ಭಾಗಮಂಡಲ, ಜೂ. 8: ತಲಕಾವೇರಿ ವನ್ಯಧಾಮ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣಕ್ಕೆ ಸೇರ್ಪಡೆಗೊಳಿಸಿ ಬಫರ್ ಜೋನ್ ಮಿತಿಯನ್ನು 1 ಕಿ.ಮೀ. ನಿಂದ 16 ಕಿ.ಮೀ.ವರೆಗೆ ವಿಸ್ತರಿಸಿರುವದನ್ನು ವಿರೋಧಿಸಿ ಭಾಗಮಂಡಲದ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ವತಿಯಿಂದ ತಾ. 9 ರಿಂದ (ಇಂದಿನಿಂದ) ಅನಿರ್ದಿಷ್ಟಾವಧಿ ಬಂದ್‍ಗೆ ಕರೆ ನೀಡಿದ್ದು, ಸಾರ್ವಜನಿಕವಾಗಿ ಬಂದ್‍ಗೆ ಬೆಂಬಲವಿರುವದರಿಂದ ಸಂಪೂರ್ಣ ಬಂದ್ ಆಗಲಿದೆ.ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಆಚರಿಸಲಾಗುವದು. ತಾ. 10 ಹಾಗೂ 11 ರಂದು ಕೂಡ ಬಂದ್ ಮುಂದುವರಿಯಲಿದೆ. ತಾ. 12 ರಂದು ಬಹಿರಂಗ ಸಭೆ ಏರ್ಪಡಿಸಲಾಗಿದ್ದು, ಸಂತೆ ದಿನವಾದ್ದರಿಂದ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬಂದ್ ಆಚರಿಸಿ ಸಭೆ ನಡೆಸಲಾಗುವದು. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತಳೆಯಲಾಗುವದೆಂದು ಸಂಘಟಕರಲ್ಲೊಬ್ಬರಾದ ಕಾಳನ ರವಿ ಮಾಹಿತಿ ನೀಡಿದ್ದಾರೆ.

ವಾಹನಗಳಿಗೆ ಪ್ರವೇಶವಿಲ್ಲ

ಬಂದ್‍ಗೆ ವಾಹನ ಮಾಲೀಕರು, ಚಾಲಕರು, ಆಟೋ ಚಾಲಕರು, ಮಾಲೀಕರ ಸಂಘದವರು ಕೂಡ ಬೆಂಬಲ ನೀಡಿರುವದರಿಂದ ಯಾವದೇ ವಾಹನಗಳ ಸಂಚಾರವಿರುವದಿಲ್ಲ. ಪ್ರವಾಸಿಗರ ವಾಹನಗಳಿಗೂ, ಕ್ಷೇತ್ರಗಳಿಗೆ ತೆರಳುವ ಭಕ್ತರ ವಾಹನಗಳಿಗೂ ಅವಕಾಶವಿರುವದಿಲ್ಲ. ಭಾಗಮಂಡಲ ಪ್ರವೇಶದ್ವಾರದ ಬಳಿ ವಾಹನಗಳನ್ನು ನಿಲ್ಲಿಸಿ, ಭಗಂಡೇಶ್ವರ ಹಾಗೂ ತಲಕಾವೇರಿ ಸನ್ನಿಧಿಗೆ ನಡೆದುಕೊಂಡೇ ಹೋಗಬೇಕಾಗುತ್ತದೆ. ಬಂದ್‍ಗೆ ಅಯ್ಯಂಗೇರಿ, ಕರಿಕೆ, ಚೆಟ್ಟಿಮಾನಿ ಗ್ರಾಮಸ್ಥರು ಬೆಂಬಲಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆಂದು ತಿಳಿದು ಬಂದಿದೆ. -ಸುನಿಲ್