕಳೆದುಕೊಳ್ಳುತ್ತಿದ್ದೆ. ಪತ್ರಿಕೆಯ ವರದಿಗಳನ್ನು ಗಮನಿಸಿ ಎಚ್ಚೆತ್ತುಕೊಂಡ ಪರಿಣಾಮ ಬಚಾವಾದೆ” ಎಂದು ನೇಮರಾಜ್ ತಿಳಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಇವರು ಕರೆಬಂದ ಮೊಬೈಲ್ ಸಂಖ್ಯೆಯ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನಾಮಧೇಯ ಕರೆಗಳ ಬಗ್ಗೆ ಗ್ರಾಹಕರು ಎಚ್ಚರ ವಹಿಸಬೇಕೆಂದು ನೇಮರಾಜ್ ಸಲಹೆ ನೀಡಿದ್ದಾರೆ.