ಮಡಿಕೇರಿ, ಜೂ. 8: ರಾಜ್ಯದಲ್ಲಿರುವ ಎಲ್ಲಾ ಬಡವರ್ಗಕ್ಕೆ ಭೂಮಿ ಮತ್ತು ವಸತಿಯ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿ ತಾ. 15 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಮೂರನೇ ಹಂತದ ರಾಜ್ಯ ಮಟ್ಟದ ಹೋರಾಟವನ್ನು ನಡೆಸಲು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನಿರ್ಧರಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಡಿ.ಎಸ್. ನಿರ್ವಾಣಪ್ಪ, ಬೆಳಗಾವಿ ಅಧಿವೇಶನದ ಸಂದರ್ಭ ಸಮಿತಿಯು ಮಂಡಿಸಿದ ಹಕ್ಕೋತ್ತಾಯವನ್ನು ಈಡೇರಿಸುವದಾಗಿ ಭರವಸೆ ನೀಡಿದ್ದ ರಾಜ್ಯ ಸರಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ವೆಂದು ಆರೋಪಿಸಿದರು.

ಬೆಳಗಾವಿಯಲ್ಲಿ ರಾಜ್ಯದ ವಿವಿಧೆಡೆಯ ಸುಮಾರು 3 ಸಾವಿರ ಮಂದಿ ಭೂಮಿ ಮತ್ತು ವಸತಿ ವಂಚಿತರು ಮೂರು ದಿನಗಳ ಕಾಲ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಭಾಷಣ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಬಡಜನರಿಗೆ ಬೇಸಾಯಕ್ಕೆ ಭೂಮಿ ವಾಸಕ್ಕೆ ಮನೆ ನೀಡುವದು ಸರಕಾರದ ಆದ್ಯತೆಯೇ ಹೊರತು ಬಲಾಢ್ಯರಿಗೆ, ಭೂಗಳ್ಳರಿಗೆ ಕಂಪೆನಿಗಳಿಗೆ ನೀಡುವದು ಅಲ್ಲ’ ಎಂದು ಹೇಳಿದ್ದರು. ಆದರೆ ಆರು ತಿಂಗಳು ಕಳೆದಿದ್ದರೂ, ಸರಕಾರ ಯಾವದೇ ಕ್ರಮಕೈಗೊಂಡಿಲ್ಲವೆಂದು ಆರೋಪಿಸಿದರು.

ತಾ. 15 ರಿಂದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಹೋರಾಟದಿಂದ ನ್ಯಾಯ

ಕೊಡಗು ಜಿಲ್ಲೆಯಲ್ಲೂ ಭೂಮಿ ಮತ್ತು ವಸತಿ ವಂಚಿತರ ಪರವಾಗಿ ಸಮಿತಿ ನಡೆಸಿದ ಹೋರಾಟದ ಫಲವಾಗಿ ಇಂದು ದಿಡ್ಡಳ್ಳಿಯ ನಿರಾಶ್ರಿತರಿಗೆ ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿಯಲ್ಲಿ ನಿವೇಶನ ಲಭ್ಯವಾಗಿದೆಯೇ ಹೊರತು ಇದು ಆಡಳಿಗಾರರ ಮತ್ತು ರಾಜಕೀಯ ಪಕ್ಷಗಳ ಪ್ರಯತ್ನದ ಫಲವಲ್ಲ ಎಂದರು. ಜಿಲ್ಲೆಯ ವಸತಿ ರಹಿತ ಬಡವರಿಗೆ ನಿವೇಶನ ನೀಡಲು ಜಿಲ್ಲಾಡಳಿತ ಸುಮಾರು 60 ಎಕರೆ ಜಾಗವನ್ನು ಗುರುತಿಸಿರುವದು ಸ್ವಾಗತಾರ್ಹ ವೆಂದರು.

ಸಮಿತಿಯ ಪ್ರಮುಖ ಹಾಗೂ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸೀನ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಮಾತಿಗೂ ಸರಕಾರ ಬೆಲೆ ನೀಡುತ್ತಿಲ್ಲ ಎಂದು ಕಿಡಿಕಾರಿದರು. ನಾವು ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆಯೇ ಹೊರತು ಭಿಕ್ಷೆಯನ್ನಲ್ಲ. ಆದರೂ ಸರಕಾರ ಅದನ್ನು ನೀಡಲು ಹಿಂದೇಟು ಹಾಕುತ್ತಿದೆ ಎಂದು ಟೀಕಿಸಿದರು.

ಪಾಲೆಮಾಡು ವಸತಿ ರಹಿತರ ಹೋರಾಟ ಸಮಿತಿಯ ಮುಖಂಡ ಕೆ. ಮೊಣ್ಣಪ್ಪ ಮಾತನಾಡಿ, ನಿವೇಶನ ರಹಿತರಿಗೆ ಈಗ ವಾಸವಾಗಿರುವ ಸ್ಥಳಗಳಲ್ಲೇ ಹಕ್ಕುಪತ್ರ ನೀಡುವಂತೆ ಕಂದಾಯ ಸಚಿವರು ಜಿಲ್ಲಾಡಳಿತಕ್ಕೆ ಆದೇಶಿಸಿದ್ದರೂ, ಜಿಲ್ಲಾಡಳಿತ ಅದನ್ನು ಕಡೆಗಣಿಸಿ ಸರಕಾರದ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. 94ಸಿ ಅಡಿ ಯಾವದೇ ಅರ್ಜಿಗಳನ್ನು ವಿಲೇವಾರಿ ಮಾಡದೆ ಬಡಜನರನ್ನು ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸಲಾಗುತ್ತಿದೆ ಎಂದು ಟೀಕಿಸಿದರು.

ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲಾಡಳಿತದ ಕಚೇರಿಗೆ ಮುತ್ತಿಗೆ ಹಾಕುವದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಚಿಂತಕರ ವೇದಿಕೆಯ ಅಲ್ಲಾರಂಡ ವಿಠಲ್ ನಂಜಪ್ಪ ಹಾಗೂ ಹೋರಾಟ ಸಮಿತಿಯ ಪ್ರಮುಖರಾದ ಸಣ್ಣಪ್ಪ ಉಪಸ್ಥಿತರಿದ್ದರು.